AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಸ್ಪೈಸ್‌ಜೆಟ್ ವಿಮಾನಗಳ ವಿಳಂಬಕ್ಕೆ ಖಂಡನೆ; ಏರ್​​ಪೋರ್ಟ್​​ನಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರ ಪ್ರತಿಭಟನೆ

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಡಬೇಕಿದ್ದ ಸ್ಪೈಸ್‌ಜೆಟ್ ಸಂಸ್ಥೆಯ ವಿಮಾನವು 24 ಗಂಟೆಗಳಿಗೂ ಹೆಚ್ಚು ಕಾಲ ವಿಳಂಬಗೊಂಡಿದ್ದರಿಂದ ಕೋಪಗೊಂಡ ಪ್ರಯಾಣಿಕರು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ನಿಗದಿತ ಸಮಯಕ್ಕೆ ವಿಮಾನ ಹೊರಡದಿದ್ದರೂ ಸಂಸ್ಥೆಯು ಸರಿಯಾದ ಮಾಹಿತಿ ನೀಡದೆ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಪ್ರಯಾಣಿಕರು ಸ್ಪೈಸ್‌ಜೆಟ್ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ದೆಹಲಿಯಲ್ಲಿ ಸ್ಪೈಸ್‌ಜೆಟ್ ವಿಮಾನಗಳ ವಿಳಂಬಕ್ಕೆ ಖಂಡನೆ; ಏರ್​​ಪೋರ್ಟ್​​ನಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರ ಪ್ರತಿಭಟನೆ
ಸ್ಪೈಸ್‌ಜೆಟ್Image Credit source: PTI
ಸುಷ್ಮಾ ಚಕ್ರೆ
|

Updated on: Sep 15, 2026 | 4:24 PM

Share

ನವದೆಹಲಿ, ಸೆಪ್ಟೆಂಬರ್ 15: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್ ಸಂಸ್ಥೆಯ 2 ವಿಮಾನಗಳ ಹಾರಾಟ ಪದೇ ಪದೇ ವಿಳಂಬವಾಗಿತ್ತು. ಇದಕ್ಕೆ ಆಕ್ರೋಶಗೊಂಡ 200ಕ್ಕೂ ಹೆಚ್ಚು ಪ್ರಯಾಣಿಕರು ಇಂದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯಿಂದ ದುಬೈಗೆ ಹೊರಡಬೇಕಿದ್ದ ಎಸ್‌ಜಿ 5111 ಮತ್ತು ಎಸ್‌ಜಿ 5105 ವಿಮಾನಗಳು ಸೋಮವಾರ ಬೆಳಿಗ್ಗೆ ಮತ್ತು ಸಂಜೆ ನಿರ್ಗಮಿಸಬೇಕಿತ್ತು. ಆದರೆ, ಎರಡೂ ವಿಮಾನಗಳ ವೇಳಾಪಟ್ಟಿಯನ್ನು ಪದೇ ಪದೇ ಮುಂದೂಡಲಾಯಿತು. ಇದರಿಂದಾಗಿ ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಯಿತು.

ದುಬೈಗೆ ತೆರಳಬೇಕಿದ್ದ ನೂರಾರು ಪ್ರಯಾಣಿಕರು ಸಕಾಲಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ತಾಂತ್ರಿಕ ದೋಷ ಮತ್ತು ಕಾರ್ಯಾಚರಣೆಯ ಕಾರಣಗಳನ್ನು ನೀಡಿ ವಿಮಾನದ ನಿರ್ಗಮನ ಸಮಯವನ್ನು ಪದೇ ಪದೇ ಮುಂದೂಡಲಾಯಿತು. ವಿಮಾನ ವಿಳಂಬದಿಂದಾಗಿ ರಾತ್ರಿಯಿಡೀ ಟರ್ಮಿನಲ್‌ನಲ್ಲಿಯೇ ಕಳೆಯಬೇಕಾಗಿ ಬಂದಿದ್ದರಿಂದ ಚಿಕ್ಕ ಮಕ್ಕಳು ಮತ್ತು ಹಿರಿಯ ನಾಗರಿಕರು ಆಹಾರ, ನೀರು ಹಾಗೂ ಸರಿಯಾದ ವಿಶ್ರಾಂತಿ ವ್ಯವಸ್ಥೆಯಿಲ್ಲದೆ ತೀವ್ರ ತೊಂದರೆ ಅನುಭವಿಸಿದರು.

