ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಫೆ.14) ಚೆನ್ನೈನಲ್ಲಿ ಭಾರತೀಯ ಸೇನೆಗೆ ಅರ್ಜುನ್ ಯುದ್ಧ ಟ್ಯಾಂಕ್ (ಎಂಕೆ-1ಎ) (Arjun Main Battle Tank – MK-1A) ಹಸ್ತಾಂತರ ಮಾಡಿದರು. ಈ ಅರ್ಜುನ್ ಯುದ್ಧ ಟ್ಯಾಂಕ್ ಸ್ವದೇಶಿ ನಿರ್ಮಿತ ಎಂಬುದು ವಿಶೇಷ. ಯುದ್ಧ ವಾಹನಗಳ ಸಂಶೋಧನೆ, ಅಭಿವೃದ್ಧಿ ಸಂಸ್ಥೆ (Combat Vehicles Research & Development Establishment (CVRDE) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು(DRDO) ಜಂಟಿಯಾಗಿ ಈ ಅರ್ಜುನ್ ಯುದ್ಧ ಟ್ಯಾಂಕ್ಗಳನ್ನು ನಿರ್ಮಾಣ ಮಾಡಿವೆ. ಇದರ ನಿರ್ಮಾಣ, ವಿನ್ಯಾಸ, ಅಭಿವೃದ್ಧಿಯಲ್ಲಿ ಸುಮಾರು15 ಶೈಕ್ಷಣಿಕ ಸಂಸ್ಥೆಗಳು, 8 ಪ್ರಯೋಗಾಲಯಗಳು ಹಾಗೂ ಹಲವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (MSMEs)ಗಳ ನೆರವಾಗಿವೆ.
ಏನಿದು ಅರ್ಜುನ್ ಯುದ್ಧ ಟ್ಯಾಂಕ್? (Arjun Main Battle Tank MK-1A?)
ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್ ಯೋಜನೆಗೆ ಸಂಬಂಧಪಟ್ಟ ಅಧ್ಯಯನ ಕೆಲಸವನ್ನು ಡಿಆರ್ಡಿಒ (DRDO) 1972ರಲ್ಲಿ, ಯುದ್ಧ ವಿಮಾನಗಳ ಸಂಶೋಧನೆ, ಅಭಿವೃದ್ಧಿ ಸಂಸ್ಥೆಯೊಂದಿಗೆ (CVRDE) ಸೇರಿ ಪ್ರಾರಂಭಿಸಿತು. ಇದನ್ನು ಮಹತ್ವದ ಪ್ರಯೋಗವೆಂದು ಪರಿಗಣಿಸಿತ್ತು. ಉತ್ತಮ ಅಗ್ನಿಶಾಮಕ ಶಕ್ತಿ, ಹೆಚ್ಚಿನ ಚಲನಶೀಲತೆ ಮತ್ತು ಅತ್ಯುತ್ತಮ ರಕ್ಷಣಾ ಸಾಮರ್ಥ್ಯವುಳ್ಳ ಅತ್ಯಾಧುನಿಕ ಯುದ್ಧ ಟ್ಯಾಂಕ್ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಕೆಲಸ ಶುರುವಾಯಿತು. ಹೀಗೆ ಅರ್ಜುನ್ ಯುದ್ಧ ಟ್ಯಾಂಕ್ ಅಭಿವೃದ್ಧಿಗೊಳಿಸುವ ವೇಳೆ, ಅದರ ಇಂಜಿನ್, ಸಂಚಾರ, ಬಂದೂಕು ನಿಯಂತ್ರಣ ವ್ಯವಸ್ಥೆ, ಹೊರಗಿನ ಹೊದಿಕೆಗಳ ವಿನ್ಯಾಸದಲ್ಲಿ CVRDE ಅದ್ಭುತ ಸಾಧನೆಯನ್ನೇ ಮಾಡಿತು. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಾಗಿಯೇ ಯಶಸ್ವಿಯಾಯಿತು. ಅದಾದ ಬಳಿಕ 1996ರಿಂದ ತಮಿಳುನಾಡಿನ ಅವಾಡಿಯಲ್ಲಿರುವ ಭಾರತೀಯ ಆರ್ಡಿನನ್ಸ್ ಫ್ಯಾಕ್ಟರಿಯ ಉತ್ಪಾದನಾ ಕೇಂದ್ರದಲ್ಲಿ ಅರ್ಜುನ್ ಯುದ್ಧ ಟ್ಯಾಂಕ್ಗಳ ಸಮೂಹ ತಯಾರಿಕೆ ಪ್ರಾರಂಭವಾಯಿತು.
