- TV9 Kannada Sports Cricket news Brendan Taylor Breaks Sachin's ODI Longevity Record: 22+ Year Career Milestone
ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ 40 ವರ್ಷದ ಜಿಂಬಾಬ್ವೆ ಕ್ರಿಕೆಟಿಗ
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಅವರು ಸಚಿನ್ ತೆಂಡೂಲ್ಕರ್ ಅವರ 22 ವರ್ಷ, 91 ದಿನಗಳ ಏಕದಿನ ಕ್ರಿಕೆಟ್ ಆಡಿದ ದಾಖಲೆಯನ್ನು ಮುರಿದಿದ್ದಾರೆ. ಈಗ ಟೇಲರ್ 22 ವರ್ಷ, 148 ದಿನಗಳ ಕಾಲ ODI ಆಡಿ ಅತಿ ಹೆಚ್ಚು ಸಮಯ ಕ್ರಿಕೆಟ್ ಆಡಿದ ಆಟಗಾರ ಎನಿಸಿದ್ದಾರೆ. ನಿಷೇಧ, ನಿವೃತ್ತಿ ನಂತರವೂ ಮರಳಿ ಈ ದಾಖಲೆ ಬರೆದಿದ್ದಾರೆ.
Updated on: Sep 15, 2026 | 4:22 PM

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಅನುಭವಿ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಮೈದಾನಕ್ಕೆ ಕಾಲಿಟ್ಟ ತಕ್ಷಣ ಇಷ್ಟು ದಿನ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯೊಂದನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕಾಲ ಆಡಿದ ಆಟಗಾರರ ಪಟ್ಟಿಯಲ್ಲಿ ಇದೀಗ ಜಿಂಬಾಬ್ವೆಯ 40 ವರ್ಷದ ಲೆಜೆಂಡರಿ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್, ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಬ್ರೆಂಡನ್ ಟೇಲರ್ ಅವರ ಏಕದಿನ ವೃತ್ತಿಜೀವನ ಆರಂಭವಾಗಿ ಇಂದಿಗೆ 22 ವರ್ಷ ಮತ್ತು 148 ದಿನಗಳಾಗಿವೆ. ಇದರೊಂದಿಗೆ ಅವರು ಪುರುಷರ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಆಡಿದ ಆಟಗಾರರಾಗಿದ್ದಾರೆ.

ಈ ಮೊದಲು ಸಚಿನ್ ತೆಂಡೂಲ್ಕರ್ 22 ವರ್ಷ 91 ದಿನಗಳ ಏಕದಿನ ಕ್ರಿಕೆಟ್ ಆಡಿದ ವಿಶ್ವ ದಾಖಲೆಯನ್ನು ಹೊಂದಿದ್ದರು. ಇದೀಗ ಟೇಲರ್, ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಟೇಲರ್ 2004 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ 18 ನೇ ವಯಸ್ಸಿನಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಇಂದು, 40 ನೇ ವಯಸ್ಸಿನಲ್ಲಿ, ಅವರು ಆಸ್ಟ್ರೇಲಿಯಾ ವಿರುದ್ಧ ಮೈದಾನಕ್ಕಿಳಿಯುವ ಮೂಲಕ 22 ವರ್ಷ 148 ದಿನಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.

ಆದಾಗ್ಯೂ ಟೇಲರ್ ಅವರ ವೃತ್ತಿಜೀವನದ ಪ್ರಯಾಣ ಏರಿಳಿತಗಳಿಂದ ಕೂಡಿದೆ. 2021 ರಲ್ಲಿ ನಿವೃತ್ತ ಘೋಷಿಸಿದ್ದ ಟೇಲರ್ಗೆ ಐಸಿಸಿಯಿಂದಯೂ ಮೂರುವರೆ ವರ್ಷಗಳ ನಿಷೇಧದ ಶಿಕ್ಷೆ ಎದುರಾಗಿತ್ತು. ಈ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಂಡ ಟೇಲರ್ 2025 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. ಅಲ್ಲದೆ ಜಿಂಬಾಬ್ವೆ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು (11) ಶತಕಗಳನ್ನು ಬಾರಿಸಿದ ದಾಖಲೆಯೂ ಟೇಲರ್ ಹೆಸರಿನಲ್ಲಿದೆ.

40 ನೇ ವಯಸ್ಸಿನಲ್ಲಿಯೂ ಸಹ, ಬ್ರೆಂಡನ್ ಟೇಲರ್ ಅವರ ಫಿಟ್ನೆಸ್ಗೆ ಸಾಟಿಯಿಲ್ಲ. ಇಂದು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಇನ್-ಫಾರ್ಮ್ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ನೀಡಿದ ಕ್ಯಾಚನ್ನು ಡೈವಿಂಗ್ ಮಾಡುವ ಮೂಲಕ ಹಿಡಿದರು. ಅವರ ಕ್ಯಾಚ್ ಹರಾರೆಯ ಅಭಿಮಾನಿಗಳನ್ನು ರೋಮಾಂಚನಗೊಳಿಸಿತು. ತಮ್ಮ ಈ ಐತಿಹಾಸಿಕ ಪಂದ್ಯದಲ್ಲಿ ಟೇಲರ್ ಅವರ ಬ್ಯಾಟಿಂಗ್ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.




