ಕೊವಿಡ್ ನಿರ್ವಹಣೆಯಲ್ಲಿ ನ್ಯಾಯಾಲಯದ ಪಾತ್ರಕ್ಕೆ ಶಾಲಾ ಬಾಲಕಿಯ ಮೆಚ್ಚುಗೆ ಪತ್ರ; ಮುಖ್ಯ ನ್ಯಾಯಮೂರ್ತಿಯ ಮನಮುಟ್ಟುವ ಉತ್ತರ
ಕೇರಳದ 5ನೇ ತರಗತಿಯ ವಿದ್ಯಾರ್ಥಿನಿ ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಕೊವಿಡ್ ನಿರ್ವಹಣೆ ವಿಚಾರದಲ್ಲಿ ಸುಪ್ರೀಂಕೋರ್ಟ್ನ ಸಕಾಲಿಕ ಮಧ್ಯಪ್ರವೇಶ ಮತ್ತು ಹಲವು ಉತ್ತಮ ತೀರ್ಪುಗಳನ್ನು ನೀಡಿದ್ದಕ್ಕಾಗಿ ಅಭಿನಂದಿಸಿದ್ದಾಳೆ.
ದೆಹಲಿ: ಕೇರಳದ 5ನೇ ತರಗತಿಯ ವಿದ್ಯಾರ್ಥಿನಿ ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಕೊವಿಡ್ ನಿರ್ವಹಣೆ ವಿಚಾರದಲ್ಲಿ ಸುಪ್ರೀಂಕೋರ್ಟ್ನ ಸಕಾಲಿಕ ಮಧ್ಯಪ್ರವೇಶ ಮತ್ತು ಹಲವು ಉತ್ತಮ ತೀರ್ಪುಗಳನ್ನು ನೀಡಿದ್ದಕ್ಕಾಗಿ ಅಭಿನಂದಿಸಿದ್ದಾಳೆ. ಬಾಲಕಿಯ ಪತ್ರಕ್ಕೆ ಮೆಚ್ಚುಗೆ ಸೂಚಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪತ್ರ ಬರೆದ ಬಾಲಕಿಗೆ ಮಾರೋಲೆ ಬರೆದು ಉತ್ತರಿಸಿದ್ದಾರೆ.
ದೇಶದಲ್ಲಿ, ಮುಖ್ಯವಾಗಿ ದೆಹಲಿಯಲ್ಲಿ ಕೊವಿಡ್-19ರಿಂದ ಸಂಭವಿಸುತ್ತಿದ್ದ ಸಾವುಗಳ ಪ್ರಮಾಣವು ಕಡಿಮೆಯಾಗಲು ಮತ್ತು ಎಲ್ಲ ರಾಜ್ಯಗಳಿಗೆ ಸಕಾಲಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕ ದೊರೆಯಲು ಸುಪ್ರೀಂಕೋರ್ಟ್ ನೀಡಿದ ತೀರ್ಪುಗಳು ಕಾರಣ. ನನಗೆ ನಮ್ಮ ನ್ಯಾಯಾಲಯದ ಬಗ್ಗೆ ಹೆಮ್ಮೆ ಮತ್ತು ಸಂತಸವಿದೆ ಎಂದು ಕೇರಳದ ತ್ರಿಶೂರ್ನ ಕೇಂದ್ರೀಯ ವಿದ್ಯಾಲಯದಲ್ಲಿ 5ನೇ ತರಗತಿ ಓದುತ್ತಿರುವ ಲಿಂಡ್ವಿನಾ ಜೋಸೆಫ್ ಕೈಬರಹದ ಪತ್ರವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದಿದ್ದಳು.
ನ್ಯಾಯಾಧೀಶರೊಬ್ಬರು ಕೊರೊನಾ ವೈರಾಣುವನ್ನು ತಮ್ಮ ಮರದ ಸುತ್ತಿಗೆಯಿಂದ ಹೊಡೆಯುತ್ತಿರುವ ದೃಶ್ಯವಿರುವ ಚಿತ್ರವೊಂದನ್ನು ಬಾಲಕಿ ತನ್ನ ಪತ್ರದ ಜೊತೆಗೆ ಇರಿಸಿದ್ದಳು. ತ್ರಿವರ್ಣದ ರಾಷ್ಟ್ರಧ್ವಜ, ನಾಲ್ಕುತಲೆ ಸಿಂಹದ ರಾಷ್ಟ್ರ ಲಾಂಛನ ಮತ್ತು ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರನ್ನೂ ಬಾಲಕಿ ತನ್ನ ಚಿತ್ರದಲ್ಲಿ ಸೇರಿಸಿದ್ದಳು.