ದೆಹಲಿ ವಿಮಾನ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ:

ವಿಮಾನವು ಯಾವಾಗ ಹಾರಾಟ ನಡೆಸಲಿದೆ ಎಂಬುದರ ಕುರಿತು ಸ್ಪೈಸ್‌ಜೆಟ್ ಆಡಳಿತ ಮಂಡಳಿಯಾಗಲಿ ಅಥವಾ ಗ್ರೌಂಡ್ ಸಿಬ್ಬಂದಿಯಾಗಲಿ ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಇದು ಪ್ರಯಾಣಿಕರ ಆಕ್ರೋಶ ಹೆಚ್ಚಾಗಲು ಕಾರಣವಾಯಿತು. ವಿಮಾನಗಳ ಪದೇಪದೆ ವಿಳಂಬದಿಂದ ಬೇಸತ್ತ ಪ್ರಯಾಣಿಕರು ಸೋಮವಾರ ಸಂಜೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಸ್ಪೈಸ್‌ಜೆಟ್ ಆಡಳಿತ ಮಂಡಳಿ ವಿರುದ್ಧ ತೀವ್ರ ಪ್ರತಿಭಟನೆ ಆರಂಭಿಸಿದರು.

ಇದನ್ನೂ ಓದಿ: ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ವಿಮಾನದ ವಿಳಂಬಕ್ಕೆ ಸೂಕ್ತ ಕಾರಣ ನೀಡುವಂತೆ ಸ್ಪೈಸ್‌ಜೆಟ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಪೈಸ್‌ಜೆಟ್ ಕ್ಷಮೆಯಾಚನೆ:

ಇಂದು ಈ ಗೊಂದಲದ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಸ್ಪೈಸ್‌ಜೆಟ್ ಸಂಸ್ಥೆಯು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಕ್ಷಮೆಯಾಚಿಸಿದೆ. ವಿಮಾನವೊಂದಕ್ಕೆ ತಾಂತ್ರಿಕ ತೊಂದರೆ ಉಂಟಾದ್ದರಿಂದ ಕಾರ್ಯಾಚರಣೆಯ ಅಡಚಣೆ ಉಂಟಾಗಿದೆ, ದೆಹಲಿ-ದುಬೈ ವಿಮಾನಗಳು ವಿಳಂಬವಾಗಿವೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ತಪ್ಪಿದ ಭಾರೀ ದುರಂತ; ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್

ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರಯಾಣಿಕರ ತೊಂದರೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಏರ್‌ಲೈನ್ಸ್ ಸ್ಪಷ್ಟಪಡಿಸಿದೆ. ಆರ್ಥಿಕ ಸಂಕಷ್ಟ ಮತ್ತು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿರುವ ಸ್ಪೈಸ್‌ಜೆಟ್ ಸಂಸ್ಥೆಯ ವಿಮಾನಗಳ ವಿಳಂಬವು ಅದರ ಸೇವಾ ಗುಣಮಟ್ಟದ ಮೇಲಿನ ಕಳವಳವನ್ನು ಹೆಚ್ಚಿಸಿದೆ. ಪ್ರಸ್ತುತ ಕೇಂದ್ರ ಸರ್ಕಾರವು ಸ್ಪೈಸ್‌ಜೆಟ್‌ನ ಆರ್ಥಿಕ ಮತ್ತು ಕಾರ್ಯಾಚರಣೆಯ ಚಟುವಟಿಕೆಗಳ ಮೇಲೆ ನಿಕಟ ನಿಗಾ ವಹಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us