NSA ಅಜಿತ್ ದೋವಲ್ ಉಗ್ರರ ಟಾರ್ಗೆಟ್? ಬಂಧಿತನಿಂದ ಬಯಲಾಯ್ತು ಭಯಾನಕ ವಿಚಾರ..
ಫೆಬ್ರವರಿ 6ರಂದು ಮಲಿಕ್ನನ್ನು ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇತರ ನಾಲ್ಕು ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
ದೆಹಲಿ: ಜಮ್ಮು-ಕಾಶ್ಮೀರದ ಶೋಪಿಯಾನ ನಿವಾಸಿ ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಭಯೋತ್ಪಾದಕ ಹಿದಾಯತ್-ಉಲ್ಲಾ ಮಲಿಕ್ ಬಂಧನದ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಕಚೇರಿ ಮತ್ತು ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸರ್ದಾರ್ ಪಟೇಲ್ ಭವನ ಮತ್ತು ದೆಹಲಿಯ ಇತರ ಉನ್ನತ ಅಧಿಕಾರಿಗಳ ಮನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಮೀಕ್ಷೆ ನಡೆಸಲಾಗಿತ್ತು ಎನ್ನುವ ಮಾಹಿತಿಯನ್ನು ಹಿದಾಯತ್-ಉಲ್ಲಾ ಮಲಿಕ್ ನೀಡಿದ ಬೆನ್ನಲ್ಲೇ ಈ ರೀತಿಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.
ಫೆಬ್ರವರಿ 6ರಂದು ಮಲಿಕ್ನನ್ನು ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇತರ ನಾಲ್ಕು ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಮಲಿಕ್ ಬಂಧನದ ನಂತರ ಆತನ ಬಳಿ ಇದ್ದ ಶಸ್ತ್ರಾಸ್ತ್ರ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿತ್ತು.
ಮಲಿಕ್ನನ್ನು ಪೊಲೀಸರು ನಿರಂತರವಾಗಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆತ ಕೆಲ ಆತಂಕಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದ. ಈತ ಪಾಕಿಸ್ತಾನ ಮೂಲದ ಡಾಕ್ಟರ್ ಹೆಸರಿನ ಕೋಡ್ ವರ್ಡ್ ಹೆಸರಿರುವ ವ್ಯಕ್ತಿ ಜತೆ ಸಂಪರ್ಕ ಹೊಂದಿದ್ದ. ಡಾಕ್ಟರ್ ಆದೇಶದಂತೆ, ಮೇ 24, 2019ರಂದು ಮಲಿಕ್ ವಿಮಾನದ ಮೂಲಕ ದೆಹಲಿಗೆ ತೆರಳಿ ಅಲ್ಲಿ, ಕೆಲ ಪ್ರಮುಖ ಸ್ಥಳಗಳ ಮಾಹಿತಿ ಪಡೆದು ಬಂದಿದ್ದ. ಇದರಲ್ಲಿ, ಅಜಿತ್ ದೋವಲ್ ಕಚೇರಿ ಹಾಗೂ ಮನೆ ಕೂಡ ಸೇರಿತ್ತು.
ದೆಹಲಿಯ ವಿವಿಧ ಸ್ಥಳಗಳ ಪರಿಶೀಲನೆ ಮಾಡಿ ಅದರ ಮಾಹಿತಿಯನ್ನು ಮಲಿಕ್ ಸಾಂಬಾ ಸೆಕ್ಟರ್ ಬಳಿ ಇರುವ ಗಡಿ ಪ್ರದೇಶಕ್ಕೆ ಕೊಂಡು ಹೋಗಿದ್ದ. ಅಲ್ಲಿ ಈ ಮಾಹಿತಿಯನ್ನು ಉಗ್ರರಿಗೆ ಹಸ್ತಾಂತರ ಮಾಡಿದ್ದ. ಇದರ ಜತೆಗೆ ಸಾಕಷ್ಟು ಭಯೋತ್ಪಾದನಾ ಕಾರ್ಯದಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ.
ಇದನ್ನೂ ಓದಿ: NSA ಅಜಿತ್ ದೋವಲ್ ಪುತ್ರ ವಿವೇಕ್ ದೋವಲ್ಗೆ Sorry ಎಂದ ಹಿರಿಯ ಕಾಂಗ್ರೆಸ್ಸಿಗ ಜೈರಾಮ್ ರಮೇಶ್
ಪಾಕಿಸ್ತಾನದಲ್ಲಿ 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಹಾಗು 2019ರ ಏರ್ಸ್ಟ್ರೈಕ್ ನಂತರ ದೋವಲ್ ಅವರನ್ನು ಪಾಕ್ ಉಗ್ರರು ಹಿಟ್ ಲಿಸ್ಟ್ನಲ್ಲಿ ಇಟ್ಟಿದ್ದಾರೆ. ಈಗ ಉಗ್ರರ ಬಳಿ ದೋವಲ್ ಮನೆಯ ಮಾಹಿತಿ ಇರುವ ಕಾರಣ ಭದ್ರತೆ ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದೆ.