ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ಗೆ ಜಾಮೀನು; ಹಿಂದೂ ಧರ್ಮ ಸಹಿಷ್ಣು ಎಂದ ನ್ಯಾಯಾಲಯ
ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ಗೆ ಶುಕ್ರವಾರ ಜಾಮೀನು ಸಿಕ್ಕಿದರೂ ಇನ್ನುಳಿದ ಪ್ರಕರಣಗಳಲ್ಲಿ ಜಾಮೀನು ಸಿಗದೇ ಇರುವ ಕಾರಣ ಅವರು ಜೈಲಿನಲ್ಲೇ ಇರಲಿದ್ದಾರೆ.
2018ರಲ್ಲಿ ಆಲ್ಟ್ ನ್ಯೂಸ್ (Alt News) ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) ಮಾಡಿದ ಟ್ವೀಟ್ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದಲ್ಲಿ ದಾಖಲಾದ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ (Delhi Court) ಶುಕ್ರವಾರ ಜುಬೇರ್ಗೆ ಜಾಮೀನು ನೀಡಿದೆ. ಪಟಿಯಾಲ ಹೌಸ್ ಕೋರ್ಟ್ನ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ದೇವೇಂದರ್ ಕುಮಾರ್, ಜುಬೇರ್ಗೆ ಜಾಮೀನು ನೀಡಿದ್ದಾರೆ. 50000 ಬಾಂಡ್, ಒಂದು ಶ್ಯೂರಿಟಿ ಮತ್ತು ದೇಶ ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತಿನ ಮೇರೆಗೆ ಜಾಮೀನು ಅನುಮತಿ ನೀಡಲಾಗಿದೆ. ಜುಲೈ 2ರಂದು ಚೀಫ್ ಮೆಟ್ರೊಪಾಲಿಟನ್ ಮೆಜಿಸ್ಟ್ರೇಟ್ ಸ್ನಿಗ್ದಾ ಸಾರ್ವರಿಯಾ ಅವರು ಜಾಮೀನು ನಿರಾಕರಿಸಿದ ನಂತರ ಜುಬೇರ್ ಸೆಷನ್ ಕೋರ್ಟ್ ಮೆಟ್ಟಿಲೇರಿದ್ದರು. ಜೂನ್ 27ರಂದು ಜುಬೇರ್ ಅವರನ್ನು ಬಂಧಿಸಿದ್ದು, ಅವರು ಈಗಲೂ ಬಂಧನದಲ್ಲೇ ಇದ್ದಾರೆ. ಜುಬೇರ್ ವಿರುದ್ಧ 153ಎ (ಧಾರ್ಮಿಕ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ) ಸೆಕ್ಷನ್295( ಧಾರ್ಮಿಕ ಸ್ಥಳಕ್ಕೆ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದಾದ ನಂತರ ಐಪಿಸಿ 295ಎ, ಸೆಕ್ಷನ್ 201, 120 ಬಿ, ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ 2010ರ ಸೆಕ್ಷನ 35ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿರ್ದಿಷ್ಟ ಧಾರ್ಮಿಕ ಸಮುದಾಯವೊಂದರ ವಿರುದ್ದ ಜುಬೇರ್ ಬಳಸಿದ ನುಡಿ ಮತ್ತು ಚಿತ್ರ ಪ್ರಚೋದನಾಕಾರಿಯಾಗಿದ್ದು ಇದು ಜನರ ನಡುವೆ ದ್ವೇಷವನ್ನುಂಟು ಮಾಡಲು ಕಾರಣವಾಗುತ್ತದೆ ಎಂದು ಎಫ್ಐಆರ್ ದಾಖಲಿಸಲಾಗಿದೆ.
Sessions Court of Patiala House Court grants bail to Alt News co-founder Mohammad Zubair in the alleged tweet case. pic.twitter.com/vTjVDqwK6m
ಇದನ್ನೂ ಓದಿ— ANI (@ANI) July 15, 2022
ಜುಬೇರ್ ಅವರ ಫ್ಯಾಕ್ಟ್ ಚೆಕಿಂಗ್ ಪತ್ರಿಕೋದ್ಯಮದ ವಿರುದ್ಧ ಸೇಡಿನ ಕ್ರಮ ಕೈಗೊಳ್ಳಲು ಅವರ ವಿರುದ್ಧ ಈ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜುಬೇರ್ ಪರ ವಾದಿಸಿದ ವಕೀಲೆ ವೃಂದಾ ಗ್ರೋವರ್ ಹೇಳಿದ್ದಾರೆ. 1983ರಲ್ಲಿ ಬಿಡುಗಡೆಯಾದ ಸಿನಿಮಾವೊಂದರ ಸ್ಕ್ರೀನ್ಶಾಟ್ನ್ನು ಜುಬೇರ್ ಟ್ವೀಟ್ ಮಾಡಿದ್ದು, ಅದು ಅಣಕ. ಕಳೆದ ನಾಲ್ಕು ವರ್ಷಗಳಲ್ಲಿ ಅದು ಯಾರನ್ನೂ ಪ್ರಚೋದಿಸಿಲ್ಲ. ಯಾವುದೇ ಅನಾಮಧೇಯ ಟ್ವಿಟರ್ ಹ್ಯಾಂಡಲ್ ನೀಡಿದ ದೂರನ್ನು ಆಧರಿಸಿ ದೆಹಲಿ ಪೊಲೀಸರು ಜುಬೇರ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ವೃಂದಾ ವಾದಿಸಿದ್ದಾರೆ.
