
ಫರೀದಾಬಾದ್, ನವೆಂಬರ್ 7: ಹರಿಯಾಣದ ಫರೀದಾಬಾದ್ನ ಸೆಕ್ಟರ್ 21ಸಿಯಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಿಂಗಾಪುರದಲ್ಲಿ ನೆಲೆಸಿದ್ದ 42 ವರ್ಷದ ಕಾರ್ಪೊರೇಟ್ ಅಧಿಕಾರಿ ಪರಂಜೀತ್ ಧನಕರ್ ಅವರನ್ನು ಪಾರ್ಕಿಂಗ್ ಗಲಾಟೆಗೆ ಸಂಬಂಧಿಸಿದಂತೆ ನೆರೆಮನೆಯವನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಸುಮಾರು 15 ಸುತ್ತು ಗುಂಡು ಹಾರಿಸಿದ್ದು, ಪರಂಜೀತ್ ಅವರ ದೇಹಕ್ಕೆ 8ರಿಂದ 9 ಗುಂಡುಗಳು ತಗುಲಿವೆ. ತೀವ್ರವಾಗಿ ಗಾಯಗೊಂಡಿದ್ದ ಅವರು ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಲತಃ ಹಿಸಾರ್ನವರಾದ ಪರಂಜೀತ್ ಅವರು ಸಿಂಗಾಪುರದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ನವೆಂಬರ್ 24ರಂದು ನಡೆಯಲಿದ್ದ ಅಣ್ಣನ ಮಗನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅವರು ಘಟನೆ ನಡೆಯುವ ಕೇವಲ 2 ದಿನಗಳ ಹಿಂದಷ್ಟೇ ಫರೀದಾಬಾದ್ಗೆ ಆಗಮಿಸಿದ್ದರು. ಧನತೇರಸ್ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪರಂಜೀತ್ ಜಿಮ್ನಿಂದ ಮನೆಗೆ ಹಿಂತಿರುಗಿದಾಗ, ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮೋಹನ್ ಶರ್ಮಾ ಎಂಬಾತನೊಂದಿಗೆ ಕಾರು ಪಾರ್ಕ್ ಮಾಡುವ ವಿಚಾರದಲ್ಲಿ ಗಲಾಟೆ ಪ್ರಾರಂಭವಾಯಿತು.
ಇದನ್ನೂ ಓದಿ: ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಸರಣಿ ಕೊಲೆ ಪ್ರಕರಣ; ಆ 15 ದಿನಗಳಲ್ಲಿ ಏನಾಯಿತು? ಇಲ್ಲಿದೆ ಕಂಪ್ಲೀಟ್ ಟೈಮ್ಲೈನ್
ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಆಕ್ರೋಶಗೊಂಡ ಮೋಹನ್ ಶರ್ಮಾ, ತನ್ನ ಪಿಸ್ತೂಲ್ನಿಂದ ಪರಂಜೀತ್ ಅವರ ಮೇಲೆ ಸತತವಾಗಿ ಗುಂಡಿನ ಮಳೆಗರೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಪರಂಜೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಾಯಿಯ ವಿಚಾರದಲ್ಲಿ ಗಲಾಟೆ:
ಪೊಲೀಸರ ಮಾಹಿತಿಯ ಪ್ರಕಾರ, ಎರಡೂ ಕುಟುಂಬಗಳ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ನಿರಂತರ ಜಗಳ ನಡೆಯುತ್ತಿತ್ತು. ಈ ಘಟನೆಗೆ 5 ದಿನಗಳ ಮೊದಲು ಸಾಕುನಾಯಿಯ ವಿಚಾರದಲ್ಲಿ ಉಂಟಾದ ವಿವಾದಕ್ಕೆ ಆರೋಪಿ ಮೋಹನ್, ಪರಂಜೀತ್ ಅವರ ಮಗನಿಗೆ ಅಸಭ್ಯವಾಗಿ ನಿಂದಿಸಿದ್ದ ಎನ್ನಲಾಗಿದೆ. ಇದೀಗ ಕೊಲೆ ಮಾಡಿರುವ ಮೋಹನ್ ಶರ್ಮಾ ತನ್ನ ಸಂಪೂರ್ಣ ಕುಟುಂಬದೊಂದಿಗೆ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಬೆಂಗಳೂರು ಸರಣಿ ಕೊಲೆ: ಇನ್ನಷ್ಟು ಜನರ ಹತ್ಯೆಯನ್ನು ತಡೆಯಿತು ಆ ಒಂದು ಕನ್ನಡ ಮೆಸೇಜ್! ಹೇಗೆ ಗೊತ್ತೇ? ಇಲ್ಲಿದೆ ಮಾಹಿತಿ
ಈ ದುರಂತ ನಡೆದ ತಕ್ಷಣ ಮೃತರ ಮಗ ಶೌರ್ಯ ಧನಕರ್ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸೂರಜ್ಕುಂಡ್ ಪೊಲೀಸ್ ಠಾಣೆಯಲ್ಲಿ ಮೋಹನ್ ಶರ್ಮಾ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕೊಲೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಫೋರೆನ್ಸಿಕ್ ತಂಡ ಮತ್ತು ಕ್ರೈಂ ಬ್ರಾಂಚ್ ಪೊಲೀಸರು ಭೇಟಿ ನೀಡಿ ಖಾಲಿ ಕ್ಯಾಟ್ರಿಜ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಇಎಸ್ಐಸಿ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಸೂರಜ್ಕುಂಡ್ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