ಬಾಲಕಿಯ ಪತ್ರ ಹೀಗಿದೆ.. ‘ನಾನು ಲಿಂಡ್ವಿನಾ ಜೋಸೆಫ್. ತ್ರಿಶೂರ್ ಕೇಂದ್ರೀಯ ವಿದ್ಯಾಲಯದಲ್ಲಿ 5ನೇ ತರಗತಿ ಓದುತ್ತಿದ್ದೇನೆ. ದಿ ಹಿಂದೂ ಪತ್ರಿಕೆಯಿಂದ ಭಾರತಕ್ಕೆ ಸಂಬಂಧಿಸಿದ ಹಲವು ಸುದ್ದಿ ಪ್ರತಿದಿನ ಓದುತ್ತೇನೆ. ದೆಹಲಿ ಮತ್ತು ದೇಶದ ಇತರ ಪ್ರದೇಶಗಳಲ್ಲಿ ಕೊವಿಡ್ನಿಂದ ಸಂಭವಿಸುತ್ತಿದ್ದ ಸಾವುಗಳಿಂದ ನನಗೆ ಬೇಸರವಾಗುತ್ತಿತ್ತು. ಗೌರವಾನ್ವಿತ ನ್ಯಾಯಾಲಯವು ಸಕಾಲಕ್ಕೆ ಮಧ್ಯಪ್ರವೇಶಿಸಿ ಕೊವಿಡ್-19ರಿಂದ ಸಾಮಾನ್ಯ ಜನರ ಸಾವು ಮತ್ತು ನೋವು ತಗ್ಗಿಸಲು ನೆರವಾದ ವಿಚಾರ ತಿಳಿದು ಸಂತೋಷ ಮತ್ತು ಹೆಮ್ಮೆ ಎನಿಸಿತು. ಆಮ್ಲಜನಕದ ಬಗ್ಗೆ ನ್ಯಾಯಾಲಯವು ನೀಡಿದ ಹಲವು ಆದೇಶಗಳಿಂದ ಅನೇಕರ ಜೀವ ಉಳಿಯಿತು. ಕೊವಿಡ್-19 ಸೋಂಕು ಹರಡುವ ವೇಗ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡಲು ನ್ಯಾಯಾಲಯದ ಸಕಾಲಿಕ ಮಧ್ಯಪ್ರವೇಶದಿಂದ ಸಾಧ್ಯವಾಯಿತು ಎಂಬ ವಿಚಾರ ತಿಳಿದುಕೊಂಡೆ. ನನಗೆ ನ್ಯಾಯಾಲಯದ ಬಗ್ಗೆ ಅತೀವ ಹೆಮ್ಮೆ ಮತ್ತು ಸಂತೋಷವಾಗಿದೆ’ ಎಂದು ಬಾಲಕಿ ಪತ್ರದಲ್ಲಿ ಹೇಳಿದ್ದಳು.
ಬಾಲಕಿಯ ಪತ್ರವನ್ನು ಮೆಚ್ಚಿಕೊಂಡ ಮುಖ್ಯನ್ಯಾಯಮೂರ್ತಿ ಹೃದಯಸ್ಪರ್ಶಿ ಉತ್ತರವನ್ನು ಬಾಲಕಿಗೆ ಕಳಿಸಿಕೊಟ್ಟಿದ್ದಾರೆ. ಮುಖ್ಯನ್ಯಾಯಮೂರ್ತಿ ಬರೆದಿರುವ ಪತ್ರದ ಒಕ್ಕಣೆ ಹೀಗಿದೆ.. ‘ಪ್ರೀತಿಯ ಲಿಡ್ವಿನಾ, ನಿನ್ನ ಸುಂದರ ಪತ್ರ ಮತ್ತು ನ್ಯಾಯಾಧೀಶರೊಬ್ಬರು ಕೆಲಸ ಮಾಡುತ್ತಿರುವ ರೀತಿಯಲ್ಲಿ ನೀನು ಬರೆದಿರುವ ಚಿತ್ರ ನನಗೆ ತಲುಪಿದೆ. ದೇಶದ ವಿದ್ಯಮಾನಗಳ ಬಗ್ಗೆ ನೀನು ಚೆನ್ನಾಗಿ ತಿಳಿದುಕೊಳ್ಳುತ್ತಿದ್ದೀಯ. ಪಿಡುಗಿನ ಅವಧಿಯಲ್ಲಿ ದೇಶದ ಜನರ ಹಿತದ ಬಗ್ಗೆ ಯೋಚಿಸಿ, ಕಾಳಜಿ ತೋರಿಸಿದ ವಿಚಾರವು ನನಗೆ ಮೆಚ್ಚುಗೆಯಾಗಿದೆ. ನೀನು ಈ ದೇಶದ ಓರ್ವ ಪ್ರಜ್ಞಾವಂತ ಪ್ರಜೆಯಾಗಿ ಬೆಳೆಯುತ್ತಿ. ದೇಶ ಕಟ್ಟಲು ಸಾಕಷ್ಟು ಕೊಡುಗೆ ನೀಡುತ್ತಿ ಎಂಬ ವಿಶ್ವಾಸ ನನಗಿದೆ. ನಿನಗೆ ಒಳ್ಳೆಯದಾಗಲಿ. ನಿನ್ನ ಸಂಪೂರ್ಣ ಯಶಸ್ಸಿಗೆ ಆಶೀರ್ವಾದ ಸಿಗಲಿ’ ಎಂದು ನ್ಯಾಯಮೂರ್ತಿ ರಮಣ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಪತ್ರದ ಜೊತೆಗೆ ತಮ್ಮ ಹಸ್ತಾಕ್ಷರವಿರುವ ಸಂವಿಧಾನದ ಪ್ರತಿಯನ್ನೂ ನ್ಯಾಯಮೂರ್ತಿ ರಮಣ ಕಳಿಸಿಕೊಟ್ಟಿದ್ದಾರೆ.
(Supreme court cji Ramana sends heartwarming reply to schoolgirl of kerala who lauded judicial role in containing covid)
ಇದನ್ನೂ ಓದಿ: ಕೊವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣಕ್ಕೆ ತೊಡಕುಂಟಾಗದಂತೆ ನೋಡಿಕೊಳ್ಳಿ: ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ
ಇದನ್ನೂ ಓದಿ: ಪಿಎಂ ಕೇರ್ಸ್ ಯೋಜನೆ ಬಗ್ಗೆ ಪ್ರೆಸ್ ನೋಟ್ ಬಿಟ್ಟು ಬೇರೆ ವಿವರವಿಲ್ಲ: ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ ಅಮಿಕಸ್ ಕ್ಯೂರಿ
Published On - 5:57 pm, Tue, 8 June 21