ಮೇಘಾಲಯ ಹನಿಮೂನ್ ಕೊಲೆ ಪ್ರಕರಣ; ಸೋನಂ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ ಮೊರೆಹೋದ ಮೃತನ ಕುಟುಂಬಸ್ಥರು!

ಹನಿಮೂನ್ (ಮಧುಚಂದ್ರ) ಪ್ರವಾಸದ ವೇಳೆ ನಡೆದ ಮಧ್ಯಪ್ರದೇಶದ ಉದ್ಯಮಿ ರಾಜಾ ರಘುವಂಶಿ ಅವರ ಭೀಕರ ಕೊಲೆ ಪ್ರಕರಣವು ಈಗ ಮಹತ್ವದ ಘಟ್ಟ ತಲುಪಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆತನ ಪತ್ನಿ ಸೋನಂ ರಘುವಂಶಿಗೆ ಮೇಘಾಲಯ ಹೈಕೋರ್ಟ್ ಜಾಮೀನು ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ, ಮೃತನ ಕುಟುಂಬಸ್ಥರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಕೆಳ ನ್ಯಾಯಾಲಯವು ಏಪ್ರಿಲ್ 27 ರಂದು ಮುಖ್ಯ ಆರೋಪಿ ಸೋನಂಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಮೇಘಾಲಯ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದೆ.

ಮೇಘಾಲಯ ಹನಿಮೂನ್ ಕೊಲೆ ಪ್ರಕರಣ; ಸೋನಂ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ ಮೊರೆಹೋದ ಮೃತನ ಕುಟುಂಬಸ್ಥರು!
Raja Raghuvanshi
Image Credit source: x

Updated on: Jul 01, 2026 | 5:03 PM

ಇಂದೋರ್, ಜುಲೈ 1: ಕಳೆದ ವರ್ಷ ಮೇಘಾಲಯದಲ್ಲಿ ತಮ್ಮ ಹನಿಮೂನ್ ಪ್ರವಾಸದ ವೇಳೆ ನಿಗೂಢವಾಗಿ ಕೊಲೆಯಾಗಿದ್ದ ಉದ್ಯಮಿ ರಾಜಾ ರಘುವಂಶಿ (Raja Raghuvanshi) ಅವರ ಕುಟುಂಬಸ್ಥರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ರಾಜಾ ರಘುವಂಶಿಯ ಕೊಲೆಯ ಪ್ರಮುಖ ಆರೋಪಿಯಾಗಿರುವ ಆತನ ಪತ್ನಿ ಸೋನಂ ರಘುವಂಶಿಗೆ ಮಂಜೂರಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಅವರು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಿವಾಸಿಯಾದ ಸೋನಂ ರಘುವಂಶಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಪತಿಯ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಕಳೆದ ಏಪ್ರಿಲ್ 27ರಂದು ಕೆಳ ನ್ಯಾಯಾಲಯವು ಸೋನಂಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಮೇಘಾಲಯ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮೇಘಾಲಯ ಹೈಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪಿನ ಕುರಿತು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಜಾ ಅವರ ಅಣ್ಣ ವಿಪಿನ್ ರಘುವಂಶಿ, “ಸೋನಂಗೆ ಸಿಕ್ಕಿರುವ ಜಾಮೀನನ್ನು ರದ್ದುಗೊಳಿಸಲು ನಾವು ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ಸಲ್ಲಿಸಲಿದ್ದೇವೆ ಮತ್ತು ಶೀಘ್ರದಲ್ಲೇ ಅರ್ಜಿಯನ್ನು ದಾಖಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ” ಎಂದು ತಿಳಿಸಿದ್ದಾರೆ.

ಈ ಪ್ರಕರಣವನ್ನು ಸರ್ಕಾರಿ ಅಭಿಯೋಜಕರು ನಿರ್ವಹಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನ್ಯಾಯಕ್ಕಾಗಿ ತಮ್ಮ ಕುಟುಂಬವು ಸ್ವತಂತ್ರವಾಗಿ ಕಾನೂನು ಹೋರಾಟ ನಡೆಸಲಿದ್ದು, ಖಾಸಗಿ ವಕೀಲರನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಿದರು. ಅಲ್ಲದೆ, ಸೋನಂಳನ್ನು ಬಂಧಿಸುವಾಗ ಆಕೆಗೆ ಬಂಧನದ ಸರಿಯಾದ ಕಾರಣಗಳನ್ನು ತಿಳಿಸದೇ ಮೇಘಾಲಯ ಪೊಲೀಸರು ಇಂತಹ ದೊಡ್ಡ ಕಾನೂನು ಲೋಪವನ್ನು ಹೇಗೆ ಎಸಗಿದರು ಎಂಬುದು ತಮಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕುಟುಂಬಸ್ಥರ ಭೇಟಿಯಿಲ್ಲ, ಪಶ್ಚಾತ್ತಾಪವೂ ಇಲ್ಲ; ಗಂಡನನ್ನು ಕೊಂದು ಜೈಲಿನಲ್ಲಿ 1 ತಿಂಗಳು ಕಳೆದ ಸೋನಂ ರಘುವಂಶಿ

