ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನಿಷ್ಪಕ್ಷಪಾತ ತನಿಖೆಗೆ ಆರ್​ಎಸ್​ಎಸ್​ ಕರೆ

ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (RSS) ಮೊದಲ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಈ ಬಗ್ಗೆ ಹೇಳಿಕೆ ನೀಡಿದ್ದು, ರಾಮ ಜನ್ಮಭೂಮಿ ಕೋಟ್ಯಂತರ ರಾಮಭಕ್ತರ ಶ್ರದ್ಧೆ, ಆಸ್ಥೆ ಮತ್ತು ಭಕ್ತಿಯ ಕೇಂದ್ರವಾಗಿದೆ. ರಾಮ ಮಂದಿರದ ದಾನ ಪಾತ್ರೆಗಳಿಂದ ಹಣ ಕಳುವಾಗಿರುವ ಘಟನೆಯು ಅತ್ಯಂತ ದುರದೃಷ್ಟಕರ. ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಹಿಂದೂಗಳು ಸಂಯಮದಿಂದ ವರ್ತಿಸಬೇಕೆಂದು ಕರೆ ನೀಡಿದ್ದಾರೆ.

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನಿಷ್ಪಕ್ಷಪಾತ ತನಿಖೆಗೆ ಆರ್​ಎಸ್​ಎಸ್​ ಕರೆ
Dattatreya Hosabale
Image Credit source: PTI

Updated on: Jul 03, 2026 | 4:19 PM

ಮುಖ್ಯಾಂಶಗಳು

  • ರಾಮ ಮಂದಿರಕ್ಕೆ ನೀಡಲಾಗಿದ್ದ ಕೋಟ್ಯಂತರ ರೂ. ದೇಣಿಗೆ ಕಳ್ಳತನ
  • ಈ ಹಗರಣದ ಬಗ್ಗೆ ಆರ್​ಎಸ್​ಎಸ್​ ಮೊದಲ ಪ್ರತಿಕ್ರಿಯೆ
  • ಹಿಂದೂಗಳು ತಾಳ್ಮೆಗೆಡಬೇಡಿ ಎಂದು ಆರ್​ಎಸ್​ಎಸ್​ ಕರೆ

ನವದೆಹಲಿ, ಜುಲೈ 3: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ನಡೆದಿದೆ ಎನ್ನಲಾದ ಕಾಣಿಕೆ ಹಣದ ದುರುಪಯೋಗದ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಕರೆ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದೆ. ರಾಮ ಮಂದಿರ ನಿರ್ಮಾಣಕ್ಕೆ ಭಕ್ತರು ನೀಡಿದ ಚಿನ್ನಾಭರಣ, ಹಣವನ್ನು ಲೂಟಿ ಮಾಡಿರುವುದರ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರ್​ಎಸ್​ಎಸ್​ (RSS) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.

ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ರಾಮ ಮಂದಿರದ ದೇಣಿಗೆ ಕಳ್ಳತನ ತೀವ್ರ ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ದುರ್ಘಟನೆಯಿಂದಾಗಿ ಇಡೀ ಹಿಂದೂ ಸಮಾಜ ಮತ್ತು ಜಗತ್ತಿನಾದ್ಯಂತ ಇರುವ ರಾಮಭಕ್ತರ ಭಾವನೆಗಳಿಗೆ ತೀವ್ರ ಧಕ್ಕೆ ಉಂಟಾಗಿದೆ. ಉತ್ತರ ಪ್ರದೇಶ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡ ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ವಿಶ್ವಾಸವಿದೆ. ಈ ಪ್ರಕರಣದಲ್ಲಿನ ಕಾನೂನು ಕ್ರಮಗಳನ್ನು ಆರ್‌ಎಸ್‌ಎಸ್ ಸ್ವಾಗತಿಸುತ್ತದೆ ಎಂದಿದ್ದಾರೆ.


ರಾಮ ಮಂದಿರದಲ್ಲಿ ನಡೆದ ಈ ಕಳವು ಪ್ರಕರಣದ ತನಿಖೆಯಲ್ಲಿ ಯಾರೆಲ್ಲಾ ದೋಷಿಗಳಾಗಿ ಕಂಡುಬರುತ್ತಾರೋ ಅವರಿಗೆ ಕಠಿಣ ಶಿಕ್ಷೆಯಾಗುವುದನ್ನು ಸರ್ಕಾರ ಖಚಿತಪಡಿಸಬೇಕು ಎಂದು ಹೊಸಬಾಳೆ ಆಗ್ರಹಿಸಿದ್ದಾರೆ. ಮಂದಿರದ ನಿರ್ವಹಣೆಯಲ್ಲಿರುವ ಎಲ್ಲಾ ರೀತಿಯ ನ್ಯೂನತೆಗಳನ್ನು ತಕ್ಷಣವೇ ಪರಿಹರಿಸಬೇಕು. ಅನುಮಾನಗಳನ್ನು ದೂರ ಮಾಡಲು ಟ್ರಸ್ಟ್ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ರಾಮ ಮಂದಿರದ ದಾನದ ಹಣದ ವಿಚಾರದಲ್ಲಿ ಸದ್ಯ ಸೃಷ್ಟಿಯಾಗಿರುವ ಗೊಂದಲದ ಪರಿಸ್ಥಿತಿಯು ಆದಷ್ಟು ಬೇಗ ಕೊನೆಗೊಳ್ಳಬೇಕಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ; 8 ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನ

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ:

