ಕರ್ನಾಟಕ ಸೇರಿ 7 ರಾಜ್ಯಗಳ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಳ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸು 60ರಿಂದ 62ಕ್ಕೆ ಹೆಚ್ಚಳವಾಗಿದೆ. ಇದು ಸ್ವಯಂಚಾಲಿತವಲ್ಲ; ಹೈಕೋರ್ಟ್ ನ್ಯಾಯಾಧೀಶರ ದಕ್ಷತೆ, ಪ್ರಾಮಾಣಿಕತೆ ಪರಿಶೀಲಿಸಿ ವಿಸ್ತರಣೆ ನೀಡುತ್ತದೆ. ಅನುಭವಿ ಜಡ್ಜ್‌ಗಳ ಸೇವೆಯನ್ನು ಉಳಿಸಿಕೊಂಡು, ನ್ಯಾಯಾಂಗದಲ್ಲಿನ ಖಾಲಿ ಹುದ್ದೆಗಳು ಹಾಗೂ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಇದರ ಪ್ರಮುಖ ಉದ್ದೇಶ.

ಕರ್ನಾಟಕ ಸೇರಿ 7 ರಾಜ್ಯಗಳ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಳ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಸುಪ್ರೀಂಕೋರ್ಟ್​
Image Credit source: The Wire

Updated on: Sep 05, 2026 | 12:54 PM

ನವದೆಹಲಿ, ಸೆಪ್ಟೆಂಬರ್ 05: ಕರ್ನಾಟಕ ಸೇರಿದಂತೆ ದೇಶದ ಏಳು ರಾಜ್ಯಗಳಲ್ಲಿ ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಲಯಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಹೆಚ್ಚಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಕೊರತೆ ನೀಗಿಸಲು ಮತ್ತು ಅನುಭವಿ ಜಡ್ಜ್‌ಗಳ ಸೇವೆಯನ್ನು ಮುಂದುವರೆಸಲು ಈ ಕ್ರಮ ಕೈಗೊಳ್ಳಲಾಗಿದೆ.

ಆದರೆ ಇದು ಎಲ್ಲರಿಗೂ ನೇರವಾಗಿ ಸಿಗುವುದಿಲ್ಲ; 60 ವರ್ಷ ತುಂಬಿದ ನಂತರ ಅವರ ಕೆಲಸ, ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಹೈಕೋರ್ಟ್ ಪರೀಕ್ಷಿಸಿ, ಸಮರ್ಥರಾಗಿರುವ ನ್ಯಾಯಾಧೀಶರಿಗೆ ಮಾತ್ರ ಇನ್ನೂ ಎರಡು ವರ್ಷಗಳ ಕಾಲ ಸೇವಾವಧಿ ವಿಸ್ತರಣೆ ನೀಡಲಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಸಿಕ್ಕಿಂ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈಗಾಗಲೇ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿವೆ. ಈ ಏಳೂ ರಾಜ್ಯಗಳು ತಮ್ಮ ಸೇವಾ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು, ಮುಂದಿನ ಎರಡು ತಿಂಗಳೊಳಗೆ ಅಧಿಕೃತ ಆದೇಶ ಹೊರಡಿಸಬೇಕೆಂದು ನ್ಯಾಯಾಲಯ ತಾಕೀತು ಮಾಡಿದೆ.

ನಿಯಮಗಳು ಅಧಿಕೃತವಾಗಿ ಜಾರಿಗೆ ಬರುವ ಮುನ್ನವೇ 60 ವರ್ಷ ಪೂರೈಸುವ ಅಧಿಕಾರಿಗಳನ್ನು ಕೂಡಲೇ ನಿವೃತ್ತಿಗೊಳಿಸುವಂತಿಲ್ಲ; ಅವರು 62ವರ್ಷದವರೆಗೆ ಸೇವೆಯಲ್ಲಿ ಮುಂದುವರೆ ಯಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.

ಕಾರ್ಯಕ್ಷಮತೆಯ ಪರೀಕ್ಷೆ ಕಡ್ಡಾಯ: 62 ವರ್ಷದವರೆಗೆ ವಿಸ್ತರಣೆ ಪಡೆಯುವುದು ಪ್ರತಿಯೊಬ್ಬ ಅಧಿಕಾರಿಯ ‘ಸ್ವಯಂಚಾಲಿತ ಹಕ್ಕು’ (Automatic Right) ಅಲ್ಲ. 62 ವರ್ಷ ತುಂಬಿದ ತಕ್ಷಣ ಸಂಬಂಧಪಟ್ಟ ರಾಜ್ಯದ ಹೈಕೋರ್ಟ್ ಆ ಅಧಿಕಾರಿಯ ಕಾರ್ಯಕ್ಷಮತೆ, ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಪರಿಶೀಲಿಸುತ್ತದೆ.