ಜಾಮೀನು ಎತ್ತಿಹಿಡಿದ ಹೈಕೋರ್ಟ್:

ಮೇಘಾಲಯಕ್ಕೆ ಹನಿಮೂನ್‌ಗೆ ಬಂದಿದ್ದಾಗ 2025 ರಲ್ಲಿ ನಡೆದ ಪತಿಯ ಕೊಲೆ ಪ್ರಕರಣದ ಮುಖ್ಯ ಆರೋಪಿ ಸೋನಂ ರಘುವಂಶಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ಮೇಘಾಲಯ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯವು ಏಪ್ರಿಲ್ 27ರಂದು ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಡಬ್ಲ್ಯೂ. ಡಿಯೆಂಗ್ಡೋಹ್ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೈಕೋರ್ಟ್, “ಬಂಧನದ ಕಾರಣಗಳನ್ನು ಆರೋಪಿಗೆ ತಿಳಿಸಿರುವ ವಿಧಾನವನ್ನು ನೋಡಿದರೆ, ಅದು ಬಂಧಿಸುವ ತನಿಖಾ ಸಂಸ್ಥೆಯ ನ್ಯಾಯಾಂಗ ಮನಸ್ಥಿತಿಯ ಸಂಪೂರ್ಣ ಕೊರತೆಯನ್ನು ತೋರಿಸುತ್ತದೆ. ಇದು ಆರೋಪಿಯ ಬಂಧನದ ಪ್ರಕ್ರಿಯೆಗೇ ಪೆಟ್ಟು ನೀಡುತ್ತದೆ. ಹೀಗಾಗಿ, ಬಂಧನದ ಆರಂಭಿಕ ಹಂತದಲ್ಲಿ ತನಗೆ ಯಾವುದೇ ಸೂಕ್ತ ಕಾರಣಗಳನ್ನು ತಿಳಿಸಿಲ್ಲ ಎಂದು ವಾದಿಸಲು ಆರೋಪಿಗೆ ಬಲವಾದ ಅವಕಾಶವಿದೆ” ಎಂದು ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಹನಿಮೂನ್ ವೇಳೆ ಗಂಡ ರಾಜ ರಘುವಂಶಿಯನ್ನು ಕೊಂದಿದ್ದ ಸೋನಮ್ ರಘುವಂಶಿಗೆ ಸಿಕ್ಕೇ ಬಿಟ್ಟಿತು ಜಾಮೀನು

ಏನಿದು ಘಟನೆ?:

ರಾಜಾ ರಘುವಂಶಿ ಮತ್ತು ಸೋನಂ ತಮ್ಮ ಮದುವೆಯ ನಂತರ ಹನಿಮೂನ್‌ಗಾಗಿ 2025ರ ಮೇ 21ರಂದು ಶಿಲ್ಲಾಂಗ್‌ಗೆ ಹೋಗಿದ್ದರು. ಮೇ 26ರಂದು ಅವರು ನಾಪತ್ತೆಯಾಗಿರುವ ವರದಿಗಳು ಹೊರಬಂದವು. ಸ್ಥಳೀಯ ನಿವಾಸಿಗಳೊಂದಿಗೆ ಅಧಿಕಾರಿಗಳು ವ್ಯಾಪಕ ಹುಡುಕಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ದಿನಗಟ್ಟಲೆ ಹುಡುಕಾಟ ನಡೆಸಿದ ನಂತರ, ಜೂನ್ 2ರಂದು ಸೋಹ್ರಾದ ಪ್ರಸಿದ್ಧ ವೇ ಸಾವ್ಡಾಂಗ್ ಜಲಪಾತದ ಸಮೀಪವಿರುವ ಉಂಬ್ಲಾಯ್‌ನ ಅರ್ಲಿಯಾಂಗ್ ರಿಯಾಟ್ ಕುನಾಂಗ್ರಿಮ್ ಎಂಬಲ್ಲಿನ ಆಳವಾದ ಕಂದಕದಲ್ಲಿ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು.

ಪೊಲೀಸ್ ತನಿಖೆಯ ಪ್ರಕಾರ, ಸೋನಂ ರಘುವಂಶಿ ಅವರು ರಾಜ್ ಕುಶ್ವಾಹ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರಿಬ್ಬರು ರಾಜಾನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಮತ್ತು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಈ ಹನಿಮೂನ್ ಪ್ರವಾಸವನ್ನು ಒಂದು ನೆಪವಾಗಿ ಬಳಸಿಕೊಂಡಿದ್ದರು. ಸೋನಂ ಸಮ್ಮುಖದಲ್ಲೇ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ಎಂಬುವವರು ರಾಜಾನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಜನರನ್ನು ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us