
ನವದೆಹಲಿ, ಸೆಪ್ಟೆಂಬರ್ 28: 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಲಾಗಿರುವ ಮೂರು ಭಾಷಾ ನೀತಿಯ ವಿನಾಯಿತಿಯನ್ನೇ 6ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್ ಸಿಬಿಎಸ್‌ಇಗೆ ನಿರ್ದೇಶನ ನೀಡಿದೆ. ಸುಮಾರು ಶೇ. 99ರಷ್ಟು ಸಿಬಿಎಸ್‌ಇ ಶಾಲೆಗಳು ಈ ನೀತಿಯನ್ನು ಜಾರಿಗೆ ತರಲು ಸಿದ್ಧವಾಗಿವೆ ಎಂದು ಉಲ್ಲೇಖಿಸಿ, 6ನೇ ತರಗತಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಒಲವು ತೋರಿರಲಿಲ್ಲ. ಆದರೂ ಸುಪ್ರೀಂ ಕೋರ್ಟ್ 6ನೇ ತರಗತಿಯ ವಿದ್ಯಾರ್ಥಿಗಳಿಗೂ ಈ ತ್ರಿಭಾಷಾ ನೀತಿಯಿಂದ ವಿನಾಯಿತಿ ನೀಡುವಂತೆ ಆದೇಶಿಸಿದೆ.
ಪ್ರಸ್ತುತ 6ನೇ ತರಗತಿಯ ಬ್ಯಾಚ್‌ಗೆ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಿದಂತೆ ವಿನಾಯಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇದರೊಂದಿಗೆ, ಕಡ್ಡಾಯ ಭಾಷಾ ಅಗತ್ಯತೆಗೆ ಸಂಬಂಧಿಸಿದ ಬೃಹತ್ ಮುಖ್ಯ ವಿಷಯವನ್ನು ನ್ಯಾಯಾಲಯವು ಮುಂಬರುವ ದಿನಗಳಲ್ಲಿ ವಿಸ್ತೃತವಾಗಿ ಪರಿಶೀಲಿಸಲಿದೆ.
ವಿಚಾರಣೆಯ ಸಮಯದಲ್ಲಿ, ಈಗಾಗಲೇ ನಿರ್ದಿಷ್ಟ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹೊಸ ಭಾಷಾ ಚೌಕಟ್ಟನ್ನು ಪರಿಚಯಿಸುವ ಬಗ್ಗೆ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿತು. ಅರ್ಜಿದಾರ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹಿರಿಯ ಅಧಿಕಾರಿಗಳ ಸಮಿತಿಯೊಂದನ್ನು ರಚಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಸಲಹೆ ನೀಡಿದರು. ಆದರೆ, ಪೋಷಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮತ್ತೊಂದು ಸಮಿತಿ ರಚನೆಯ ಸಲಹೆಯನ್ನು ವಿರೋಧಿಸಿ, ನೇರ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದರು.
