
ನವದೆಹಲಿ, ನವೆಂಬರ್ 5: ಪಂಜಾಬ್ ಸರ್ಕಾರದ ತುಟ್ಟಿಭತ್ಯೆ (ಡಿಎ) ಬಾಕಿ ಪಾವತಿ ಹಾಗೂ ಮುಖ್ಯ ಕಾರ್ಯದರ್ಶಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಭಾರತದ ಸರ್ಕಾರಿ ನೌಕರರಿಗೆ ಸಿಗುತ್ತಿರುವ ಅತಿಯಾದ ಭದ್ರತೆ, ಸೌಲಭ್ಯಗಳ ಹೊರತಾಗಿಯೂ ಅವರಲ್ಲಿ ಕಡಿಮೆಯಾಗುತ್ತಿರುವ ‘ಕೆಲಸದ ಹೊಣೆಗಾರಿಕೆ’ಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಆರ್. ಮಹಾದೇವನ್ ಅವರೊಂದಿಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗರತ್ನ ಅವರ ಹೇಳಿಕೆಗಳು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿವೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದ್ದೇನು?:
ಗುತ್ತಿಗೆ ಆಧಾರದ ನೇಮಕಾತಿ ಅಗತ್ಯ:
“ಸರ್ಕಾರಿ ನೌಕರರನ್ನು ಗುತ್ತಿಗೆ ಆಧಾರದ ಮೇಲೆಯೇ ನೇಮಕ ಮಾಡಿಕೊಳ್ಳಬೇಕು. ಹಾಗೆ ಮಾಡಿದಾಗ ಮಾತ್ರ ಅವರಲ್ಲಿ ಕೆಲಸದ ಬಗ್ಗೆ ಬದ್ಧತೆ ಮತ್ತು ಜವಾಬ್ದಾರಿ ಇರುತ್ತದೆ” ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ. “ಅನೇಕರು ಹೈಕೋರ್ಟ್ ಅಥವಾ ಜಿಲ್ಲಾ ನ್ಯಾಯಾಲಯಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಸಚಿವಾಲಯಗಳಿಗೆ ವರ್ಗಾವಣೆಯಾಗುತ್ತಾರೆ. ಅಲ್ಲಿ ದಿನಕ್ಕೆ ಕೇವಲ 3 ಪುಟ ಟೈಪ್ ಮಾಡುವುದಷ್ಟೇ ಅವರ ಕೆಲಸವಾಗಿರುತ್ತದೆ!” ಎಂದು ನ್ಯಾಯಮೂರ್ತಿ ನಾಗರತ್ನ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗ, ಸಿಜೆಐ ವಿರುದ್ಧದ ಹೇಳಿಕೆಗೆ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ ಸಂಸದ ಸಂಜಯ್ ರಾವತ್
“ಒಂದು ವೇಳೆ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಿದರೆ, ಈ ದೇಶದ ನ್ಯಾಯಾಲಯಗಳಲ್ಲಿರುವ ಸಾವಿರಾರು ಮೊಕದ್ದಮೆಗಳು ಹಾಗೂ ವ್ಯಾಜ್ಯಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಸರ್ಕಾರಿ ನೌಕರರ ನಿಧನದ ನಂತರವೂ ಅವರ ಕುಟುಂಬಗಳಿಗೆ ಪಿಂಚಣಿ ಸಿಗುತ್ತದೆ. ಇಷ್ಟೆಲ್ಲಾ ಸೌಲಭ್ಯಗಳನ್ನು ನೀಡುತ್ತಿರುವಾಗ ಸರ್ಕಾರಿ ನೌಕರರ ಕರ್ತವ್ಯ ನಿಷ್ಠೆ ಮತ್ತು ಹೊಣೆಗಾರಿಕೆ ಎಲ್ಲಿದೆ?” ಎಂದು ನ್ಯಾಯಮೂರ್ತಿ ನಾಗರತ್ನ ಖಾರವಾಗಿ ಪ್ರಶ್ನಿಸಿದ್ದಾರೆ.