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅತ್ಯಂತ ಕಳಕಳಿಯ ವಿನಂತಿಯ ಮೇರೆಗೆ, ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ದಳವನ್ನು (SIT) ರಚಿಸಿದ್ದು, ಅದರ ಶಿಫಾರಸುಗಳ ಆಧಾರದ ಮೇಲೆ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಈ ತನಿಖೆಯ ನಂತರ ತಪ್ಪಿತಸ್ಥರೆಂದು ಕಂಡುಬರುವ ಯಾರೇ ಆದರೂ ಅವರಿಗೆ ಕಠಿಣ ಶಿಕ್ಷೆ ನೀಡುವುದು ಅತ್ಯಗತ್ಯವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಇಡೀ ಹಿಂದೂ ಸಮಾಜವು, ಟ್ರಸ್ಟ್ ಈ ಅತ್ಯಂತ ಖಂಡನೀಯ ಘಟನೆಯನ್ನು ಒಂದು ಅಸಾಧಾರಣ ವಿಷಯವೆಂದು ಪರಿಗಣಿಸಬೇಕು, ರಾಮ ಮಂದಿರದ ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿನ ಎಲ್ಲಾ ಲೋಪದೋಷಗಳನ್ನು ಸರಿಪಡಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರೀಕ್ಷಿಸುವುದು ಸಹಜವಾಗಿದೆ ಎಂದಿದ್ದಾರೆ.

ಅಯೋಧ್ಯಾ ಮಂದಿರದ ಮೇಲಿನ ಕೋಟ್ಯಂತರ ರಾಮಭಕ್ತರ ಶ್ರದ್ಧೆ ಮತ್ತು ಭಕ್ತಿಗಳು ಅಖಂಡವಾಗಿ ಹಾಗೂ ಅಚಲವಾಗಿ ಉಳಿಯುವಂತೆ ಮಾಡಲು ಇದು ಅತ್ಯಂತ ನಿರ್ಣಾಯಕವಾಗಿದೆ. ಪ್ರಸ್ತುತ ಇರುವ ಗೊಂದಲ ಮತ್ತು ಅನಿಶ್ಚಿತತೆಯ ಸ್ಥಿತಿಯು ಕೊನೆಗೊಳ್ಳಬೇಕು. ಈ ನಿಟ್ಟಿನಲ್ಲಿ, ಮಂದಿರದ ಆಡಳಿತ ಮಂಡಳಿ ಮತ್ತು ಸರ್ಕಾರ ನೇಮಿಸಿರುವ ಎಸ್‌ಐಟಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿವೆ ಎಂದು ನಾವು ನಿರೀಕ್ಷಿಸುತ್ತೇವೆ. ಸಮರ್ಪಕ ಹಣಕಾಸು ನಿರ್ವಹಣೆ, ದೋಷರಹಿತ ಮತ್ತು ಪಾರದರ್ಶಕ ಕಾರ್ಯಾಚರಣಾ ವ್ಯವಸ್ಥೆಗಳು ಹಾಗೂ ಪವಿತ್ರತೆ, ಶುದ್ಧತೆ ಮತ್ತು ನೈಜ ಧಾರ್ಮಿಕತೆಯಿಂದ ಕೂಡಿದ ವಾತಾವರಣದ ಮೂಲಕ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಿಂದೂ ಸಮಾಜದ ನಂಬಿಕೆ ಮತ್ತು ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ಭರವಸೆ ನಮಗಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಇದನ್ನೂ ಓದಿ: ನಂಬಿಕೆಯೊಂದಿಗೆ ಆಟವಾಡುವುದನ್ನು ಒಪ್ಪಲಾಗದು; ರಾಮ ಮಂದಿರದ ದೇಣಿಗೆ ಕಳ್ಳತನದ ಕುರಿತು ಸಿಎಂ ಯೋಗಿ ಆಕ್ರೋಶ

ಹಿಂದೂಗಳು ಸಂಯಮದಿಂದ ವರ್ತಿಸಿ:

ಈ ಕಷ್ಟದ ಸಮಯದಲ್ಲಿ ಇಡೀ ಹಿಂದೂ ಸಮಾಜವು ಅಗತ್ಯ ತಾಳ್ಮೆ ಮತ್ತು ಸಂಯಮವನ್ನು ಪ್ರದರ್ಶಿಸಬೇಕು. ಈ ದುರದೃಷ್ಟಕರ ಘಟನೆಯನ್ನು ದುರುಪಯೋಗಪಡಿಸಿಕೊಂಡು ಹಿಂದೂ ಧರ್ಮ ಮತ್ತು ಸಮಾಜವನ್ನು ನಿಂದಿಸಲು ಯತ್ನಿಸುತ್ತಿರುವ ಹಿಂದೂ ವಿರೋಧಿ ಮತ್ತು ದೇಶವಿರೋಧಿ ಶಕ್ತಿಗಳ ಪಿತೂರಿಗಳನ್ನು ಹತ್ತಿಕ್ಕಬೇಕೆಂದು ಆರ್​ಎಸ್​ಎಸ್​ ಕರೆ ನೀಡಿದೆ.

ರಾಮ ಮಂದಿರ ಕಾಣಿಕೆ ಕಳ್ಳತನ ಪ್ರಕರಣ:

ರಾಮ ಮಂದಿರದ ದೇಣಿಗೆ ಹಣ ಕಳ್ಳತನದ ಆರೋಪಗಳು ಉತ್ತರ ಪ್ರದೇಶದಲ್ಲಿ ಭಾರಿ ರಾಜಕೀಯ ಸಂಚಲನವನ್ನು ಮೂಡಿಸಿವೆ. ಅಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಪ್ರಸ್ತುತ, ಈ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಚಂಪತ್ ರಾಯ್ ಅವರ ಆಪ್ತ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ 8 ಜನರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಆರೋಪಿಗಳೆಂದರೆ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Fri, 3 July 26

Follow Us