ಮತ್ತಷ್ಟು ಓದಿ: ಕನ್ನಡದಲ್ಲಿ ನಟಿಸಿದ್ದ ಈ ವ್ಯಕ್ತಿ ಈಗ ಕರ್ನಾಟಕ ಹೈಕೋರ್ಟ್​ ಜಡ್ಜ್​; 555 ಪ್ರಕರಣ ಆಲಿಕೆ

ದಕ್ಷರಿಗೆ ಮಾತ್ರ ಅವಕಾಶ: ಕೇವಲ ವಯಸ್ಸಿನ ಆಧಾರದಲ್ಲಿ ಎಲ್ಲರಿಗೂ ವಿಸ್ತರಣೆ ನೀಡದೆ, ವ್ಯವಸ್ಥೆಯಲ್ಲಿ ನಿಷ್ಕ್ರಿಯರಾದವರನ್ನು ನಿವೃತ್ತಿಗೊಳಿಸಿ, ಸಮರ್ಥ ಹಾಗೂ ನಿಷ್ಠಾವಂತ ಅಧಿಕಾರಿಗಳ ಸೇವೆಯನ್ನು ಮಾತ್ರ 62ರವರೆಗೆ ಉಳಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ಮಾರ್ಚ್ 31, 2026 ರ ನಂತರ ನಿವೃತ್ತರಾದವರಿಗೆ ಮರು ಅವಕಾಶ: ಈ ಏಳು ರಾಜ್ಯಗಳಲ್ಲಿ ಮಾರ್ಚ್ 31, 2026 ರಂದು ಅಥವಾ ನಂತರ 60 ವರ್ಷ ತುಂಬಿ ನಿವೃತ್ತರಾಗಿರುವ ಅಧಿಕಾರಿಗಳು, ನಿವೃತ್ತಿಯ ನಂತರ ಬೇರೆ ಯಾವುದೇ ಉದ್ಯೋಗ ಕೈಗೊಳ್ಳದಿದ್ದರೆ, ಅವರು ಮರಳಿ ನ್ಯಾಯಾಂಗ ಸೇವೆಗೆ ಮರಳಲು ಮುಕ್ತ ಆಯ್ಕೆ ನೀಡಲಾಗಿದೆ.

ಉಳಿದ ರಾಜ್ಯಗಳಿಗೆ 2 ವಾರಗಳ ಗಡುವು: ಆಂಧ್ರಪ್ರದೇಶ, ಕೇರಳ, ಗುಜರಾತ್, ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಸೇರಿದಂತೆ ಉಳಿದ ರಾಜ್ಯಗಳು ಹಾಗೂ ದೆಹಲಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳು ತಮ್ಮ ನಿಲುವನ್ನು ಮರುಪರಿಶೀಲಿಸಿ, ಎರಡು ವಾರಗಳಲ್ಲಿ ಅನುಸರಣಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಆರ್ಥಿಕ ಹೊರೆಯ ನೆಪ ತಳ್ಳಿಹಾಕಿದ ಪೀಠ: ನಿವೃತ್ತಿ ವಯಸ್ಸು ಹೆಚ್ಚಿಸಿದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುತ್ತದೆ ಎಂಬ ರಾಜ್ಯ ಸರ್ಕಾರಗಳ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಅಧಿಕಾರಿಗಳನ್ನು 60ಕ್ಕೆ ನಿವೃತ್ತಿಗೊಳಿಸಿದರೆ ನಿವೃತ್ತಿ ವೇತನವನ್ನೂ ನೀಡಿ, ಹೊಸಬರಿಗೆ ಸಂಬಳವನ್ನೂ ನೀಡಬೇಕಾಗುತ್ತದೆ. ಆದರೆ 62ರವರೆಗೆ ಮುಂದುವರೆಸಿದರೆ ನಿವೃತ್ತಿ ಸೌಲಭ್ಯಗಳ ಪಾವತಿ ಮುಂದೂಡಲ್ಪಡುತ್ತದೆ ಎಂದು ನ್ಯಾಯಾಲಯ ವಿಶ್ಲೇಷಿಸಿದೆ.

ಪ್ರಸ್ತುತ ನಿವೃತ್ತಿ ವಯಸ್ಸಿನ ಅಸಮಾನತೆ: ಭಾರತದಲ್ಲಿ ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು 65 ವರ್ಷಕ್ಕೆ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು 62 ವರ್ಷಕ್ಕೆ ನಿವೃತ್ತರಾಗುತ್ತಾರೆ. ಆದರೆ ಜಿಲ್ಲಾ ಮತ್ತು ತಾಲೂಕು ಹಂತದ ನ್ಯಾಯಾಧೀಶರು 60ಕ್ಕೇ ನಿವೃತ್ತರಾಗುತ್ತಿದ್ದರು.

ಜಗನ್ನಾಥ ಶೆಟ್ಟಿ ಆಯೋಗದ ಶಿಫಾರಸು: ಈ ಹಿಂದೆ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ಆಯೋಗವು ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು.

ನ್ಯಾಯಾಂಗದಲ್ಲಿ ಬಾಕಿ ಪ್ರಕರಣಗಳ ಸವಾಲು: ದೇಶಾದ್ಯಂತ ಕೆಳ ಹಂತದ ನ್ಯಾಯಾಲಯಗಳಲ್ಲಿ ಕೋಟ್ಯಂತರ ಪ್ರಕರಣಗಳು ಬಾಕಿ ಉಳಿದಿದ್ದು, ಸಾವಿರಾರು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಹೊಸ ನೇಮಕಾತಿಗಳು ವಿಳಂಬವಾಗುತ್ತಿರುವ ಇಂದಿನ ದಿನಗಳಲ್ಲಿ, ಅನುಭವಿ ನ್ಯಾಯಾಧೀಶರನ್ನು ಇನ್ನೂ ಎರಡು ವರ್ಷ ಉಳಿಸಿಕೊಳ್ಳುವುದರಿಂದ ನ್ಯಾಯದಾನ ಪ್ರಕ್ರಿಯೆಯ ವೇಗ ಹೆಚ್ಚಲಿದೆ ಎಂದು ನ್ಯಾಯಾಲಯ ಆಶಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us