‘ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’; ಭಾವುಕರಾದ ಅತಿಶಿಗೆ ಬಿಜೆಪಿಯ ರಮೇಶ್ ಬಿಧುರಿ ಲೇವಡಿ
ತನ್ನ ತಂದೆಯ ಬಗ್ಗೆ ಬಿಜೆಪಿ ನಾಯಕ ರಮೇಶ್ ಬಿಧುರಿ ಇತ್ತೀಚೆಗೆ ನೀಡಿದ ಹೇಳಿಕೆಗಳ ಬಗ್ಗೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಸಿಎಂ ಅತಿಶಿ ಬೇಸರ ಹೊರಹಾಕಿದ್ದರು. ಅಲ್ಲದೆ, ವೃದ್ಧರಾದ ತನ್ನ ತಂದೆಯ ಬಗ್ಗೆ ರಾಜಕೀಯ ಉದ್ದೇಶಕ್ಕಾಗಿ ಕೆಟ್ಟದಾಗಿ ಮಾತನಾಡಿದ್ದಕ್ಕೆ ಅತಿಶಿ ಕಣ್ಣೀರು ಹಾಕಿದ್ದರು. ಇದಕ್ಕೆ ಬಿಜೆಪಿ ನಾಯಕ ರಮೇಶ್ ಬಿಧುರಿ ಮೊಸಳೆ ಕಣ್ಣೀರು ಎಂದು ಲೇವಡಿ ಮಾಡಿದ್ದಾರೆ.
ನವದೆಹಲಿ: ಅತಿಶಿ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕ ರಮೇಶ್ ಬಿಧುರಿ ನೀಡಿದ ಹೇಳಿಕೆ ರಾಜಕೀಯದಲ್ಲಿ ಬಿರುಗಾಳಿಯನ್ನು ಹೊತ್ತಿಸಿದೆ. ನಿನ್ನೆಯ ಅತಿಶಿಯವರ ಭಾವನಾತ್ಮಕ ಪತ್ರಿಕಾಗೋಷ್ಠಿಯು ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ತೀವ್ರ ಸ್ವರೂಪವನ್ನು ಎತ್ತಿ ತೋರಿಸಿತು. ಎಎಪಿಯು ರಮೇಶ್ ಬಿಧುರಿಯ ಕ್ರಮಗಳನ್ನು ಬಲವಾಗಿ ಖಂಡಿಸಿತು.
ನೈಸರ್ಗಿಕವಾಗಿ, ದೆಹಲಿಯ ಜನರು ಆದಷ್ಟು ಬೇಗ ‘ಆಮ್ ಆದ್ಮಿ ಪಕ್ಷವನ್ನು ತೊಡೆದುಹಾಕಲು ಬಯಸುತ್ತಿದ್ದಾರೆ. ಸಿಎಂ ಅತಿಶಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅಫ್ಜಲ್ ಗುರುವಿನ ಬೆಂಬಲಕ್ಕೆ ನಿಂತಾಗ ತನ್ನ ತಂದೆಯ ನಿಲುವನ್ನು ಅವಳು ಬೆಂಬಲಿಸುತ್ತಾಳೆಯೇ? ಎಂದು ಅತಿಶಿ ಸ್ಪಷ್ಟನೆ ನೀಡಬೇಕು ಎಂದು ರಮೇಶ್ ಬಿಧುರಿ ಹೇಳಿದ್ದಾರೆ.