ಸುಮಾರು 67 ಟನ್ ತೂಕದ ಈ ಟ್ಯಾಂಕ್ಗೆ 1.6 ಅಡಿ ಗ್ರೌಂಡ್ ಕ್ಲಿಯರೆನ್ಸ್ ಇದೆ. ಗಂಟೆಗೆ ಗರಿಷ್ಠ 65 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅರ್ಜುನ್ ಯುದ್ಧ ಟ್ಯಾಂಕ್ಗಳು ಅವುಗಳಲ್ಲಿರುವ ಫಿನ್ ಸ್ಟೆಬಿಲೈಸ್ಡ್ ಆರ್ಮರ್ ಪಿಯರ್ಸಿಂಗ್ ಡಿಸ್ಕಾರ್ಡಿಂಗ್ ಸಾಬೋಟ್ (FSAPDS) ಯುದ್ಧ ಸಾಮಗ್ರಿಗಳಿಂದ ಹೆಸರುವಾಸಿಯಾಗಿದೆ. ದೊಡ್ಡ ಗಾತ್ರದ ಶೆಲ್ಗಳನ್ನು ದೂರಕ್ಕೆ ಚಿಮ್ಮಿಸುವ ಶಕ್ತಿಯನ್ನು FSAPDS ನೀಡುತ್ತದೆ. 120 ಎಂಎಂ ಸಾಮರ್ಥ್ಯದ ರೈಫಲ್ಡ್ ಗನ್ ಅಳವಡಿಸಲಾಗಿದೆ. ಕಂಪ್ಯೂಟರ್ ನಿಯಂತ್ರಿತ ಏಕೀಕೃತ ಅಗ್ನಿಶಾಮಕ ವ್ಯವಸ್ಥೆಯನ್ನು ಹೊಂದಿದೆ. ಅಷ್ಟೇ ಅಲ್ಲ, ಎಲ್ಲ ರೀತಿಯ ಬೆಳಕಿನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಲು ಅನುಕೂಲವಾಗುವ ಸ್ಥಿರ ವೀಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ.
ಅರ್ಜುನ್ ಟ್ಯಾಂಕ್ ಅತ್ಯಾಧುನಿಕ ಶಾಕ್ ಅಬ್ಸರ್ವರ್ ವ್ಯವಸ್ಥೆ ಹೊಂದಿದೆ. ಬ್ರಿಟನ್ನ ‘ಚಾಲೆಂಜರ್’ ಯುದ್ಧ ಟ್ಯಾಂಕ್ಗಳೂ ಸೇರಿದಂತೆ ಹಲವು ಐಷಾರಾಮಿ ವಾಣಿಜ್ಯ ವಾಹನಗಳಲ್ಲಿ ಬಳಕೆಯಾಗಿರುವ ಹೈಡ್ರೋನ್ಯುಮಾಟಿಕ್ ಸಸ್ಪೆನ್ಷನ್ ತಂತ್ರಜ್ಞಾನ (Hydropneumatic Suspension) ಅರ್ಜುನ್ ಟ್ಯಾಂಕ್ನಲ್ಲಿ ಬಳಕೆಯಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವಾಗಲೂ ಸಿಬ್ಬಂದಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಾರದು, ಟ್ಯಾಂಕ್ಗಳ ಸಂಚಾರದ ವೇಗ, ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಟ್ಯಾಂಕ್ ರೂಪಿಸಿದ ವಿಜ್ಞಾನಿಗಳು ಅಳವಡಿಸಿದ್ದಾರೆ. ಟ್ಯಾಂಕ್ಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಸ್ಪ್ರಿಂಗ್ಗಳ ಶಾಕ್ ಅಬ್ಸರ್ವರ್ ಬದಲು ದ್ರವ ಮತ್ತು ಅನಿಲಗಳ ಸಂಯೋಜನೆಯಿಂದ ಅರ್ಜುನ್ನ ಈ ಶಾಕ್ ಅಬ್ಸರ್ವರ್ ಕೆಲಸ ಮಾಡುತ್ತದೆ.