ಇದನ್ನೂ ಓದಿ: 2027 ರ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗೆ ಸಿದ್ಧತೆ ಮತ್ತು ಮಂಡಳಿಯ ಕಟ್ಟುನಿಟ್ಟಿನ ಸೂಚನೆ
4ನೇ ತರಗತಿಯಿಂದ ನಿರ್ದಿಷ್ಟ ವಿಷಯಗಳು ಮತ್ತು ಭಾಷೆಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಈಗ ದಿಢೀರನೆ ಭಾಷೆಯನ್ನು ಬದಲಾಯಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಶಂಕರನಾರಾಯಣನ್ ಕೋರ್ಟ್ ಗಮನಕ್ಕೆ ತಂದರು. ಸಿಬಿಎಸ್‌ಇ ಮಂಡಳಿಯ ಕಡ್ಡಾಯ ಭಾಷಾ ಬದಲಾವಣೆಯು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಪೋಷಕರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಕೇಂದ್ರದ ಅಫಿಡವಿಟ್ ಏನೇ ಇದ್ದರೂ, ಪುಸ್ತಕಗಳು ಆನ್‌ಲೈನ್‌ನಲ್ಲಿ ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ ಮತ್ತು ವಿದ್ಯಾರ್ಥಿಗಳಿಗೆ ಭೌತಿಕ ಪಠ್ಯಪುಸ್ತಕಗಳು ಇಂದಿಗೂ ಲಭ್ಯವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆಮ್ಮದಿ ಅಗತ್ಯ ಎಂದ ನ್ಯಾಯಪೀಠ:
ಈ ಭಾಷಾ ಬದಲಾವಣೆಯ ಕಾರಣದಿಂದಾಗಿ ವಿದ್ಯಾರ್ಥಿಗಳು ಯಾವುದೇ ಹೆಚ್ಚುವರಿ ಸಂಕಷ್ಟ ಅಥವಾ ಒತ್ತಡವನ್ನು ಎದುರಿಸಬಾರದು ಎಂದು ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ತಿಳಿಸಿದರು. “ನಮಗೆ ವಿದ್ಯಾರ್ಥಿಗಳ ಶೈಕ್ಷಣಿಕ ನೆಮ್ಮದಿ ಮುಖ್ಯವೇ ಹೊರತು ಸಂಕಷ್ಟವಲ್ಲ. ನಾವು ಅವರಿಗೆ ಸದಾ ಸವಾಲು ಒಡ್ಡಲು ಬಯಸುವುದಿಲ್ಲ” ಎಂದು ಅವರು ಹೇಳಿದರು.
ಸಿಬಿಎಸ್‌ಇಯ ಮೂರು ಭಾಷಾ ಮಾರ್ಗದರ್ಶಿ ಸೂತ್ರಗಳು:
ಆಯ್ಕೆ ಮಾಡಿಕೊಳ್ಳುವ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ‘ಭಾರತೀಯ ಭಾಷೆಗಳು’ ಆಗಿರಬೇಕು. ಉಳಿದ 2 ಭಾಷೆಗಳು ಭಾರತೀಯ ಭಾಷೆಗಳಾಗಿದ್ದಲ್ಲಿ, ಮೂರನೇ ಭಾಷೆಯಾಗಿ ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: 9ನೇ ತರಗತಿಯಿಂದಲೇ ಏಕೆ?; ಸಿಬಿಎಸ್‌ಇ ತ್ರಿಭಾಷಾ ನೀತಿಗೆ ಸುಪ್ರೀಂ ಕೋರ್ಟ್ ಆಕ್ಷೇಪ
10ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ಎರಡು ಭಾಷೆಗಳ ಪದ್ಧತಿಯನ್ನೇ ಮುಂದುವರಿಸಲಾಗುವುದು. ಈ ವರ್ಷದ ಬ್ಯಾಚ್‌ನ ವಿದ್ಯಾರ್ಥಿಗಳು ಯಾವುದೇ ಮೂರನೇ ಭಾಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. 9ನೇ ತರಗತಿಯ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಅಭ್ಯಾಸ ಮಾಡಲಿದ್ದು, ಅವುಗಳಲ್ಲಿ ಕನಿಷ್ಠ ಒಂದಾದರೂ ಭಾರತೀಯ ಭಾಷೆಯಾಗಿರಬೇಕು. ಈ ಮೂರನೇ ಭಾಷೆಯನ್ನು ಶಾಲೆಗಳು ಕೇವಲ ಆಂತರಿಕ ಮೌಲ್ಯಮಾಪನದ ಮೂಲಕ ಮಾತ್ರ ಮೌಲ್ಯಮಾಪನ ಮಾಡುತ್ತವೆ. ಈ ಬ್ಯಾಚ್ 2027-28ರಲ್ಲಿ 10ನೇ ತರಗತಿಗೆ ತಲುಪಿದಾಗ ಈ ಮೂರನೇ ಭಾಷೆಗೆ ಯಾವುದೇ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಇರುವುದಿಲ್ಲ.
