ಮೆಟ್ರೋ, ಇಂಟರ್ನೆಟ್ ಬಂದ್ ಮಾಡಬಹುದು, ಆದರೆ ಪೇಪರ್ ಲೀಕ್ ತಡೆಯಲು ಆಗಲ್ಲ!: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ಪ್ರಧಾನಿ ಮೋದಿ ದೇಶದ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕೆಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಮೆಟ್ರೋ, ಇಂಟರ್ನೆಟ್ ಬಂದ್ ಮಾಡಬಹುದು, ಆದರೆ ಪೇಪರ್ ಲೀಕ್ ತಡೆಯಲು ಆಗಲ್ಲ!: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Image Credit source: PTI

Updated on: Jul 25, 2026 | 12:27 PM

ಮುಖ್ಯಾಂಶಗಳು

  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
  • ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ಖಂಡಿಸಿದ್ದಾರೆ.
  • ಮೆಟ್ರೋ ಇಂಟರ್ನೆಟ್ ಬಂದ್ ಮಾಡಿದರೂ ಪೇಪರ್ ಲೀಕ್ ತಡೆಯಲಾಗಿಲ್ಲವೆಂದು ವಾಗ್ದಾಳಿ.

ನವದೆಹಲಿ, ಜುಲೈ 25: ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪೇಪರ್ ಲೀಕ್ ಖಂಡಿಸಿ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಖಂಡಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಇಟ್ಟಿರುವ ಮೂರು ಪ್ರಮುಖ ಬೇಡಿಕೆಗಳ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಅಥವಾ ಪ್ರಧಾನಿ ಮೋದಿಯವರು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರಿಗೆ ಬೇರೆ ಇಲಾಖೆಯ ಜವಾಬ್ದಾರಿ ಕೊಟ್ಟರೂ ಅದನ್ನು ನಾವು ಸಹಿಸುವುದಿಲ್ಲ, ಅವರು ಸಚಿವ ಸ್ಥಾನದಲ್ಲೇ ಇರಬಾರದು ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ ಅವರು, ಪ್ರಧಾನಿಯವರು ಯಾರ ಸಲಹೆಗಳನ್ನೂ ಕೇಳದೆ ದೇಶದ ವಿದ್ಯಾರ್ಥಿಗಳ ಬಳಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: ಕಠಿಣ ಖಂಡನೆ

ಧರಣಿನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿದ ರಾಹುಲ್ ಗಾಂಧಿ, ಪ್ರತಿಭಟನಾ ಸ್ಥಳದಿಂದ ವಿದ್ಯಾರ್ಥಿಗಳನ್ನು ಪೊಲೀಸರು ಬಲವಂತವಾಗಿ ಓಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ ಹಾಗೂ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ. ಕೇಂದ್ರ ಸರ್ಕಾರವು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ “ನನಗೆ ಟೈಫಾಯ್ಡ್ ಆಗಿದೆ, ಆದರೆ ಪ್ರತಿಭಟನೆ ನಿಲ್ಲಲ್ಲ”: ವೀಡಿಯೋ ಸಂದೇಶದ ಮೂಲಕ CJP ಮುಖ್ಯಸ್ಥ ಅಭೀಜಿತ್ ದೀಪ್ಕೆ ಎಚ್ಚರಿಕೆ

ಪ್ರತಿಭಟನೆಯನ್ನು ಹತೋಟಿಗೆ ತರಲು ಮೆಟ್ರೋ ರೈಲು ಸೇವೆ ಹಾಗೂ ಇಂಟರ್ನೆಟ್ ಬಂದ್ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ, ಆದರೆ ಪೇಪರ್ ಲೀಕ್ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us