ಮದುವೆ ಇಷ್ಟವಿಲ್ಲ ಎಂದು ಕುಟುಂಬವನ್ನು ಒಪ್ಪಿಸುವುದಕ್ಕಿಂತ ಕೇತನ್‌ನನ್ನು ಕೊಲ್ಲೋದೇ ಸುಲಭವಾಗಿತ್ತು; ಸಿಯಾ ಹೇಳಿಕೆ
ಪುಣೆಯ ಲೋಹಗಢ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಅವರ ಕೊಲೆಗೆ ಸಂಬಂಧಿಸಿದಂತೆ ಬಂಧಿತಳಾಗಿರುವ ಆತನ ಭಾವಿ ಪತ್ನಿ ಸಿಯಾ ಗೋಯಲ್ ಪೊಲೀಸ್ ವಿಚಾರಣೆ ವೇಳೆ ನೀಡಿರುವ ಹೇಳಿಕೆಗಳು ತೀವ್ರ ಸಂಚಲನ ಮೂಡಿಸಿವೆ. ತಾನು ಪ್ರೀತಿಸುತ್ತಿದ್ದ ಚೇತನ್ ಚೌಧರಿ ಜೊತೆ ಸೇರಿ ಕೇತನ್‌ನನ್ನು ಮೇಲಿಂದ ತಳ್ಳಿ ಕೊಂದಿದ್ದ ಸಿಯಾ ಹಾಗೂ ಆಕೆಯ ಪ್ರೇಮಿ ಇದೀಗ ಪೊಲೀಸರ ವಶದಲ್ಲಿದ್ದಾರೆ. ಆಕೆ ಪೊಲೀಸರ ಮುಂದೆ ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ.

ಪುಣೆ, ಜೂನ್ 26: ಲೋಹಗಢ್ ಕೋಟೆಯ ಕಂದಕಕ್ಕೆ ತಳ್ಳಿ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಅವರನ್ನು ಹತ್ಯೆಗೈದ ಪ್ರಕರಣದ ತನಿಖೆ ನಡೆಸುತ್ತಿರುವ ಪುಣೆ ಗ್ರಾಮಾಂತರ ಪೊಲೀಸರ ಮುಂದೆ ಪ್ರಮುಖ ಆರೋಪಿ ಸಿಯಾ ಗೋಯಲ್ (Siya Goyal) ಅತ್ಯಂತ ಶಾಕಿಂಗ್ ಸತ್ಯಗಳನ್ನು ಬಿಚ್ಚಿಟ್ಟಿದ್ದಾಳೆ. ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ಜೀವಿಸಲು ತನ್ನ ಕುಟುಂಬಸ್ಥರನ್ನು ಒಪ್ಪಿಸುವುದಕ್ಕಿಂತ ಅಥವಾ ಅವರನ್ನು ಎದುರಿಸುವುದಕ್ಕಿಂತ ಭಾವಿ ಪತಿ ಕೇತನ್‌ನನ್ನು ಕೊಲೆ ಮಾಡುವುದೇ ತನಗೆ ಸುಲಭದ ಆಯ್ಕೆಯಾಗಿತ್ತು ಎಂದು ಅವಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ತನಿಖೆಯ ಪ್ರಕಾರ, ಮೃತ ಕೇತನ್ ಅಗರ್ವಾಲ್ ಮಹಾರಾಷ್ಟ್ರದ ಪ್ರಮುಖ ಉದ್ಯಮಿಯಾಗಿದ್ದು, ಸಿಯಾ ಗೋಯಲ್ ಕೂಡ ಪುಣೆಯ ಅತ್ಯಂತ ಶ್ರೀಮಂತ ವ್ಯಾಪಾರಿ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಇವರಿಬ್ಬರ ಕುಟುಂಬಗಳ ಒಪ್ಪಿಗೆಯ ಮೇರೆಗೆ ಫೆಬ್ರವರಿಯಲ್ಲಿ ಅದ್ಧೂರಿ ನಿಶ್ಚಿತಾರ್ಥ ನಡೆದಿತ್ತು. ರಾಜಸ್ಥಾನದ ಉದಯಪುರದಲ್ಲಿ ಅರಮನೆಯೊಂದನ್ನು ಬುಕ್ ಮಾಡಿ, ಅತಿಥಿಗಳಿಗಾಗಿ ಎರಡು ವಿಶೇಷ ಚಾರ್ಟರ್ಡ್ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ಆದರೆ, ಸಿಯಾ ಕಳೆದ ವರ್ಷದ ಅಕ್ಟೋಬರ್‌ನಿಂದಲೇ ಚೇತನ್ ಚೌಧರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು.
