ದೆಹಲಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಎಷ್ಟು ನೀಡಬೇಕು ಎನ್ನುವುದರ ಬಗ್ಗೆ ಪರಿಹಾರ ಮೊತ್ತವನ್ನು ಸರ್ಕಾರ ನಿರ್ಧರಿಸಲಿ ಎಂದು ಸರ್ವೋಚ್ಛ ನ್ಯಾಯಾಲಯದ ಜಸ್ಟೀಸ್ ಅಶೋಕ್ ಭೂಷಣ್ ಪೀಠ ಮಹತ್ತರ ಆದೇಶ ನೀಡಿದೆ. ಪರಿಹಾರದ ಬಗ್ಗೆ ಕರ್ತವ್ಯ ನಿರ್ವಹಣೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ಡಿಎಂಎ) ವಿಫಲವಾಗಿದೆ. ಮಾರ್ಗಸೂಚಿ ರೂಪಿಸದೇ ಕರ್ತವ್ಯ ನಿರ್ವಹಿಸುವಲ್ಲಿ ಸರ್ಕಾರ ವಿಫಲಗೊಂಡಿದೆ ಎಂದು ಚಾಟಿ ಬೀಸಿರುವ ಸರ್ವೋಚ್ಛ ನ್ಯಾಯಾಲಯ, ಮುಂದಿನ ಆರು ವಾರದ ಒಳಗಾಗಿ ನಿರ್ದಿಷ್ಟ ಮಾರ್ಗಸೂಚಿ ರೂಪಿಸುವಂತೆ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಗೆ ಸೂಚಿಸಿದೆ.
ಮೃತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಅದರ ಮೊತ್ತವನ್ನು ನಿರ್ಧರಿಸುವುದು ಸರ್ಕಾರ, NDMA ವಿವೇಚನೆಗೆ ಬಿಟ್ಟದ್ದು. ಆದರೆ, ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಆ ಸಂಬಂಧ ಇನ್ನು ಆರು ವಾರದಲ್ಲಿ ಮಾರ್ಗಸೂಚಿ ರೂಪಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಜಸ್ಟೀಸ್ ಅಶೋಕ್ ಭೂಷಣ್ ಪೀಠ ಆದೇಶ ನೀಡಿದೆ.
ಕೊರೊನಾದಿಂದ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರದ ಅರ್ಜಿ ನೀಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆದಿದ್ದು, ಪರಿಹಾರ ನೀಡಲು ಕೇಂದ್ರ, ರಾಜ್ಯಗಳಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಲಾಗಿದೆ. ಆದರೆ, NDRF, SDRF ನಿಧಿಯಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ನಿನ್ನೆ (ಜೂನ್ 29) ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗೆ ರಾಷ್ಟ್ರೀಯ ಪೋರ್ಟಲ್ ರಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೊಚ್ಛ ನ್ಯಾಯಾಲಯ ಮಹತ್ತರ ಆದೇಶ ನೀಡಿತ್ತು. ಜುಲೈ 31ರ ಒಳಗೆ ಕೇಂದ್ರ ಸರ್ಕಾರ ಪೋರ್ಟಲ್ ಸಿದ್ಧಪಡಿಸಲು ಕ್ರಮ ಕೈಗೊಳ್ಳಬೇಕು. ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ರಾಷ್ಟ್ರೀಯ ಪೋರ್ಟಲ್ ಮಾಡಬೇಕು. ಜುಲೈ 31 ರ ಒಳಗೆ ಎಲ್ಲಾ ರಾಜ್ಯಗಳು ಒಂದು ರಾಷ್ಟ್ರ, ಒಂದು ಪಡಿತರ ಚೀಟಿ (ಒನ್ ನೇಷನ್, ಒನ್ ರೇಷನ್ ಕಾರ್ಡ್) ಯೋಜನೆ ಜಾರಿಗೊಳಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.
ವಲಸೆ ಕಾರ್ಮಿಕರ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಇದಾಗಿದ್ದು, ಆದೇಶದನ್ವಯ ಜುಲೈ 31 ರ ಒಳಗೆ ಎಲ್ಲಾ ರಾಜ್ಯಗಳಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಕಡ್ಡಾಯವಾಗಿ ಜಾರಿಯಾಗಬೇಕಿದೆ. ಆ ಮೂಲಕ ಪಡಿತರ ಚೀಟಿ ಇಲ್ಲದವರಿಗೆ ಆಹಾರ ಧಾನ್ಯ ವಿತರಿಸಲು ರಾಜ್ಯಗಳು ಯೋಜನೆ ರೂಪಿಸಬೇಕು ಎಂದು ತಿಳಿಸಲಾಗಿದೆ. ಅಲ್ಲದೇ, ಇದಕ್ಕೆ ಕೇಂದ್ರ ಸರ್ಕಾರ ಆಹಾರ ಧಾನ್ಯ ಹಂಚಿಕೆ ಮಾಡಬೇಕು ಎನ್ನುವುದನ್ನೂ ಸೂಚಿಸಲಾಗಿದೆ. ಇನ್ನು ಸಮುದಾಯ ಕಿಚನ್ ಸೌಲಭ್ಯದ ಬಗ್ಗೆ ಅಭಿಪ್ರಾಯ ತಿಳಿಸಿರುವ ಸರ್ವೋಚ್ಛ ನ್ಯಾಯಾಲಯ ಕೊರೊನಾ ಇರುವವರೆಗೂ ಸಮುದಾಯ ಕಿಚನ್ ಸೌಲಭ್ಯ ಮುಂದುವರಿಸಬೇಕು ಎಂಬ ಆದೇಶ ನೀಡಿದೆ.
ಇದನ್ನೂ ಓದಿ:
ಜುಲೈ 31ರ ಒಳಗೆ ಎಲ್ಲಾ ರಾಜ್ಯಗಳಲ್ಲೂ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಕಡ್ಡಾಯವಾಗಿ ಜಾರಿಯಾಗಬೇಕು: ಸುಪ್ರೀಂ ಕೋರ್ಟ್
ಕೊವಿಡ್ ನಿರ್ವಹಣೆಯ ಸ್ವಯಂ ಪ್ರೇರಿತ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್
Published On - 11:37 am, Wed, 30 June 21