ಪ್ರಧಾನಿ ತಾಯಿಗೆ ಅಪಮಾನ: ರಾಹುಲ್ ಗಾಂಧಿ ನೈತಿಕ ದಿವಾಳಿತನಕ್ಕೆ ಇಳಿದಿದ್ದಾರೆ ಎಂದ ಪ್ರಲ್ಹಾದ್​​ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಅವರು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿಗೆ ಅವಮಾನಿಸಿದ ರಾಹುಲ್ ಗಾಂಧಿ ನೈತಿಕ ದಿವಾಳಿತನ ಪ್ರದರ್ಶಿಸಿದ್ದಾರೆ. ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ವೈಯಕ್ತಿಕ ದಾಳಿಗಳು ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂದು ಅವರು ಕಿಡಿಕಾರಿದ್ದಾರೆ.

ಪ್ರಧಾನಿ ತಾಯಿಗೆ ಅಪಮಾನ: ರಾಹುಲ್ ಗಾಂಧಿ ನೈತಿಕ ದಿವಾಳಿತನಕ್ಕೆ ಇಳಿದಿದ್ದಾರೆ ಎಂದ ಪ್ರಲ್ಹಾದ್​​ ಜೋಶಿ
ರಾಹುಲ್​ ಗಾಂಧಿ, ಪ್ರಲ್ಹಾದ್​​ ಜೋಶಿ
Image Credit source: tv9 kannada

Updated on: Sep 20, 2026 | 6:29 PM

ನವದೆಹಲಿ, ಸೆಪ್ಟೆಂಬರ್​​ 20: ‘ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿಯವರನ್ನು ಅವಮಾನಿಸುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೈತಿಕ ದಿವಾಳಿತನಕ್ಕೆ ಇಳಿದಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇದಿಕೆಯನ್ನು ಪ್ರಧಾನಿಯವರ ತಾಯಿಯನ್ನು ಅಪಹಾಸ್ಯ ಮಾಡಲು ಮತ್ತು ಅವಮಾನಿಸಲು ಬಳಸಿಕೊಂಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ತಾಯಿಗೆ ರಾಹುಲ್ ಗಾಂಧಿ ಅಪಮಾನ: ನಡೆದಿದ್ದೇನು?

ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಛತ್ರೋನ್ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಧ್ವನಿಯನ್ನು ಅನುಕರಿಸುವ ಜತೆಗೆ, ಅವರ ದಿವಂಗತ ತಾಯಿಯವರ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ ಎನ್ನಲಾದೆ.

ಪ್ರಲ್ಹಾದ್​​ ಜೋಶಿ ಟ್ವೀಟ್​

ಈ ವೇಳೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆ ಹಾಸ್ಯಕ್ಕೆ ಮುಗುಳ್ನಗುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದ್ದು, ಪ್ರಧಾನಿಯವರ ದಿವಂಗತ ತಾಯಿಗೆ ಎಸಗಲಾದ ಅವಮಾನವನ್ನು ವಿರೋಧಿಸಿ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್​ ಗಾಂಧಿ ವಿರುದ್ಧ ಚಾಟಿ ಬೀಸಿದ ಜೋಶಿ 

‘ದೇಶದ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಪಕ್ಷ ನೈತಿಕವಾಗಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ’ ಎಂದು ಜೋಶಿ ಚಾಟಿ ಬೀಸಿದ್ದಾರೆ. ‘ರಾಹುಲ್ ಗಾಂಧಿ ಅವರು ಜವಾಬ್ದಾರಿಯುತ ವಿಪಕ್ಷ ನಾಯಕ ಎಂಬುದನ್ನೇ ಮರೆತು ವರ್ತಿಸುತ್ತಿದ್ದಾರೆ. ಅವರಲ್ಲಿ ಮಾನವೀಯ ಸಂವೇದನೆ ಮತ್ತು ರಾಜಕೀಯ ಸಂಸ್ಕೃತಿಯ ತೀವ್ರ ಕೊರತೆಯಿದ್ದು, ಸಾಂವಿಧಾನಿಕ ವಿಪಕ್ಷ ನಾಯಕನ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ’ ಎಂದು ಅವರು ಕುಟುಕಿದ್ದಾರೆ.

ವೈಯಕ್ತಿಕ ದಾಳಿ ಭಾರತೀಯ ಸಂಸ್ಕೃತಿಯಲ್ಲ

‘ರಾಜಕೀಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ, ಆದರೆ ಪೋಷಕರನ್ನು ಅವಮಾನಿಸುವುದು ಎಂದಿಗೂ ಸ್ವೀಕಾರಾರ್ಹವಲ್ಲ. ವಿದ್ಯಾರ್ಥಿಗಳ ಸಂವಾದದ ನೆಪದಲ್ಲಿ ಹಿರಿಯರ ವಿರುದ್ಧ ಇಂತಹ ಅವಮಾನಕರ ಹಾಗೂ ಅಗ್ಗದ ಮಾತುಗಳನ್ನಾಡುವುದು ಭಾರತೀಯ ಸಂಸ್ಕೃತಿಯಲ್ಲ. ರಾಜಕೀಯ ಹೋರಾಟಗಳು ಯಾವಾಗಲೂ ನೀತಿ ಮತ್ತು ದೂರದೃಷ್ಟಿಯ ಆಧಾರದ ಮೇಲೆ ನಡೆಯಬೇಕೇ ಹೊರತು, ವೈಯಕ್ತಿಕ ದಾಳಿಗಳ ಮೂಲಕವಲ್ಲ. ರಾಹುಲ್ ಗಾಂಧಿ ಇಂತಹ ಕೃತ್ಯಗಳಲ್ಲಿ ಪದೇ ಪದೇ ಭಾಗಿಯಾಗಿ ಸನಾತನ ಸಂಸ್ಕೃತಿಯ ದೇಶಕ್ಕೆ ಅಪಖ್ಯಾತಿ ತರುತ್ತಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ: ಸರ್​ನೇಮ್ ಕದಿಯಬಹುದು, ಸಂಸ್ಕಾರ ಕದಿಯೋಕಾಗಲ್ಲ: ರಾಹುಲ್ ವಿರುದ್ಧ ಸ್ಮೃತಿ, ಪ್ರಲ್ಹಾದ್ ಜೋಶಿ, ಗಜೇಂದ್ರ ಶೇಖಾವತ್ ಕಿಡಿ

‘ಇಂತಹ ವಿಷಪೂರಿತ ಮತ್ತು ನಿಂದನಾತ್ಮಕ ಮನಸ್ಥಿತಿಯ ಕಾರಣದಿಂದಲೇ ದೇಶದಲ್ಲಿ ಜನತೆ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತ ಬಂದಿದ್ದಾರೆ. ಇವರ ಈ ಹೀನಾಯ ವರ್ತನೆ ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಆಗುತ್ತದೆ’ ಎಂದು ಸಚಿವ ಪ್ರಲ್ಹಾದ್​​ ಜೋಶಿ ಎಚ್ಚರಿಕೆ ನೀಡಿದ್ದಾರೆ.

Shameful And Disgusting: Union Minister Pralhad Joshi Slams Rahul Gandhi And Congress

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:20 pm, Sun, 20 September 26

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us