Akhilesh Yadav: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಖಿಲೇಶ್ ಯಾದವ್; ಶಾಸಕರಾಗಿ ಮುಂದುವರಿಯಲು ನಿರ್ಧಾರ
ಸಂಸತ್ತಿನಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿಗೆ ಭೇಟಿ ನೀಡಿದ ಅಖಿಲೇಶ್ ಯಾದವ್ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅವರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅಜಂಗಢ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ನವದೆಹಲಿ: ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Elections) ತಮ್ಮ ಕುಟುಂಬದ ಭದ್ರಕೋಟೆಯಾದ ಕರ್ಹಾಲ್‌ನಿಂದ ಗೆದ್ದ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ (Akhilesh Yadav) ಇಂದು ತಮ್ಮ ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಈ ನಡೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ವಿರುದ್ಧ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಅಜಂಗಢದ ಸಂಸದರಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಸಂಸತ್ತನ್ನು ತೊರೆಯುವ ಅವರ ಕ್ರಮವು ಅವರು 2027 ರ ಯುಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯುಪಿ ವಿಧಾನಸಭೆಯಲ್ಲಿ ಬಿಜೆಪಿಯನ್ನು ಎದುರಿಸಲು ಯೋಜಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಸಂಸತ್ತಿನಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿಗೆ ಭೇಟಿ ನೀಡಿದ ಅಖಿಲೇಶ್ ಯಾದವ್ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅವರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅಜಂಗಢ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಪಕ್ಷವು ಬಿಜೆಪಿಗೆ ನೇರ ಎದುರಾಳಿಯಾಗಿತ್ತು. ಉತ್ತರ ಪ್ರದೇಶದ 403 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನವನ್ನು ಗಳಿಸಿತು. ಬಿಜೆಪಿ 255 ಸ್ಥಾನಗಳನ್ನು ಗಳಿಸಿ ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದೆ. ಮಿತ್ರಪಕ್ಷಗಳೊಂದಿಗೆ ಬಿಜೆಪಿ 273 ಸ್ಥಾನಗಳನ್ನು ಗೆದ್ದಿದೆ.
#WATCH | Delhi: Samajwadi Party (SP) chief Akhilesh Yadav going to Lok Sabha Speaker Om Birla’s office to resign from his membership of the House.
In the recently held Uttar Pradesh elections, he was elected as an MLA from the Karhal seat. pic.twitter.com/IBjc4jqr8t
— ANI (@ANI) March 22, 2022
ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಭಾರೀ ಅಂತರದಿಂದ ಗೆದ್ದಿರುವ ಅಖಿಲೇಶ್ ಯಾದವ್ ಶಾಸಕರಾಗಿ ಮುಂದುವರಿಯಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅಖಿಲೇಶ್ ಯಾದವ್ 1,48,196 ಮತಗಳನ್ನು ಗಳಿಸಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಎಸ್‌ಪಿ ಸಿಂಗ್ ಬಘೇಲ್ 80,692 ಮತಗಳನ್ನು ಪಡೆದಿದ್ದರು. ಅಖಿಲೇಶ್ ಯಾದವ್ ಇದಕ್ಕೂ ಮೊದಲು ಯಾವುದೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅವರು ಸಿಎಂ ಆಗಿದ್ದ ಅವಧಿಯಲ್ಲಿಯೂ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ಸೋಲು; ಗೆದ್ದ ಕ್ಷೇತ್ರ ಕರ್ಹಾಲ್ ತೊರೆದು, ಸಂಸದರಾಗಿಯೇ ಮುಂದುವರಿಯಲಿದ್ದಾರಂತೆ ಅಖಿಲೇಶ್ ಯಾದವ್
ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಸರ್ಕಾರ ರಚನೆಯ ಕುರಿತು ತಮ್ಮ ನಿವಾಸದಲ್ಲಿ ಸಭೆ ಕರೆದ ಪ್ರಧಾನಿ ಮೋದಿ
Published On - 3:01 pm, Tue, 22 March 22