2004ರಲ್ಲಿ ಮೊದಲ ಬಾರಿಗೆ ಸೇನೆ ಸೇರಿದ ಅರ್ಜುನ ಟ್ಯಾಂಕ್ಗಳು
ಹೀಗೆ ದೇಶೀಯವಾಗಿ ನಿರ್ಮಿಸಿ, ಅಭಿವೃದ್ಧಿ ಪಡಿಸಲಾದ ಅರ್ಜುನ ಯುದ್ಧ ಟ್ಯಾಂಕ್ಗಳು ಮೊದಲ ಬಾರಿಗೆ ಭಾರತೀಯ ಸೇನೆ ಸೇರಿದ್ದು 2004ರಲ್ಲಿ. ಮೊದಲ ಬ್ಯಾಚ್ನಲ್ಲಿ ಒಟ್ಟು 16 ಟ್ಯಾಂಕ್ಗಳನ್ನು ಸೇನೆಗೆ ಸೇರಿಸಲಾಗಿದೆ. ಇವುಗಳನ್ನು 43 ಆರ್ಮ್ರ್ಡ್ ರೆಜಿಮೆಂಟ್ನ ಸ್ಕ್ವಾಡ್ರನ್ ಆಗಿ ನಿಯೋಜಿಸಲಾಗಿತ್ತು. 2011ರ ಹೊತ್ತಿಗೆ 100ಕ್ಕೂ ಹೆಚ್ಚು ಅರ್ಜುನ ಟ್ಯಾಂಕ್ಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದವು. ಇದೀಗ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ, ₹ 8400 ಕೋಟಿ ವೆಚ್ಚದಲ್ಲಿ 118 ಅರ್ಜುನ್ ಮಾರ್ಕ್-1 ಎ ಯುದ್ಧ ಟ್ಯಾಂಕ್ ಖರೀದಿಸಿ, ಸೇನೆಗೆ ಹಸ್ತಾಂತರಿಸಿದೆ.
ಅರ್ಜುನ್ ಟ್ಯಾಂಕ್ ಎಂಕೆ-1ಎ ಹೇಗೆ ವಿಭಿನ್ನ?
ಇದೀಗ ಸೇನೆಗೆ ಸೇರ್ಪಡೆಯಾಗಿರುವ ಎಂಕೆ-1ಎ ಆವೃತ್ತಿ ಈ ಹಿಂದಿನ ಮಾದರಿಗಳಿಗಿಂತ ತುಸು ವಿಭಿನ್ನವಾಗಿದೆ. 14 ಮಹತ್ವದ ನವೀಕರಣವನ್ನು ಇದರಲ್ಲಿ ಮಾಡಲಾಗಿದೆ. ಅರ್ಜುನ್ ಎಂಕೆ-1 ಎಯಲ್ಲಿ ಕ್ಷಿಪಣಿ ಹಾರಿಸುವಂತೆಯೂ ವಿನ್ಯಾಸ ಮಾಡಲಾಗಿದ್ದು, ಸದ್ಯ ಅಂತಿಮ ಹಂತದ ಪರೀಕ್ಷೆ ನಡೆಯುತ್ತಿರುವುದರಿಂದ ಕ್ಷಿಪಣಿಯನ್ನು ಅಳವಡಿಸಿಲ್ಲ. ಈ ಹೊಸ ಆವೃತ್ತಿಯಲ್ಲಿ ಶೇ 54.3ರಷ್ಟು ಸ್ವದೇಶಿ ನಿರ್ಮಿತ ಬಿಡಿಭಾಗಗಳು ಇದ್ದು, ಹಳೇ ಆವೃತ್ತಿಯಲ್ಲಿ ಈ ಪ್ರಮಾಣ ಶೇ 41ರಷ್ಟು ಇತ್ತು.
ಇದನ್ನೂ ಓದಿ: PM Modi in Tamil Nadu: ಅರ್ಜುನ್ ಟ್ಯಾಂಕ್ ಸೇನೆಗೆ ಹಸ್ತಾಂತರ; ತಮಿಳುನಾಡು ರೈತರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ
Published On - 6:19 pm, Sun, 14 February 21