ಭಾರತೀಯ ಭಾಷೆಗಳು: ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಬೆಂಗಾಲಿ, ಪಂಜಾಬಿ, ಗುಜರಾತಿ, ಒಡಿಯಾ, ಅಸ್ಸಾಮಿ ಮುಂತಾದವು.
Supreme Court has directed the CBSE to extend to Class VI (sixth) students the same exemption from the Class X Board examination of the newly implemented “third language” that is currently available to students in Classes VII (seventh) and VIII (eighth) under the new… pic.twitter.com/zbT8xfEuWW
— ANI (@ANI) September 28, 2026
ವಿದೇಶಿ ಭಾಷೆಗಳು: ಇಂಗ್ಲಿಷ್, ಫ್ರೆಂಚ್, ಜರ್ಮನ್, ಅರೇಬಿಕ್, ಸ್ಪ್ಯಾನಿಷ್ ಮುಂತಾದವು.
ಏನಿದು ಮೂರು ಭಾಷಾ ಸೂತ್ರ?:
ಸಿಬಿಎಸ್‌ಇ ಪ್ರೌಢಶಾಲಾ ಪಠ್ಯಕ್ರಮದ ಪ್ರಕಾರ, ಭಾಷಾ ವಿಷಯಗಳನ್ನು ಮೂರು ಹಂತಗಳಾಗಿ ವಿಂಗಡಿಸಲಾಗುತ್ತದೆ.
R1 (ಭಾಷೆ 1): ವಿದ್ಯಾರ್ಥಿಯ ಮುಖ್ಯ ಭಾಷೆಯಾಗಿರುತ್ತದೆ.
R2 (ಭಾಷೆ 2): ಮತ್ತೊಂದು ವಿಭಿನ್ನ ಭಾಷೆಯಾಗಿರುತ್ತದೆ.
R3 (ಭಾಷೆ 3): ಈ ಪ್ರಸ್ತುತ ಶೈಕ್ಷಣಿಕ ವರ್ಷದಿಂದ (2026-27) 6ನೇ ತರಗತಿಯಿಂದ ಕಡ್ಡಾಯವಾಗಲಿದ್ದು, 2030- 31ರ ವೇಳೆಗೆ 10ನೇ ತರಗತಿಯವರೆಗೆ ಸಂಪೂರ್ಣವಾಗಿ ಜಾರಿಗೆ ಬರಲಿದೆ.
R1 ಮತ್ತು R2 ಹಂತಗಳಲ್ಲಿ ಆಯ್ಕೆ ಮಾಡಿದ ಭಾಷೆಗಳು ಒಂದೇ ಆಗಿರಬಾರದು ಮತ್ತು ಒಂದಕ್ಕಿಂತ ಹೆಚ್ಚು ಹಂತಗಳಲ್ಲಿ ಒಂದೇ ಸಮಯದಲ್ಲಿ ನೀಡಬಾರದು. “ಈ ಭಾಷೆಗಳಲ್ಲಿ ಭಾರತದ ಎರಡು ಅಧಿಕೃತ ಭಾಷೆಗಳಾದ ಹಿಂದಿ, ಇಂಗ್ಲಿಷ್ ಹಾಗೂ ಇತರ 42 ಭಾಷೆಗಳು ಸೇರಿವೆ. ಹೀಗಾಗಿ, ಇತರ ಭಾರತೀಯ ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳ ಜೊತೆಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಭಾಷೆಗಳನ್ನು ಒದಗಿಸಲಾಗುತ್ತಿದೆ” ಎಂದು ಸಿಬಿಎಸ್‌ಇ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಸುಪ್ರೀಂ ಕೋರ್ಟ್ ವಿಚಾರಣೆಯನ್ನು 6 ವಾರಗಳ ನಂತರ ಮುಂದೂಡಲಾಗಿದ್ದು, 4 ವಾರಗಳಲ್ಲಿ ಕೌಂಟರ್ ಅಫಿಡವಿಟ್ ಹಾಗೂ ನಂತರದ 2 ವಾರಗಳಲ್ಲಿ ಮರು-ಪ್ರತ್ಯುತ್ತರ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