ಆಲ್ಟ್ ನ್ಯೂಲ್ ದೇಶೀಯ ದೇಣಿಗೆಗಳನ್ನು ಮಾತ್ರ ಸಂಗ್ರಹಿಸುತ್ತದೆ. ಹಾಗಾಗಿ ಎಫ್ಸಿಆರ್ಎ ಉಲ್ಲಂಘನೆ ಆರೋಪ ನಿರಾಧಾರ. ಪೇಮೆಂಟ್ ಗೇಟ್ ವೇ ರೇಜರ್ ಪೇ ಮೂಲಕ ದೇಶದಲ್ಲಿರುವವರು ಮಾತ್ರ ಆಲ್ಟ್ ನ್ಯೂಸ್ಗೆ ದೇಣಿಗೆ ನೀಡಬಹುದು. ಅಂಥಾ ಆಯ್ಕೆ ಮಾತ್ರ ಎನೇಬಲ್ ಮಾಡಲಾಗಿದೆ ಎಂದಿದ್ದಾರೆ. ನಿನ್ನೆ ನಡೆದ ವಿಚಾರಣೆ ವೇಳೆ ಜುಬೇರ್ ವಿರುದ್ಧ ದೂರು ನೀಡಿದ್ದ ಟ್ವಿಟರ್ ಹ್ಯಾಂಡಲ್ ಹೇಳಿಕೆಗಳನ್ನು ಯಾಕೆ ದಾಖಲಿಸಿಲ್ಲ ಎಂದು ನ್ಯಾಯಾಲಯ ಕೇಳಿದೆ.
ಹಿಂದೂ ಧರ್ಮ ತುಂಬಾ ಹಳೆಯದಾದ ಮತ್ತು ತುಂಬಾ ಸಹಿಷ್ಣು ಧರ್ಮ. ಹಿಂದೂ ಧರ್ಮವನ್ನು ಪಾಲಿಸುವವರು ಸಹಿಷ್ಣುಗಳು. ಹಿಂದೂ ಧರ್ಮದವರು ತುಂಬಾ ಸಹಿಷ್ಣುಗಳಾಗಿರುವ ಕಾರಣ ಅವರು ಹೆಮ್ಮೆಯಿಂದ ತಮ್ಮ ಸಂಸ್ಥೆಗಳಿಗೆ ದೇವರು, ದೇವತೆ ಹೆಸರಿಡುತ್ತಾರೆ. ಹೆಚ್ಚಿನ ಹಿಂದೂಗಳು ಹೆಮ್ಮೆಯಿಂದ ತಮ್ಮ ಮಕ್ಕಳಿಗೆ ದೇವರ ಹೆಸರುಗಳನ್ನಿಡುತ್ತಾರೆ ಎದು ಕೋರ್ಟ್ ಹೇಳಿದೆ.
ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ ನಂತರ ಜುಬೇರ್ನ್ನು ಯುಪಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಜುಬೇರ್ ವಿರುದ್ಧ 6 ಎಫ್ಐಆರ್ ದಾಖಲಾಗಿದೆ. ಸೀತಾಪುರದಲ್ಲಿ ದಾಖಲಾದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜುಬೇರ್ಗೆ ಮಧ್ಯಂತರ ಜಾಮೀನು ನೀಡಿತ್ತು. ಯತಿ ನರಸಿಂಹಾನಂದ್, ಬಜರಂಗ್ ಮುನಿ ಮತ್ತು ಆನಂದ್ ಸ್ವರೂಪ್ ನ್ನು ದ್ವೇಷ ಪ್ರಚೋರಕರು ಎಂದು ಜುಬೇರ್ ಟ್ವೀಟ್ ಮಾಡಿದ್ದು, ಇದರ ವಿರುದ್ದ ಸೀತಾಪುರದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ದೆಹಲಿಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಜುಬೇರ್ ಗೆ ಜಾಮೀನು ಸಿಕ್ಕಿದರೂ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಜಾಮೀನು ಸಿಗದೇ ಇರುವ ಕಾರಣ ಅವರು ಜೈಲಿನಲ್ಲೇ ಇರಬೇಕಾಗುತ್ತದೆ. ಆದಾಗ್ಯೂ ಉತ್ತರ ಪ್ರದೇಶದಲ್ಲಿ ದಾಖಲಾದ 6 ಎಫ್ಐಆರ್ ರದ್ದು ಮಾಡಬೇಕೆಂದು ಜುಬೇರ್ ಸುಪ್ರೀಂ ಮೆಟ್ಟಿಲೇರಿದ್ದಾರೆ.
Published On - 3:07 pm, Fri, 15 July 22