ಇಂದು 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಸ್ಥಾನಗಳಿಗೆ ಅವಿರೋಧ ಆಯ್ಕೆ; ಮತ್ತಷ್ಟು ಭದ್ರವಾಗಲಿದೆ ಬಿಜೆಪಿ ಸ್ಥಾನ

Rajya Sabha polls for 37 seats: ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿನ 37 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಪೈಕಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಬಿಹಾರ, ಹರ್ಯಾಣ ಮತ್ತು ಒಡಿಶಾದ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತದಾನವಾಗಬಹುದು.

ಇಂದು 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಸ್ಥಾನಗಳಿಗೆ ಅವಿರೋಧ ಆಯ್ಕೆ; ಮತ್ತಷ್ಟು ಭದ್ರವಾಗಲಿದೆ ಬಿಜೆಪಿ ಸ್ಥಾನ
ರಾಜ್ಯಸಭಾ

Updated on: Mar 16, 2026 | 9:06 AM

ನವದೆಹಲಿ, ಮಾರ್ಚ್ 16: ಇಂದು ಸೋಮವಾರ 10 ರಾಜ್ಯಗಳಲ್ಲಿನ 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ (Rajya Sabha polls) ನಡೆಯುತ್ತಿದೆ. ಈ ಪೈಕಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಉಳಿದ 11 ಅಭ್ಯರ್ಥಿಗಳ ಆಯ್ಕೆಯು ಮತದಾನದ ಮೂಲಕ ನಿರ್ಧಾರ ಆಗಲಿದೆ. ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಆಗಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

ಚುನಾವಣೆ ಎದುರಿಸುತ್ತಿರುವ 37 ರಾಜ್ಯಸಭಾ ಸ್ಥಾನಗಳು

  • ಮಹಾರಾಷ್ಟ್ರ: 7
  • ತಮಿಳುನಾಡು: 6
  • ಪಶ್ಚಿಮ ಬಂಗಾಳ: 5
  • ಬಿಹಾರ: 5
  • ಒಡಿಶಾ: 4
  • ಅಸ್ಸಾಂ: 3
  • ಛತ್ತೀಸ್​ಗ: 2
  • ಹರ್ಯಾಣ: 2
  • ತೆಲಂಗಾಣ: 2
  • ಹಿಮಾಚಲಪ್ರದೇಶ: 1

ಇದನ್ನೂ ಓದಿ: ಒಡಿಶಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; 10 ರೋಗಿಗಳು ಬಲಿ

ರಾಜ್ಯಸಭೆಯಲ್ಲಿ ಬಿಜೆಪಿ ಬಲ ಹೆಚ್ಚಲಿದೆ

234 ಸದಸ್ಯಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟ 134 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಬಳಿ 80 ಸದಸ್ಯಬಲ ಇದೆ. ವಿವಿಧ ಮಸೂದೆಗಳ ಅನುಮೋದನೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೆಚ್ಚಿನ ಸದಸ್ಯಬಲ ಇರುವುದು ಅಗತ್ಯ. ಇವತ್ತಿನ ರಾಜ್ಯಸಭಾ ಚುನಾವಣೆ ಬಳಿಕ ಮೇಲ್ಮನೆಯಲ್ಲಿ ಎನ್​ಡಿಎ ಸದಸ್ಯಬಲ ಮತ್ತಷ್ಟು ಏರಿಕೆ ಆಗಲಿದೆ.

ರಾಜ್ಯಸಭಾ ಚುನಾವಣೆ ಆಗಲಿರುವ 10 ರಾಜ್ಯಗಳಲ್ಲಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಬಹುದು. ಅಲ್ಲಿ ಮತದಾನದ ಅವಶ್ಯಕತೆ ಇರುವುದಿಲ್ಲ. ಶರದ್ ಪವಾರ್, ರಾಮದಾಸ್ ಆಥಾವಳೆ, ತಂಬಿದುರೈ, ಬಾಬುಲ್ ಸುಪ್ರಿಯೋ, ವಿನೋದ್ ತಾವಡೆ, ಅಭಿಷೇಕ್ ಮನು ಸಿಂಘ್ವಿ ಮೊದಲಾದವರು ಅವಿರೋಧವಾಗಿ ರಾಜ್ಯಸಭೆಗೆ ಪ್ರವೇಶ ಮಾಡಲಿದ್ದಾರೆ.

ಒಡಿಶಾ, ಬಿಹಾರ ಮತ್ತು ಹರ್ಯಾಣದಲ್ಲಿ ಪೈಪೋಟಿ

ಒಡಿಶಾ, ಬಿಹಾರ ಮತ್ತು ಹರ್ಯಾಣ ರಾಜ್ಯಗಳಲ್ಲಿನ 11 ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಬಹುದು. ಬಿಹಾರದಲ್ಲಿ ಐದು ಸ್ಥಾನಗಳಿವೆ. ಇದರಲ್ಲಿ ನಾಲ್ಕು ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಜೆಡಿಯುನ ನಿತೀಶ್ ಕುಮಾರ್ ಮತ್ತು ರಾಮನಾಥ್ ಠಾಕೂರ್, ಬಿಜೆಪಿಯ ನಿತಿನ್ ನಬಿನ್ ಮತ್ತು ಶಿವಂ ಕುಮಾರ್ ಗೆಲ್ಲುವ ನಿರೀಕ್ಷೆ ಇದೆ. ಐದನೇ ಸ್ಥಾನಕ್ಕೆ ಎನ್​ಡಿಎನ ಉಪೇಂದ್ರ ಖುಶವಾಹ ಮತ್ತು ವಿಪಕ್ಷಗಳ ಎಡಿ ಸಿಂಗ್ ನಡುವೆ ಪೈಪೋಟಿ ಇರುತ್ತದೆ.

ಇದನ್ನೂ ಓದಿ: ಏಪ್ರಿಲ್ 1ರಿಂದ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಇಲ್ಲಿದೆ ಹೊಸ ದರ

ಒಡಿಶಾದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಬಿಜೆಪಿಯ ಇಬ್ಬರು ಮತ್ತು ಬಿಜೆಡಿಯ ಒಬ್ಬರ ಗೆಲುವು ಖಾತ್ರಿ ಇದೆ. ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಇದೆ.

ಹರ್ಯಾಣದಲ್ಲಿ ಎರಡು ಸ್ಥಾನ ಇದೆ. ಬಿಜೆಪಿಯ ಸಂಜಯ್ ಭಾಟಿಯಾ ಗೆಲುವು ಖಾತ್ರಿ ಇದೆ. ಎರಡನೇ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಪೈಪೋಟಿ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us