AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರದಲ್ಲೂ ತುಂಬಿ ತುಳುಕಿದ ಬೇಲೂರು ಹಳೆಬೀಡು ಕೆರೆಗಳು: ಎತ್ತಿನಹೊಳೆ ಯೋಜನೆಯ ಪರಿಣಾಮ!

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿರುವ ನಡುವೆಯೂ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡು ಹೋಬಳಿಯ 20ಕ್ಕೂ ಹೆಚ್ಚು ಕೆರೆಗಳು ಎತ್ತಿನಹೊಳೆ ಯೋಜನೆಯ ನೀರಿನಿಂದ ತುಂಬಿ ಕೋಡಿ ಬಿದ್ದಿವೆ. ಸಮುದ್ರ ಸೇರುತ್ತಿದ್ದ ನೀರು ಬಯಲುಸೀಮೆಯ ಕೆರೆಗಳಿಗೆ ಹರಿದುಬರುತ್ತಿದ್ದು, ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೆ ಕೊಂಚ ಪರಿಹಾರ ಒದಗಿಸಿದೆ.

ಬರದಲ್ಲೂ ತುಂಬಿ ತುಳುಕಿದ ಬೇಲೂರು ಹಳೆಬೀಡು ಕೆರೆಗಳು: ಎತ್ತಿನಹೊಳೆ ಯೋಜನೆಯ ಪರಿಣಾಮ!
ಬರದಲ್ಲೂ ತುಂಬಿ ತುಳುಕಿದ ಹಳೆಬೀಡು ಕೆರೆಗಳುImage Credit source: tv9
ಮಂಜುನಾಥ ಕೆಬಿ
| Edited By: |

Updated on: Sep 15, 2026 | 12:30 PM

Share

ಮುಖ್ಯಾಂಶಗಳು

  • ಬರದ ನಡುವೆಯೂ ಹಳೆಬೀಡಿನ ಕೆರೆಗಳು ಭರ್ತಿ
  • ಎತ್ತಿನಹೊಳೆ ನೀರಿನಿಂದ ಹತ್ತಾರು ಕೆರೆಗಳಿಗೆ ಜೀವ
  • ಜನ-ಜಾನುವಾರುಗಳ ಕುಡಿಯುವ ನೀರಿಗೆ ನಿರಾಳತೆ

ಹಾಸನ, ಸೆಪ್ಟೆಂಬರ್ 15: ಕರ್ನಾಟಕದೆಲ್ಲೆಡೆ ಭೀಕರ ಬರಗಾಲ ಆವರಿಸಿದ್ದು, ಹಲವು ಜಿಲ್ಲೆಗಳಲ್ಲಿ ಕೆರೆಕಟ್ಟೆಗಳು ಬತ್ತಿಹೋಗಿವೆ. ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿದಿದ್ದು, ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಹೇಗೆ ಎಂಬ ಆತಂಕ ಎದುರಾಗಿದೆ. ರಾಜ್ಯದ 101 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇಂತಹ ಬರದ ವಾತಾವರಣದ ನಡುವೆಯೂ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡು ಹೋಬಳಿಯ ಕೆರೆಗಳು ಮಾತ್ರ ತುಂಬಿ ತುಳುಕುತ್ತಿವೆ. ಹಲವು ಕೆರೆಗಳು ಕೋಡಿ ಬಿದ್ದಿದ್ದು, ಸುತ್ತಮುತ್ತಲಿನ ತೋಟಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ಎತ್ತಿನಹೊಳೆ ಯೋಜನೆಯೇ ಪ್ರಮುಖ ಕಾರಣ!

ಹಳೆಬೀಡು ಹೋಬಳಿಯ 20ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಲು ಎತ್ತಿನಹೊಳೆ ಯೋಜನೆಯೇ ಪ್ರಮುಖ ಕಾರಣವಾಗಿದೆ. ಪಶ್ಚಿಮಘಟ್ಟದಲ್ಲಿ ಸುರಿಯುವ ಮಳೆನೀರು ಸಮುದ್ರ ಸೇರುವ ಬದಲು ಬಯಲುಸೀಮೆಯ ಭಾಗಗಳಿಗೆ ಹರಿದುಬರುತ್ತಿದ್ದು, ಕೆರೆಕಟ್ಟೆಗಳನ್ನು ತುಂಬಿಸುತ್ತಿದೆ. ಇದರಿಂದ ಬರದ ನಡುವೆಯೂ ಈ ಭಾಗದಲ್ಲಿ ಜಲಕ್ರಾಂತಿಯ ವಾತಾವರಣ ಸೃಷ್ಟಿಯಾಗಿದೆ.

