ಹಬ್ಬದ ಸೀಸನ್​​ನಲ್ಲೂ ಸಂಬಳವಿಲ್ಲದೆ ವಿಮಾನ ಹಾರಿಸಲು ಸ್ಪೈಸ್‌ಜೆಟ್‌ನ 40 ಪೈಲಟ್‌ಗಳ ನಕಾರ

ಮುಂಬರುವ ಹಬ್ಬದ ಸೀಸನ್‌ನ ರಶ್ ನಡುವೆಯೇ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಗೆ ತೀವ್ರ ಆಘಾತ ಎದುರಾಗಿದ್ದು, ಬಾಕಿ ಉಳಿದಿರುವ ವೇತನವನ್ನು ತಕ್ಷಣವೇ ಪಾವತಿಸುವಂತೆ ಒತ್ತಾಯಿಸಿ ಸ್ಪೈಸ್‌ಜೆಟ್‌ನ Q400 ವಿಮಾನಗಳ ಸುಮಾರು 40 ಪೈಲಟ್‌ಗಳು ವಿಮಾನ ಹಾರಾಟ ನಡೆಸಲು ನಿರಾಕರಿಸಿದ್ದಾರೆ. ಪೈಲಟ್‌ಗಳ ಈ ನಿರ್ಧಾರಕ್ಕೆ ಭಾರತೀಯ ಪೈಲಟ್‌ಗಳ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ, ಹಬ್ಬದ ಸೀಸನ್​ನಲ್ಲಿ ಸಾಲುಸಾಲು ರಜೆಗಳಿರುವುದರಿಂದ ವಿಮಾನ ಪ್ರಯಾಣಿಕರೂ ಹೆಚ್ಚಾಗಿರುವ ಈ ಸಂದರ್ಭದಲ್ಲೇ ಪೈಲಟ್​​ಗಳು ಈ ರೀತಿ ಆಕ್ರೋಶ ವ್ಯಕ್ತಪಡಿಸಿರುವುದು ಸ್ಪೈಸ್​ಜೆಟ್​ಗೆ ತಲೆನೋವು ತಂದಿದೆ.

ಹಬ್ಬದ ಸೀಸನ್​​ನಲ್ಲೂ ಸಂಬಳವಿಲ್ಲದೆ ವಿಮಾನ ಹಾರಿಸಲು ಸ್ಪೈಸ್‌ಜೆಟ್‌ನ 40 ಪೈಲಟ್‌ಗಳ ನಕಾರ
ಸ್ಪೈಸ್​ಜೆಟ್
Image Credit source: PTI

Updated on: Oct 13, 2026 | 6:33 PM

ನವದೆಹಲಿ, ಅಕ್ಟೋಬರ್ 13: ಆರ್ಥಿಕ ಮುಗ್ಗಟ್ಟು ಹಾಗೂ ಸಾಂಸ್ಥಿಕ ಸವಾಲುಗಳಿಂದ ನರಳುತ್ತಿರುವ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್‌ಗೆ ಮತ್ತೊಂದು ಬಿಕ್ಕಟ್ಟು ಎದುರಾಗಿದೆ. Q400 ವಿಮಾನಗಳನ್ನು ನಿರ್ವಹಿಸುತ್ತಿರುವ ಸುಮಾರು 40 ಪೈಲಟ್‌ಗಳು ತಮ್ಮ ದೀರ್ಘಕಾಲದ ಬಾಕಿ ವೇತನವನ್ನು ಪಾವತಿಸುವವರೆಗೆ ವಿಮಾನ ಹಾರಾಟ ನಡೆಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ನಾಗರಿಕ ವಿಮಾನಯಾನ ಮಹಾನನಿರ್ದೇಶನಾಲಯವು (ಡಿಜಿಸಿಎ) ಸಂಸ್ಥೆಯ ಕಾರ್ಯಾಚರಣೆಯ ಮೇಲೆ ತೀವ್ರ ನಿಗಾ ಇರಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪಿಟಿಐ ವರದಿ ಪ್ರಕಾರ, ಬಾಕಿ ಉಳಿದಿರುವ ಸಂಬಳ ಬಿಡುಗಡೆಯಾಗುವವರೆಗೂ ತಾವು ವಿಮಾನಗಳ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಪೈಲಟ್‌ಗಳು ತಿಳಿಸಿದ್ದಾರೆ. ಪೈಲಟ್‌ಗಳ ಈ ನಿರ್ಧಾರಕ್ಕೆ ಭಾರತೀಯ ಪೈಲಟ್‌ಗಳ ಸಂಘಟನೆಯಾದ ‘ALPA India’ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಸ್ಪೈಸ್‌ಜೆಟ್ ವಿಮಾನಗಳ ವಿಳಂಬಕ್ಕೆ ಖಂಡನೆ; ಏರ್​​ಪೋರ್ಟ್​​ನಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರ ಪ್ರತಿಭಟನೆ

