AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಗ್ರಾಮ ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ಆರೋಪಿ ಕಲ್ಯಾಣ್ ವಿರುದ್ಧ ಕೊಲೆಯತ್ನ ಕೇಸ್, 10 ವರ್ಷ ಜೈಲು ಶಿಕ್ಷೆ ಸಾಧ್ಯತೆ

ಗುರುಗ್ರಾಮ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಕಲ್ಯಾಣ್ ಬೈನ್ಸ್ಲಾ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿದೆ. ಮಹಿಳಾ ಬೈಕರ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಆರೋಪದ ಮೇಲೆ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಸಂತ್ರಸ್ತೆ ಸಿಯಾ ಇದನ್ನು ಕೊಲೆಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಪೊಲೀಸರು ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಸಿಯಾ ಅವರ ರೈಡಿಂಗ್ ಗೇರ್ ಜೀವ ಉಳಿಸಿದೆ.

ಗುರುಗ್ರಾಮ ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ಆರೋಪಿ ಕಲ್ಯಾಣ್  ವಿರುದ್ಧ ಕೊಲೆಯತ್ನ ಕೇಸ್, 10 ವರ್ಷ ಜೈಲು ಶಿಕ್ಷೆ ಸಾಧ್ಯತೆ
ಆರೋಪಿ ಕಲ್ಯಾಣ್
ನಯನಾ ರಾಜೀವ್
|

Updated on: Sep 15, 2026 | 1:09 PM

Share

ಗುರುಗ್ರಾಮ, ಸೆಪ್ಟೆಂಬರ್ 15: ಹರಿಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್‌ವೊಬ್ಬರಿಗೆ ಕಾರು ಗುದ್ದಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಸಿಸಿಟಿವಿ ಮತ್ತು ಆಕ್ಷನ್ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಗುರುಗ್ರಾಮ ಪೊಲೀಸರು, ಕಾರು ಚಾಲಕ ಕಲ್ಯಾಣ್ ಬೈನ್ಸ್ಲಾ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಠಿಣ ಸೆಕ್ಷನ್ ಅಡಿಯಲ್ಲಿ ಆರೋಪಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

ಕೊಲೆಯತ್ನ ಕೇಸ್ ದಾಖಲು: ಮಹಿಳೆಯ ಬೈಕನ್ನು ಬಿಳಿ ಸೆಡಾನ್ ಕಾರು ಅಡ್ಡಗಟ್ಟಿ ಡಿಕ್ಕಿ ಹೊಡೆದು ಪರಾರಿಯಾದ ದೃಶ್ಯಗಳು ವೈರಲ್ ಆದ ಎರಡು ದಿನಗಳ ಬಳಿಕ ಪೊಲೀಸರು ಕಠಿಣ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.

ಸಂತ್ರಸ್ತೆ ಸಿಯಾ ಆಕ್ರೋಶ: ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೈಕರ್ ಸಿಯಾ, “ಇದು ಸ್ಪಷ್ಟ ಕೊಲೆಯತ್ನ. ಒಬ್ಬ ಹೆಣ್ಣಿಗೆ ಕಾರು ಗುದ್ದಿ ಪರಾರಿಯಾದರೆ ಏನೂ ಆಗಲ್ಲ ಎಂಬ ದುರಹಂಕಾರ ಆತನಲ್ಲಿದೆ. ಯಾರಾದರೂ ಸತ್ತ ಮೇಲಷ್ಟೇ ಕಾನೂನು ಎಚ್ಚರಗೊಳ್ಳುವುದೇ? ಇಂತಹ ಪುಂಡರಿಗೆ ತಕ್ಕ ಪಾಠ ಕಲಿಸುವವರೆಗೂ ನಾನು ಹೋರಾಟ ನಿಲ್ಲಿಸುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಆರೋಪಿಯ ಸಮರ್ಥನೆಗೆ ತಿರುಗೇಟು: ತನಗೆ ಬೈಕ್ ಸವಾರ ಪುರುಷನೋ ಮಹಿಳೆಯೋ ಎಂದು ತಿಳಿದಿರಲಿಲ್ಲ ಹಾಗೂ ಘಟನೆ ಬಗ್ಗೆ ವಿಷಾದವಿದೆ ಎಂದು ಆರೋಪಿ ಕಲ್ಯಾಣ್ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದ. ಇದಕ್ಕೆ ಪ್ರತ್ಯುತ್ತರ ನೀಡಿದ ಸಿಯಾ, “ನಿಜವಾಗಿಯೂ ಕನಿಕರವಿದ್ದರೆ ಕಾರು ನಿಲ್ಲಿಸಿ ನಾನು ಬದುಕಿದ್ದೇನೆಯೋ ಇಲ್ಲವೋ ಎಂದು ನೋಡಬೇಕಿತ್ತು, ಸ್ಥಳದಿಂದ ಓಡಿಹೋಗಿದ್ದೇಕೆ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತಷ್ಟು ಓದಿ: ಗಣೇಶ ಹಬ್ಬದ ಬೆನ್ನಲ್ಲೇ ಸೂತಕದ ಛಾಯೆ: ಕರ್ನಾಟಕದ ವಿವಿಧೆಡೆ ಪ್ರತ್ಯೇಕ ಅವಘಡಗಳಲ್ಲಿ 12 ಮಂದಿ ಸಾವು

ಕುಟುಂಬದ ಬೆಂಬಲ: ಸಿಯಾ ಅವರ ತಂದೆ ರೋಹ್ಶನ್ ಚೌಹಾಣ್ ಕೂಡ ಧ್ವನಿಗೂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗುವವರೆಗೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಕೊಲೆಯತ್ನ ಹಾಗೂ ಜೀವಕ್ಕೆ ಅಪಾಯ ತರುವಂತೆ ಅತಿವೇಗದ ಚಾಲನೆ ನಿಯಮಗಳ ಅಡಿಯಲ್ಲಿ ತನಿಖೆ ತೀವ್ರಗೊಂಡಿದೆ. ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ಸಾಬೀತಾದರೆ ಆರೋಪಿಗೆ ಜಾಮೀನು ರಹಿತ ಬಂಧನ ಹಾಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ರೈಡಿಂಗ್ ಗೇರ್ಸ್ ಮಹತ್ವ: ಅಪಘಾತದ ರಭಸಕ್ಕೆ ಬೈಕ್ ಕಿಡಿಗಳನ್ನು ಕಾರುತ್ತಾ ರಸ್ತೆಯಲ್ಲಿ ಎಳೆದೊಯ್ದಿದ್ದರೂ, ಸಿಯಾ ಅವರು ಗುಣಮಟ್ಟದ ರೈಡಿಂಗ್ ಜಾಕೆಟ್ ಮತ್ತು ಹೆಲ್ಮೆಟ್ ಧರಿಸಿದ್ದರಿಂದ ಸಂಭವನೀಯ ಮಾರಣಾಂತಿಕ ಗಾಯಗಳಿಂದ ಪಾರಾಗಿದ್ದಾರೆ.

ಪೊಲೀಸರ ಕಟ್ಟುನಿಟ್ಟಿನ ಕ್ರಮ: ಮಹಿಳೆಯರ ಸುರಕ್ಷತೆ ಮತ್ತು ರಾಜಧಾನಿ ವಲಯದ ರಸ್ತೆಗಳಲ್ಲಿ ಪುಂಡಾಟಿಕೆ ನಡೆಸುವ ಚಾಲಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಗುರುಗ್ರಾಮ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us