ಅನಗತ್ಯ ಕಡತ ತೆಗೆದು ಹಾಕುವ ಅಭಿಯಾನ ಮುಕ್ತಾಯ: ರಾಷ್ಟ್ರಪತಿ ಭವನದ ನಾಲ್ಕರಷ್ಟು ಜಾಗ ಕಡತಗಳಿಂದ ಮುಕ್ತಿ!

ಅಕ್ಟೋಬರ್ 31 ರಂದು ಕೊನೆಗೊಂಡ ಬೃಹತ್ ಕಡತ ಸ್ವಚ್ಛತಾ ಅಭಿಯಾನದಲ್ಲಿ ನಾಲ್ಕು ರಾಷ್ಟ್ರಪತಿ ಭವನಗಳಿಗೆ ಸಮನಾದ ಜಾಗವನ್ನು ಸರ್ಕಾರ ಕಡತಗಳಿಂದ ಮುಕ್ತಗೊಳಿಸಿದೆ ಎಂದು ತಿಳಿಸಿದೆ.

ಅನಗತ್ಯ ಕಡತ ತೆಗೆದು ಹಾಕುವ ಅಭಿಯಾನ ಮುಕ್ತಾಯ: ರಾಷ್ಟ್ರಪತಿ ಭವನದ ನಾಲ್ಕರಷ್ಟು ಜಾಗ ಕಡತಗಳಿಂದ ಮುಕ್ತಿ!
ರಾಷ್ಟ್ರಪತಿ ಭವನ
Edited By:

Updated on: Nov 01, 2021 | 9:40 PM

ದೆಹಲಿ: ಪ್ರಧಾನಿ ಮೋದಿ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಅನಗತ್ಯ ಕಡತಗಳನ್ನು ತೆಗೆದು ಹಾಕುವ ಅಭಿಯಾನ ನಡೆಸುತ್ತಿತ್ತು. ಕಳೆದ ತಿಂಗಳು ಪೂರ್ತಿ ನಡೆದ ಕಡತ ತೆಗೆದು ಹಾಕುವ ಅಭಿಯಾನ ಈಗ ಮುಕ್ತಾಯವಾಗಿದೆ. ಇದುವರೆಗೂ ರಾಷ್ಟ್ರಪತಿ ಭವನದ ನಾಲ್ಕು ಪಟ್ಟು ಜಾಗವನ್ನು ಅನಗತ್ಯ ಕಡತಗಳಿಂದ ಮುಕ್ತಗೊಳಿಸಲಾಗಿದೆ. ಅನಗತ್ಯ ಕಡತಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ 40 ಕೋಟಿ ರೂಪಾಯಿ ಆದಾಯ ಬಂದಿದೆ.

ಕೇಂದ್ರ ಸರ್ಕಾರವು ಅಕ್ಟೋಬರ್ ತಿಂಗಳಿನಾದ್ಯಂತ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕಡತ ಯಜ್ಞ ಕೈಗೊಂಡಿತ್ತು. ಅನಗತ್ಯವಾದ ಕಡತಗಳನ್ನು ವಿಲೇವಾರಿ ಮಾಡುವ ಯಜ್ಞವನ್ನು ಕೈಗೊಂಡಿತ್ತು. ಈಗ ಕೇಂದ್ರ ಸರಕಾರಿ ಕಚೇರಿಗಳ ಕಡತ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿದೆ. ಅಕ್ಟೋಬರ್ 31 ರಂದು ಕೊನೆಗೊಂಡ ಬೃಹತ್ ಕಡತ ಸ್ವಚ್ಛತಾ ಅಭಿಯಾನದಲ್ಲಿ ನಾಲ್ಕು ರಾಷ್ಟ್ರಪತಿ ಭವನಗಳಿಗೆ ಸಮನಾದ ಜಾಗವನ್ನು ಸರ್ಕಾರ ಕಡತಗಳಿಂದ ಮುಕ್ತಗೊಳಿಸಿದೆ ಎಂದು ತಿಳಿಸಿದೆ.

ಅನಗತ್ಯ ಕಡತಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ 40 ಕೋಟಿ ರೂಪಾಯಿ ಆದಾಯ
ಕಳೆದ ತಿಂಗಳು ಪ್ರಧಾನಿ ಮೋದಿ ನಿರ್ದೇಶನದ ಬಳಿಕ ವಿಶೇಷ ಅಭಿಯಾನದ ಭಾಗವಾಗಿ ಅಕ್ಟೋಬರ್ 2 ರಿಂದ ಅಕ್ಟೋಬರ್ 31 ರ ನಡುವೆ 13.73 ಲಕ್ಷ ಕಡತಗಳನ್ನು ತೆಗೆದು ಹಾಕುವ ಮೂಲಕ ಸುಮಾರು 8.06 ಲಕ್ಷ ಚದರ ಅಡಿ ಜಾಗವನ್ನು ಅನಗತ್ಯ ಕಡತಗಳಿಂದ ಮುಕ್ತಗೊಳಿಸಲಾಗಿದೆ. ರಾಷ್ಟ್ರಪತಿ ಭವನವು ಸುಮಾರು ಎರಡು ಲಕ್ಷ ಚದರ ಅಡಿ ಇದೆ. ಇದರ ನಾಲ್ಕು ಪಟ್ಟು ಜಾಗವು ಈಗ ಕಡತಗಳಿಂದ ಮುಕ್ತವಾಗಿದೆ. ಸಂಪೂರ್ಣ ಕಡತ ಸ್ವಚ್ಛತಾ ಅಭಿಯಾನದಿಂದ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಸ್ಕ್ರ್ಯಾಪ್ ಅನ್ನು ಸರ್ಕಾರ ಮಾರಾಟ ಮಾಡಿದೆ.