ವೇತನ ಬಾಕಿ ವಿವಾದ:

ಸ್ಪೈಸ್‌ಜೆಟ್‌ನ Q400 ವಿಮಾನಗಳನ್ನು ನಿರ್ವಹಿಸುತ್ತಿರುವ ಸುಮಾರು 40 ಮಂಡಳಿಯ ಪೈಲಟ್‌ಗಳಿಗೆ ಹಲವು ತಿಂಗಳಿಂದ ಸಂಬಳ ಪಾವತಿಯಾಗಿಲ್ಲ. ತಮ್ಮ ದೀರ್ಘಕಾಲದ ಬಾಕಿ ವೇತನವನ್ನು ಪಾವತಿಸುವವರೆಗೆ ವಿಮಾನ ಹಾರಿಸುವುದಿಲ್ಲ ಎಂದು ಪೈಲಟ್‌ಗಳು ಪಟ್ಟುಹಿಡಿದಿದ್ದಾರೆ. ಪೈಲಟ್‌ಗಳ ಈ ಹೋರಾಟಕ್ಕೆ ಬೆಂಬಲ ನೀಡಿರುವ ALPA India, ಅಕ್ಟೋಬರ್ 9ರಂದು ತನ್ನ ಸದಸ್ಯರಿಗೆ ಬರೆದ ಪತ್ರದಲ್ಲಿ, ಪೈಲಟ್‌ಗಳ ಹಕ್ಕುಗಳು, ವೃತ್ತಿಪರ ಘನತೆ ಮತ್ತು ವಿಮಾನಯಾನ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ನೈತಿಕ, ವೃತ್ತಿಪರ ಹಾಗೂ ಸಲಹಾತ್ಮಕ ನೆರವು ನೀಡುವುದಾಗಿ ಘೋಷಿಸಿದೆ.

“ಈ ಪೈಲಟ್‌ಗಳು ನಿರಂತರ ಆರ್ಥಿಕ ಮತ್ತು ಸಾಂಸ್ಥಿಕ ಸವಾಲುಗಳಿಂದಾಗಿ ತೀವ್ರ ಆತಂಕ ಮತ್ತು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಮಾನಗಳಿಗೆ ಅಗತ್ಯವಿರುವ ಸೇವೆಗಳನ್ನು ನೀಡಲು ನಿರಾಕರಿಸುತ್ತಿರುವ ಸರಬರಾಜುದಾರರಿಗೆ ಹಣ ಪಾವತಿಯಾಗದಿರುವುದು, ವಿಳಂಬವಾಗುತ್ತಿರುವ ಸಂಬಳ ಹಾಗೂ ಬಾಕಿ ಉಳಿದಿರುವ ಉದ್ಯೋಗಿ ಸೌಲಭ್ಯಗಳು ಕೆಲಸದ ವಾತಾವರಣವನ್ನು ಅತ್ಯಂತ ದುಸ್ತರಗೊಳಿಸಿವೆ” ಎಂದು ಪೈಲಟ್‌ಗಳ ಸಂಘಟನೆ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ‘ಸರ್ಕಾರದ ಹಸ್ತಕ್ಷೇಪಕ್ಕೂ ಮಿತಿ ಇದೆ’; ಸ್ಪೈಸ್‌ಜೆಟ್ ಬಿಕ್ಕಟ್ಟಿನ ಕುರಿತು ಕೇಂದ್ರ ಸರ್ಕಾರದ ಸ್ಪಷ್ಟನೆ

ಸ್ಪೈಸ್‌ಜೆಟ್ ಕಳೆದ ಹಲವು ತಿಂಗಳುಗಳಿಂದ ತೀವ್ರ ಆರ್ಥಿಕ ಒತ್ತಡ ಹಾಗೂ ಕಾರ್ಯಾಚರಣೆಯ ವ್ಯತ್ಯಯಗಳನ್ನು ಎದುರಿಸುತ್ತಿದೆ. ಉದ್ಯೋಗಿಗಳು ಹಾಗೂ ಸೇವಾ ಪೂರೈಕೆದಾರರಿಗೆ ನೀಡಬೇಕಾದ ಹಣಕಾಸಿನ ಬದ್ಧತೆಗಳನ್ನು ಈಡೇರಿಸುವಲ್ಲಿ ಸಂಸ್ಥೆ ವಿಫಲವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ಲೇನ್‌ಸ್ಪಾಟರ್ಸ್ ಡಾಟ್ ನೆಟ್ ಮಾಹಿತಿಯ ಪ್ರಕಾರ, ಸ್ಪೈಸ್‌ಜೆಟ್ ಕೇವಲ 10 ಕಾರ್ಯಾಚರಣೆಯ ವಿಮಾನಗಳನ್ನು ಹೊಂದಿದ್ದು, ಉಳಿದ 37 ವಿಮಾನಗಳು ನಿಲುಗಡೆಗೊಂಡಿವೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us