ಉದ್ದೇಶಿತ ಜಿಲ್ಲೆಗಳಿಗೆ ಇನ್ನಷ್ಟೇ ತಲುಪಬೇಕಿರುವ ಎತ್ತಿನಹೊಳೆ ನೀರು

ದಶಕದ ಹಿಂದೆ ಹಲವು ವಿರೋಧಗಳ ನಡುವೆಯೇ ಆರಂಭಗೊಂಡ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 2023ರಿಂದ ನೀರು ಹರಿಸುವ ಕಾರ್ಯ ಆರಂಭವಾಗಿದೆ. ಯೋಜನೆಯ ಉದ್ದೇಶಿತ ಜಿಲ್ಲೆಗಳಿಗೆ ಇನ್ನೂ ಸಂಪೂರ್ಣ ಪ್ರಮಾಣದಲ್ಲಿ ನೀರು ಹರಿಯದಿದ್ದರೂ, ಮಳೆಗಾಲದಲ್ಲಿ ಸಮುದ್ರ ಸೇರುತ್ತಿದ್ದ ನೀರು ಈಗ ಬಯಲುಸೀಮೆಯ ಹಲವು ಕೆರೆಗಳಿಗೆ ಹರಿದುಬರುತ್ತಿದೆ.

24 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುವ ಭಾರೀ ಮಳೆಯಿಂದ ಎತ್ತಿನಹೊಳೆ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತದೆ. ಈ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ದಕ್ಷಿಣ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 24 ಟಿಎಂಸಿ ನೀರನ್ನು ಬಳಸಿಕೊಳ್ಳುವ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಬರೋಬ್ಬರಿ 24 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ.

ಯಾವೆಲ್ಲ ಕೆರೆಗಳಿಗೆ ಹರಿಯುತ್ತಿದೆ ಎತ್ತಿನಹೊಳೆ ನೀರು?

ಹಳೆಬೀಡು ಭಾಗದಲ್ಲಿ ಹೊಂಬಗೆರೆ ಬಳಿಯಿಂದ ಹರಿದುಬರುವ ನೀರು ಕಾಗೇದಹಳ್ಳದ ಮೂಲಕ ಐತಿಹಾಸಿಕ ದ್ವಾರಸಮುದ್ರ ಕೆರೆಗೆ ಸೇರುತ್ತಿದೆ. ಇದರಿಂದ ದ್ವಾರಸಮುದ್ರ ಕೆರೆ ತುಂಬಿ ತುಳುಕುತ್ತಿದೆ. ಅಲ್ಲಿಂದ ವೇದಾವತಿ ನದಿಯ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಕೆರೆ, ಮತಿಘಟ್ಟ ಸೇರಿದಂತೆ ಹಲವು ಪ್ರದೇಶಗಳಿಗೆ ನೀರು ಹರಿಯುತ್ತಿದೆ. ಬಳಿಕ ಈ ನೀರು ವಾಣಿವಿಲಾಸ ಸಾಗರದತ್ತ ಸಾಗುತ್ತಿದೆ. ಸಂಪಿಗೆಮರದಕೊಪ್ಪಲು ಬಳಿ ತಿರುವು ಪಡೆಯುವ ಎತ್ತಿನಹೊಳೆ ಕಾಲುವೆಯಿಂದ ಅಡಗೂರು ಕೆರೆ, ದಾಸಗೊಂಡನಹಳ್ಳಿ ಕೆರೆ, ಗಟ್ಟದಹಳ್ಳಿ ರಾಜಗೆರೆ, ಕ್ಯಾತನಕೆರೆ, ದ್ಯಾವಪ್ಪನಕೆರೆ ಸೇರಿದಂತೆ ಹತ್ತಾರು ಕೆರೆಗಳು ಭರ್ತಿಯಾಗಿವೆ. ಕೆರೆಗಳು ತುಂಬಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ವಾತಾವರಣ ನಿರ್ಮಾಣವಾಗಿದ್ದು, ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯೂ ಸ್ವಲ್ಪಮಟ್ಟಿಗೆ ತಗ್ಗುವ ನಿರೀಕ್ಷೆ ಮೂಡಿದೆ.

ಕೆರೆಗಳಿಗೆ ಎತ್ತಿನಹೊಳೆ ನೀರು: ರೈತರು ಹೇಳುವುದೇನು?

ಆದರೆ, ಕೆರೆಗಳು ತುಂಬಿದ ಮಾತ್ರಕ್ಕೆ ರೈತರ ದೊಡ್ಡ ಪ್ರಮಾಣದ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಸಿಗುವುದಿಲ್ಲ ಎಂಬುದು ರೈತರ ಅಭಿಪ್ರಾಯ. ಆದರೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂದರ್ಭದಲ್ಲಿ ಕೆರೆಗಳು ತುಂಬಿರುವುದು ಜನರಿಗೆ ಮತ್ತು ಜಾನುವಾರುಗಳಿಗೆ ನೆಮ್ಮದಿ ತಂದಿದೆ. ಶತಮಾನಗಳಲ್ಲೇ ಕಂಡು ಕೇಳರಿಯದಂತಹ ಭೀಕರ ಬರದ ಆತಂಕದ ನಡುವೆ, ಮರಳುಗಾಡಿನ ಓಯಸಿಸ್‌ನಂತೆ ಹರಿಯುತ್ತಿರುವ ಎತ್ತಿನಹೊಳೆ ನೀರು ಹತ್ತಾರು ಕೆರೆಗಳನ್ನು ತುಂಬಿಸಿ ಅನ್ನದಾತರಿಗೆ ಕೊಂಚ ಸಮಾಧಾನ ತಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us