ಈಗ ಕೇಂದ್ರ ಸರ್ಕಾರವು ಹೆಚ್ಚು ಸ್ವಚ್ಛ ಮತ್ತು ವಿಶಾಲವಾದ ಸರ್ಕಾರಿ ಕಚೇರಿಗಳು ಮತ್ತು ಕಟ್ಟಡಗಳನ್ನು ಹೊಂದಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. “ಕಡತ ಸ್ವಚ್ಛತಾ ಅಭಿಯಾನದ ಅನುಷ್ಠಾನದ ಹಂತವು ಅಕ್ಟೋಬರ್ 31 ರಂದು ಕೊನೆಗೊಂಡಿದೆ. ಅಂಕಿಅಂಶಗಳನ್ನು ಸಚಿವಾಲಯಗಳು ನವೆಂಬರ್ 8 ರವರೆಗೆ ನೀಡುತ್ತಾವೆ ಆದಾದ ಬಳಿಕ ಮಾಹಿತಿಯನ್ನು ಅಪ್ ಡೇಟ್ ಮಾಡಲಾಗುತ್ತೆ. ಈ ಅಂಕಿಅಂಶಗಳು ಬೃಹತ್ ಪ್ರಮಾಣದಲ್ಲಿವೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

ಒಟ್ಟು 15.23 ಲಕ್ಷ ಕಡತಗಳನ್ನು ಸರ್ಕಾರಿ ಕಚೇರಿಯಿಂದ ತೆಗೆಯುವ ಗುರಿ ಹೊಂದಿದ್ದು, ನವೆಂಬರ್ 8 ರೊಳಗೆ ಅಂಕಿಅಂಶಗಳನ್ನು ಅಪ್ ಡೇಟ್ ಮಾಡಿದಾಗ ಅದನ್ನು ಸಾಧಿಸಬಹುದು. ಸರ್ಕಾರವು ಈ ಅವಧಿಯಲ್ಲಿ 2.92 ಲಕ್ಷ ಸಾರ್ವಜನಿಕ ಕುಂದುಕೊರತೆಗಳನ್ನು ವಿಲೇವಾರಿ ಮಾಡಿದೆ. ಸುಮಾರು 3.28 ಲಕ್ಷ ಬಾಕಿ ಉಳಿದಿದೆ, ಜೊತೆಗೆ ಉನ್ನತ ಅಧಿಕಾರಿಗಳಿಗೆ ಸಲ್ಲಿಸಿದ ಸುಮಾರು 18,000 ಮೇಲ್ಮನವಿಗಳನ್ನು ವಿಲೇವಾರಿ ಮಾಡಿದೆ.

ಸಂಸದರಿಂದ 8,300 ಬಾಕಿ ಉಳಿದಿರುವ ಉಲ್ಲೇಖಗಳನ್ನು ತೆರವುಗೊಳಿಸಲಾಗಿದೆ ಮತ್ತು 950 ಕ್ಕೂ ಹೆಚ್ಚು ಸಂಸದೀಯ ಭರವಸೆಗಳಿಗೆ ಚಾಲನೆಯಲ್ಲಿ ಪ್ರತಿಕ್ರಿಯಿಸಲಾಗಿದೆ. ಮುಖ್ಯಮಂತ್ರಿಗಳ ಸುಮಾರು 940 ರಾಜ್ಯ ಸರ್ಕಾರದ ಉಲ್ಲೇಖಗಳಿಗೆ ಸಹ ಪ್ರತಿಕ್ರಿಯಿಸಲಾಗಿದೆ. ಸರ್ಕಾರವು ಹೇಳಿದ ಅವಧಿಯಲ್ಲಿ ಸುಮಾರು 5,000 ಸ್ವಚ್ಛತಾ ಡ್ರೈವ್‌ಗಳನ್ನು ನಡೆಸಿದೆ. ನಿಯಮಗಳ ಸರಳೀಕರಣದ ಭಾಗವಾಗಿ 685 ನಿಯಮಗಳು ಅಥವಾ ಪ್ರಕ್ರಿಯೆಗಳನ್ನು ಸರಾಗಗೊಳಿಸಿದೆ.

ಅಕ್ಟೋಬರ್ 27 ರಂದು ಅಭಿಯಾನದ ಪ್ರಗತಿಯನ್ನು ಟಿವಿ9 ವರದಿ ಮಾಡಿತ್ತು. ಎಲ್ಲಾ ಅನಗತ್ಯ ಸರ್ಕಾರಿ ಕಡತಗಳನ್ನು ತೆಗೆದು ಹಾಕಲು ಮತ್ತು ಕಚೇರಿ ಸ್ಥಳವನ್ನು ಮುಕ್ತಗೊಳಿಸಲು ಅಕ್ಟೋಬರ್ 2 ರಿಂದ ಚಾಲನೆಗೆ ಪ್ರಧಾನಿ ಮೋದಿ ಆದೇಶ ನೀಡಿದ್ದರು.

ವರದಿ: ಎಸ್. ಚಂದ್ರಮೋಹನ್, ನ್ಯಾಷನಲ್ ಬ್ಯುರೋ ಮುಖ್ಯಸ್ಥರು, ಟಿವಿ9 ಕನ್ನಡ

ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ನ.26ರವರೆಗೆ ಸಮಯಕೊಟ್ಟ ರೈತ ಸಂಘಟನೆಗಳು; ಗಡುವು ಯಾವುದಕ್ಕೆಂದು ಸ್ಪಷ್ಟನೆಯಿಲ್ಲ !

Published On - 9:39 pm, Mon, 1 November 21