ಇದನ್ನೂ ಓದಿ: ತಪ್ಪಿತಸ್ಥಳೆಂದು ಸಾಬೀತಾದರೆ ಮಗಳನ್ನು ಕೂಡ ಅದೇ ಕೋಟೆಯಿಂದ ತಳ್ಳಿ, ಸಿಯಾ ಬಗ್ಗೆ ತಂದೆಯ ಭಾವುಕ ಮಾತು
ಕುಟುಂಬಸ್ಥರ ಕಟ್ಟುಪಾಡುಗಳು ಹಾಗೂ ಸಮಾಜದಲ್ಲಿನ ಪ್ರತಿಷ್ಠೆಗೆ ಹೆದರಿ ತನಗೆ ಈ ಮದುವೆ ಇಷ್ಟವಿಲ್ಲ ಎಂದು ಮನೆಯವರಿಗೆ ನೇರವಾಗಿ ಹೇಳಲು ಸಿಯಾಗೆ ಧೈರ್ಯವಿರಲಿಲ್ಲ. ಹಾಗಾಗಿ, ಮದುವೆಯನ್ನು ತಪ್ಪಿಸಲು ಅವಳು ಮತ್ತು ಚೇತನ್ ಸೇರಿ ಕೇತನ್‌ನನ್ನು ಮುಗಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಜೂನ್ 18ರಂದು ಲೋಹಗಢ್ ಕೋಟೆಗೆ ಟ್ರೆಕ್ಕಿಂಗ್ ಹೋಗಿದ್ದಾಗ ಕೇತನ್ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸಿಯಾ ಮೊದಲು ಕಥೆ ಕಟ್ಟಿದ್ದಳು. ಫೋಟೋ ತೆಗೆಯುವಾಗ ಅಥವಾ ನೀರಿನ ಬಾಟಲಿ ನೀಡುವಾಗ ಕಾಲು ಜಾರಿ ಬಿದ್ದಿದ್ದಾನೆ ಎಂದು ಅವಳು ಪದೇ ಪದೇ ಹೇಳಿಕೆ ಬದಲಾಯಿಸುತ್ತಿದ್ದಳು. ಆದರೆ ಪೊಲೀಸರು ತನಿಖೆ ಕೈಗೊಂಡಾಗ ಅಸಲಿ ಸತ್ಯ ಹೊರಬಂದಿದೆ: ಕಳೆದ 6 ತಿಂಗಳಲ್ಲಿ ಸಿಯಾ ಮತ್ತು ಪ್ರೇಮಿ ಚೇತನ್ ನಡುವೆ 4,400ಕ್ಕೂ ಹೆಚ್ಚು ಬಾರಿ ಫೋನ್ ಕರೆಗಳು ನಡೆದಿವೆ.
ಇದನ್ನೂ ಓದಿ: ವಿಗ್ ಧರಿಸಿದ್ದರಿಂದಲೇ ಕೇತನ್‌ನನ್ನು ಕೊಂದಳಾ ಸಿಯಾ?; ಮಹಾರಾಷ್ಟ್ರ ಸಿಎಂ ಭೇಟಿ ಬಳಿಕ ತಂದೆಯ ಶಾಕಿಂಗ್ ಹೇಳಿಕೆ
ಈ ಕೊಲೆಯ ದಿನ ಲೋಹಗಢ್ ಕೋಟೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ತೀವ್ರ ಬಿಸಿಲಿದ್ದರೂ ಮುಖ ಮುಚ್ಚುವಂತೆ ಹೂಡಿ ಧರಿಸಿದ್ದ ಯುವಕನೊಬ್ಬ ಇವರನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿತ್ತು. ಆತನೇ ಸಿಯಾ ಪ್ರೇಮಿ ಚೇತನ್ ಚೌಧರಿ ಎಂದು ಪತ್ತೆಯಾಗಿದೆ. ಪ್ರಸ್ತುತ ಜೂನ್ 29 ರವರೆಗೆ ಪೊಲೀಸ್ ಕಸ್ಟಡಿಯಲ್ಲಿರುವ ಇಬ್ಬರು ಆರೋಪಿಗಳು ವಿಚಾರಣೆ ವೇಳೆ ಪರಸ್ಪರ ಒಬ್ಬರ ಮೇಲೊಬ್ಬರು ತಪ್ಪು ಹೊರಿಸುತ್ತಿದ್ದಾರೆ. ಚೇತನ್ “ನಾನು ಸಿಯಾ ಜೊತೆ ಓಡಿಹೋಗಲು ಬಯಸಿದ್ದೆ, ಆದರೆ ಕೊಲೆ ಮಾಡುವ ಐಡಿಯಾ ಸಿಯಾಳದ್ದೇ” ಎನ್ನುತ್ತಿದ್ದರೆ, ಸಿಯಾ “ಇದೆಲ್ಲವನ್ನೂ ಚೇತನ್ ಪ್ಲಾನ್ ಮಾಡಿದ್ದ” ಎಂದು ಹೇಳುತ್ತಿದ್ದಾಳೆ. ಆದರೆ ಸದ್ಯಕ್ಕೆ ಸಂಗ್ರಹಿಸಲಾಗಿರುವ ಎಲ್ಲಾ ಡಿಜಿಟಲ್ ಪುರಾವೆಗಳು ಇಬ್ಬರೂ ಸೇರಿ ಈ ಭೀಕರ ಕೃತ್ಯ ಎಸಗಿರುವುದನ್ನು ಖಚಿತಪಡಿಸುತ್ತಿವೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




