ಪುಣೆಯಿಂದ 1.1 ಕೋಟಿ ಡೋಸ್ ಕೊರೊನಾ ಲಸಿಕೆ ರವಾನೆ: ವಿವಿಧ ರಾಜ್ಯಗಳಿಗೆ ಹೊರಟ ಕೊವಿಶೀಲ್ಡ್
ಪುಣೆಯಿಂದ 1.1 ಕೋಟಿ ಡೋಸ್ಗಳಷ್ಟು ಕೊವಿಶೀಲ್ಡ್ ಲಸಿಕೆ ವಿವಿಧ ರಾಜ್ಯಗಳಿಗೆ ರವಾನೆಯಾಗಿದೆ. ಲಸಿಕೆಯು ರಾತ್ರಿ ವೇಳೆಗೆ ಬೆಂಗಳೂರಿಗೆ ತಲುಪುವ ಸಾಧ್ಯತೆ ಅಂದಾಜಿಸಲಾಗಿದೆ.
ದೆಹಲಿ: ಬಹುನಿರೀಕ್ಷಿತ ಕೊರೊನಾ ಲಸಿಕೆ, ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ ರವಾನೆಯಾಗಿದೆ. ಪುಣೆಯಿಂದ 1.1 ಕೋಟಿ ಡೋಸ್ಗಳಷ್ಟು ಕೊವಿಶೀಲ್ಡ್ ಲಸಿಕೆ ವಿವಿಧ ರಾಜ್ಯಗಳಿಗೆ ರವಾನೆಯಾಗಿದೆ. ಲಸಿಕೆಯು ರಾತ್ರಿ ವೇಳೆಗೆ ಬೆಂಗಳೂರಿಗೆ ತಲುಪುವ ಸಾಧ್ಯತೆ ಅಂದಾಜಿಸಲಾಗಿದೆ.
ಇಂದು ಸಂಜೆಯಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದರು. ಲಸಿಕೆ ಹಂಚಿಕೆ ಹಾಗೂ ವಿತರಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದರು. ಸೂಕ್ತ ಕ್ರಮಗಳನ್ನು ಕೈಗೊಂಡು, ವ್ಯವಸ್ಥಿತವಾಗಿ ಲಸಿಕೆ ವಿತರಣೆಯಾಗುವಂತೆ ನೋಡಿಕೊಳ್ಳಲು ಕ್ರಮಗಳನ್ನು ವಿವರಿಸಿದ್ದರು.
ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಲಸಿಕೆಗಳು ಭಾರತದ್ದೇ ಆಗಿವೆ. ಲಸಿಕೆಗಾಗಿ ವಿದೇಶದ ಮೇಲೆ ಭಾರತ ಅವಲಂಬಿತವಾಗಿದ್ದರೆ ಕಷ್ಟವಾಗುತ್ತಿತ್ತು. ಭಾರತ ಸ್ವಾವಲಂಬಿಯಾಗಿ ಲಸಿಕೆ ತಯಾರಿಸಿದೆ ಎಂದು ಭಾರತ ಲಸಿಕೆ ತಯಾರಿಸಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ಕೊರೊನಾ ಲಸಿಕೆಯನ್ನು ಮೊದಲು 3 ಕೋಟಿ ಕೊರೊನಾ ವಾರಿಯರ್ಸ್ಗೆ ನೀಡಲಾಗುವುದು. ಅಷ್ಟೂ ಮಂದಿಗೆ ಉಚಿತವಾಗಿ ಲಸಿಕೆ ವಿತರಿಸಲಾಗುವುದು ಎಂದು ಹೇಳಿದ್ದರು.
ಬಳಿಕ, ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ರಾಜ್ಯದಲ್ಲಿ ಲಸಿಕೆ ವಿತರಣೆಯ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದರು. ರಾಜ್ಯದಲ್ಲಿ 16 ಲಕ್ಷಕ್ಕೂ ಅಧಿಕ ಮೊದಲ ಸಾಲಿನ ಕೊವಿಡ್ ಕಾರ್ಯಕರ್ತರಿಗೆ ಲಸಿಕೆ ಲಭ್ಯವಾಗುವ ಬಗ್ಗೆ ಮಾಹಿತಿ ನೀಡಿದ್ದರು. ಜನವರಿ 16ರ ಬಳಿಕ ಲಸಿಕೆ ವಿತರಣೆ ನಡೆಯುವುದನ್ನು ಖಚಿತಪಡಿಸಿದ್ದರು.
ಲಸಿಕೆ ಸಂಗ್ರಹಣೆಗೆ ರಾಜ್ಯದಲ್ಲಿ ತಯಾರಿ ನಡೆಯುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯಲ್ಲಿ ಕೊರೊನಾ ಲಸಿಕೆ ಏರ್ಲಿಫ್ಟ್ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ಸಂಗ್ರಹಿಸಿಡಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಲಸಿಕೆ ಹಂಚಿಕೆ ಹಾಗೂ ವಿತರಣೆಗೂ ಸೂಕ್ತ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಹೇಳಲಾಗುತ್ತಿದೆ.
ಇದೀಗ ಎರಡು ಸುತ್ತಿನ ಲಸಿಕೆ ತಾಲೀಮು (ಡ್ರೈ ರನ್) ಬಳಿಕ, ಕೊರೊನಾ ಲಸಿಕೆ ಪುಣೆಯ ಸೆರಮ್ ಸಂಸ್ಥೆಯಿಂದ ದೇಶದ ವಿವಿಧ ರಾಜ್ಯಗಳಿಗೆ ರವಾನೆಯಾಗಿದೆ. ದೇಶದ ಲಸಿಕೆ ವಿತರಣಾ ಕಾರ್ಯಕ್ರಮ ಶೀಘ್ರದಲ್ಲೇ ಆರಂಭಗೊಳ್ಳಲಿದೆ.
ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆ: ಪ್ರಧಾನಿ ಸಭೆಯ ಬಳಿಕ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ
Published On - 11:27 pm, Mon, 11 January 21