ಇದನ್ನೂ ಓದಿ: ತನ್ನ ತಂದೆಯ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಸಿಎಂ ಅತಿಶಿ
ಸಿಎಂ ಅತಿಶಿ ವಿರುದ್ಧ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ, ಅತಿಶಿ ತನ್ನ ತಂದೆಯನ್ನು ಬದಲಾಯಿಸಿದ್ದಾರೆ ಎಂದು ಹೇಳಿದ್ದರು. “ಈ ಅತಿಶಿ ಮರ್ಲೆನಾ (ಅತಿಶಿ ಮೊದಲು ಬಳಸುತ್ತಿದ್ದ ಸರ್ನೇಮ್) ಬಳಿಕ ಅತಿಶಿ ಸಿಂಗ್ ಆದರು. ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡರು. ಕೇಜ್ರಿವಾಲ್ ಭ್ರಷ್ಟ ಕಾಂಗ್ರೆಸ್ ಜೊತೆ ಹೋಗುವುದಿಲ್ಲ ಎಂದು ತಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿದರು, ಅತಿಶಿ ತನ್ನ ತಂದೆಯನ್ನೇ ಬದಲಾಯಿಸಿದರು. ಮೊದಲು ಮರ್ಲೆನಾ ಆಗಿದ್ದ ಆಕೆ ಈಗ ಸಿಂಗ್ ಆಗಿದ್ದಾರೆ” ಎಂದು ರಮೇಶ್ ಬಿಧುರಿ ಭಾನುವಾರ ಹೇಳಿದ್ದರು.
ಈ ಬಗ್ಗೆ ಸೋಮವಾರ ಪ್ರತಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸುವಾಗ ಅತಿಶಿ ಭಾವುಕರಾದರು. ಈ ಬಗ್ಗೆ ಭಾವುಕರಾಗಿ ಮಾತನಾಡಿದ ಅವರು, ನನ್ನ ತಂದೆ ಅವರ ಜೀವನದುದ್ದಕ್ಕೂ ಶಿಕ್ಷಕರಾಗಿದ್ದರು. ಅವರು ಬಡ ಮತ್ತು ಕೆಳ ಮಧ್ಯಮ ವರ್ಗದ ಸಾವಿರಾರು ಮಕ್ಕಳಿಗೆ ಪಾಠ ಕಲಿಸಿದ್ದಾರೆ. ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಹ ಸಾಧ್ಯವಿಲ್ಲ. ಚುನಾವಣೆ ಅಥವಾ ರಾಜಕೀಯದ ಕಾರಣಕ್ಕೆ ಅಂತಹ ವೃದ್ಧರನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಎಷ್ಟು ಸರಿ? ಎಂದು ಅತಿಶಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ದೆಹಲಿ ಸಿಎಂ ಅತಿಶಿಯನ್ನು ಶೀಘ್ರ ಬಂಧಿಸಬಹುದು: ಕೇಜ್ರಿವಾಲ್ ಹೀಗೆ ಹೇಳಿದ್ದೇಕೆ?
ಅತಿಶಿ ವಿರುದ್ಧ ಸ್ಪರ್ಧಿಸಲಿರುವ ಕಲ್ಕಾಜಿಯ ಬಿಜೆಪಿ ಅಭ್ಯರ್ಥಿ ಬಿಧುರಿ ಅವರು ಎಎಪಿ ನಾಯಕಿ ಅತಿಶಿ ಅವರ ಸರ್ನೇಮ್ ಬಗ್ಗೆ ನೀಡಿದ ಹೇಳಿಕೆಯ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ. ನಮ್ಮ ರಾಜಕಾರಣ ಇಷ್ಟು ಕೀಳುಮಟ್ಟಕ್ಕೆ ಇಳಿದರೆ ಹೇಗೆ? 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿಗೆ ಏನು ಕೆಲಸ ಮಾಡಿದ್ದಾರೆ ಎನ್ನುವುದನ್ನು ರಮೇಶ್ ಬಿಧುರಿ ತೋರಿಸಬೇಕು. ಅವರ ಕೆಲಸವನ್ನು ತೋರಿಸಿ ಮತ ಕೇಳಬೇಕೇ ಹೊರತು ನನ್ನ ತಂದೆಯನ್ನು ನಿಂದಿಸಿ ಅಲ್ಲ ಎಂದು ಅತಿಶಿ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