ಪಂಜಾಬ್ ಸರ್ಕಾರವು ತನ್ನ ನೌಕರರಿಗೆ 14,191 ಕೋಟಿ ಡಿಎ ಬಾಕಿಯನ್ನು 15 ದಿನಗಳಲ್ಲಿ ನೀಡಲು ಸಾಧ್ಯವಿಲ್ಲ ಎಂದು ಆರ್ಥಿಕ ಮುಗ್ಗಟ್ಟನ್ನು ವ್ಯಕ್ತಪಡಿಸಿದ್ದ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ ಈ ಹೇಳಿಕೆ ನೀಡಿದೆ. 14,191 ಕೋಟಿ ರೂ. ಬಾಕಿಯನ್ನು ಕೇವಲ 15 ದಿನಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಪಂಜಾಬ್ ಸರ್ಕಾರ, ರಾಜ್ಯದ ನಿಧಿಯಿಂದ ಹಣ ಹಿಂಪಡೆಯಲು ಸಂವಿಧಾನಾತ್ಮಕ ನಿಯಮಗಳಂತೆ ಶಾಸನಸಭೆಯ ಅನುಮೋದನೆ ಅಗತ್ಯವಿದ್ದು, ತಕ್ಷಣವೇ ಪಾವತಿಸುವುದು ಕಾನೂನುಬದ್ಧವಾಗಿ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತು.
6ನೇ ಪಂಜಾಬ್ ವೇತನ ಆಯೋಗದ ಪ್ರಕಾರ ಪಂಜಾಬ್‌ನಲ್ಲಿ ಮೂಲವೇತನದ ಮ್ಯಾಟ್ರಿಕ್ಸ್ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಾಗಿದೆ. ಗುಮಾಸ್ತರು, ಚಾಲಕರು, ಕಾನ್ಸ್ಟೆಬಲ್ ಸೇರಿದಂತೆ ಹಲವು ಶ್ರೇಣಿಯ ನೌಕರರು ಕೇಂದ್ರ ಸರ್ಕಾರದ ನೌಕರರಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ. ರಾಜ್ಯದ ಒಟ್ಟು ಆದಾಯದಲ್ಲಿ ಶೇ. 51ರಷ್ಟು ಭಾಗ ಕೇವಲ ಸಂಬಳ ಮತ್ತು ಪಿಂಚಣಿಗಾಗಿಯೇ ವೆಚ್ಚವಾಗುತ್ತಿದೆ. ಸಾಲದ ಬಡ್ಡಿ ಸೇರಿ ಒಟ್ಟು ಹೊಣೆಗಾರಿಕೆ ಶೇ. 82 ತಲುಪಿದ್ದು, ಪಂಜಾಬ್ ತೀವ್ರ ಆರ್ಥಿಕ ಇಕ್ಕಟ್ಟಿನಲ್ಲಿದೆ ಎಂದು ಸರ್ಕಾರ ಕೋರ್ಟ್‌ಗೆ ವಿವರಿಸಿದೆ.
ಒಂದೆಡೆ ಸರ್ಕಾರಿ ನೌಕರರು ತಮ್ಮ ಹಕ್ಕುಗಳು ಮತ್ತು ವೇತನ ಹೆಚ್ಚಳಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕರಿಗೆ ನೀಡಬೇಕಾದ ಸೇವೆಯಲ್ಲಿ ತೋರುತ್ತಿರುವ ವಿಳಂಬ ಧೋರಣೆಯನ್ನು ಎತ್ತಿಹಿಡಿದ ನ್ಯಾಯಮೂರ್ತಿ ನಾಗರತ್ನ ಅವರ ಈ ಹೇಳಿಕೆಯು, ಸರ್ಕಾರಿ ವಲಯದಲ್ಲಿ ತರಬೇಕಾದ ಆಡಳಿತಾತ್ಮಕ ಸುಧಾರಣೆಗಳ ಅಗತ್ಯವನ್ನು ಪುನರುಚ್ಚರಿಸಿದೆ. ಈ ಹೇಳಿಕೆ ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Thu, 5 November 26