ನೀವು ಫೇಮಸ್ ಆಗಲು ನ್ಯಾಯಾಂಗವನ್ನು ವೇದಿಕೆಯಾಗಿ ಬಳಸುತ್ತಿದ್ದೀರಿ: ಜನ್ ಸುರಾಜ್ ಪಕ್ಷಕ್ಕೆ ಸುಪ್ರೀಂ ತರಾಟೆ
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ರದ್ದುಗೊಳಿಸಿ ಹೊಸ ಚುನಾವಣೆಗೆ ಆದೇಶಿಸುವ ಜನ್ ಸುರಾಜ್ ಪಕ್ಷದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪವನ್ನು ಸುಪ್ರೀಂ ಪುರಸ್ಕರಿಸಲಿಲ್ಲ. "ಜನಪ್ರಿಯತೆಗಾಗಿ ನ್ಯಾಯಾಂಗವನ್ನು ವೇದಿಕೆಯಾಗಿ ಬಳಸುತ್ತೀರಿ ಎಂದು ಪಕ್ಷಕ್ಕೆ ಸುಪ್ರೀಂ ತರಾಟೆ ತೆಗೆದುಕೊಂಡಿದೆ. ಪಕ್ಷಕ್ಕೆ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.

ನವದೆಹಲಿ, ಫೆಬ್ರವರಿ 06: ಬಿಹಾರ ವಿಧಾನಸಭಾ ಚುನಾವಣೆಯನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್(Jan Suraaj) ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸಿ ಹೊಸ ಚುನಾವಣೆಗೆ ಆದೇಶಿಸುವ ಕೋರಿಕೆಯ ಕುರಿತು ಯಾವುದೇ ನಿರ್ದೇಶನ ನೀಡಲು ಸಿಜೆಐ ಸೂರ್ಯಕಾಂತ್ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ನಿರಾಕರಿಸಿದೆ.
ನಿಮ್ಮ ರಾಜಕೀಯ ಪಕ್ಷ ಎಷ್ಟು ಮತಗಳನ್ನು ಪಡೆದುಕೊಂಡಿತ್ತು, ಜನರು ನಿಮ್ಮನ್ನು ತಿರಸ್ಕರಿಸುತ್ತಾರೆ ನಂತರ ನೀವು ಜನಪ್ರಿಯತೆ ಪಡೆಯಲು ನ್ಯಾಯಾಂಗ ವೇದಿಕೆ ಬಳಸುತ್ತೀರಿ ಎಂದು ಹೇಳಿದ್ದಾರೆ. ರಾಜಕೀಯ ಪಕ್ಷದ ಒತ್ತಾಯದ ಮೇರೆಗೆ ನಾವು ಇಡೀ ರಾಜ್ಯಕ್ಕೆ ಸರ್ವವ್ಯಾಪಿ ನಿರ್ದೇಶನ ನೀಡಲು ಸಾಧ್ಯವಿಲ್ಲ, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ 10,000 ರೂ.ಗಳನ್ನು ವರ್ಗಾಯಿಸುವ ಮೂಲಕ ಬಿಹಾರ ಸರ್ಕಾರ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದೆ ಎಂದು ಆರೋಪಿಸಿ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಈ ಯೋಜನೆಯು ಮಹಿಳೆಯರಿಗೆ ಸ್ವ-ಉದ್ಯೋಗ ಮತ್ತು ಸಣ್ಣ ವ್ಯವಹಾರಳನ್ನು ಉತ್ತೇಜಿಸಲು 10 ಸಾವಿರ ರೂ.ಗಳ ಆರಂಭಿಕ ಆರ್ಥಿಕ ಅನುದಾನವನ್ನು ಒದಗಿಸುತ್ತದೆ. ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯವು ಚುನಾವಣೆಯ ಮುನ್ನಾದಿನ 15,600 ಕೋಟಿ ರೂ.ಗಳನ್ನು ವಿತರಿಸಿದೆ. ಸಂವಿಧಾನದ 324ನೇ ವಿಧಿ ಮತ್ತು ಜನಪ್ರಾಥಿನಿಧ್ಯ ಕಾಯ್ದೆಯ ಸೆಕ್ಷನ್ 123ರ ಉಲ್ಲಂಘನೆಯಾಗಿ ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮತ್ತಷ್ಟು ಓದಿ: ಬಿಹಾರದಲ್ಲಿ ಅಂತಿಮ ಹಂತದ ಚುನಾವಣೆ, ಜನ್ ಸುರಾಜ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ
ಈ ವಿಷಯ ಕುರಿತು ರಿಟ್ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಪೀಠ ಹೇಳಿದೆ.243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 202 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡರೆ ಇಂಡಿ ಒಕ್ಕೂಟ 35 ಸ್ಥಾನಗಳನ್ನು ಗಳಿಸಿತ್ತು. ಜನ್ ಸುರಾಜ್ ಪಕ್ಷವು ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಯಿತು, ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Fri, 6 February 26
