AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯಾಂಗ, ಸಿಜೆಐ ವಿರುದ್ಧದ ಹೇಳಿಕೆಗೆ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ ಸಂಸದ ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಹಾಗೂ ದೇಶದ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮಾಯಾಚನೆ ಸಲ್ಲಿಸಿದ್ದಾರೆ. ತಮ್ಮ ವಿರುದ್ಧದ ಶೋಕಾಸ್ ನೋಟಿಸ್ ಹಿಂಪಡೆದು, ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಅವರು ನ್ಯಾಯಾಲಯಕ್ಕೆ ಕೋರಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್ ನವೆಂಬರ್ 17ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಸಂಜಯ್ ರಾವತ್ ಅವರಿಗೆ ನಿರ್ದೇಶನ ನೀಡಿದೆ. ಕ್ಷಮಾಯಾಚನೆ ಅರ್ಜಿಯನ್ನು ಸ್ವೀಕರಿಸಿ ಪ್ರಕರಣವನ್ನು ಕ್ಲೋಸ್ ಮಾಡಬೇಕೇ ಅಥವಾ ವಿಚಾರಣೆ ಮುಂದುವರಿಸಬೇಕೇ ಎಂಬುದನ್ನು ಸುಪ್ರೀಂ ಕೋರ್ಟ್ ನವೆಂಬರ್ 17ರಂದು ನಿರ್ಧರಿಸಲಿದೆ.

ನ್ಯಾಯಾಂಗ, ಸಿಜೆಐ ವಿರುದ್ಧದ ಹೇಳಿಕೆಗೆ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ ಸಂಸದ ಸಂಜಯ್ ರಾವತ್
ಸಂಜಯ್ ರಾವತ್Image Credit source: PTI
ಸುಷ್ಮಾ ಚಕ್ರೆ
|

Updated on: Oct 29, 2026 | 4:19 PM

Share

ನವದೆಹಲಿ, ಅಕ್ಟೋಬರ್ 29: ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ದೇಶದ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಇದಕ್ಕೂ ಮುನ್ನ ಬುಧವಾರ (ಅಕ್ಟೋಬರ್ 28), ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರಿಗೆ ನವೆಂಬರ್ 17ರಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂ ಕೋರ್ಟ್ ಪೀಠದ ಮುಂದೆ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. ಸಂಜಯ್ ರಾವತ್ ಅವರು ನವೆಂಬರ್ 17ರಂದು ಮಧ್ಯಾಹ್ನ 2 ಗಂಟೆಗೆ ಕೋರ್ಟ್‌ನ ಮುಂದೆ ಭೌತಿಕವಾಗಿ ಹಾಜರಾಗಬೇಕು ಮತ್ತು ಪತ್ರಕರ್ತ ನಿಖಿಲ್ ವಾಗ್ಲೆ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: ಬೇರೆ ಪಕ್ಷಕ್ಕೆ ಹೋಗುವುದಿದ್ದರೆ ಮೊದಲು ರಾಜೀನಾಮೆ ಕೊಡಿ; ಶಿವಸೇನೆ ಸಂಸದರಿಗೆ ಸಂಜಯ್ ರಾವತ್ ಸವಾಲು

“ಈ ವಿಷಯವು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಇಡೀ ನ್ಯಾಯಾಂಗ ಸಂಸ್ಥೆಯ ಗೌರವ ಮತ್ತು ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದು” ಎಂದು ನ್ಯಾಯಪೀಠವು ಹೇಳಿದೆ.

ಸಂಜಯ್ ರಾವತ್ ತಮ್ಮ ಅಫಿಡವಿಟ್‌ನಲ್ಲಿ ಹೇಳಿದ್ದೇನು?:

ಸಂಜಯ್ ರಾವತ್ ಅವರು ಸಲ್ಲಿಸಿರುವ ಅಫಿಡವಿಟ್​​ನಲ್ಲಿ ನ್ಯಾಯಾಂಗ ವ್ಯವಸ್ಥೆಯ ಗೌರವವನ್ನು ಎತ್ತಿಹಿಡಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. “ನನ್ನ ಕ್ಷಮಾಯಾಚನೆಯು ಅತ್ಯಂತ ಪ್ರಾಮಾಣಿಕತೆ ಮತ್ತು ತೀವ್ರ ಪಶ್ಚಾತ್ತಾಪದಿಂದ ಕೂಡಿದ್ದು, ಯಾವುದೇ ಷರತ್ತು ಅಥವಾ ಸಮರ್ಥನೆಗಳನ್ನು ಒಳಗೊಂಡಿಲ್ಲ. ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆ ಹಾಗೂ ಗೌರವದ ಬಗ್ಗೆ ನನಗೆ ಅಪಾರ ಗೌರವವಿದೆ. ನ್ಯಾಯಾಲಯಕ್ಕೆ ಯಾವುದೇ ರೀತಿಯ ಅಸಮ್ಮಾನ ತೋರುವ ಅಥವಾ ಅದರ ವಿಶ್ವಾಸಾರ್ಹತೆಯನ್ನು ಕುಗ್ಗಿಸುವ ಯಾವುದೇ ಉದ್ದೇಶ ನನಗಿರಲಿಲ್ಲ. ಭವಿಷ್ಯದಲ್ಲಿ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವಾಗ ಹೆಚ್ಚಿನ ಜಾಗರೂಕತೆ ಮತ್ತು ಸಂಯಮ ವಹಿಸುತ್ತೇನೆ” ಎಂದು ಹೇಳಿದ್ದಾರೆ.

ವಿವಾದಕ್ಕೆ ಕಾರಣವೇನು?:

ವಿಪಕ್ಷ ನಾಯಕರ ನಿಯೋಗವೊಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಖುದ್ದಾಗಿ ಭೇಟಿಯಾಗಲು ಸಮಯ ಕೋರಿತ್ತು. ಆದರೆ ಸಿಜೆಐ ಅವರು, “ಯಾವುದೇ ವಿಷಯವಿದ್ದರೂ ಅರ್ಜಿಯ ರೂಪದಲ್ಲಿ ನ್ಯಾಯಾಲಯದ ಮುಂದೆ ತರಬಹುದು, ಹೀಗೆ ಭೇಟಿಯಾಗಲು ಸಾಧ್ಯವಿಲ್ಲ” ಎಂದು ಆ ವಿನಂತಿಯನ್ನು ತಿರಸ್ಕರಿಸಿದ್ದರು.

ಇದನ್ನೂ ಓದಿ: ‘ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’; ನಟ ನಾಸಿರುದ್ದೀನ್ ಶಾ ದಿಮಾಗಿ ನಕ್ಸಲ್ ವಿಡಿಯೋಗೆ ಸಚಿವ ಕಿರಣ್ ರಿಜಿಜು ಆಕ್ರೋಶ!

ಸಿಜೆಐ ನಿರ್ಧಾರದ ನಂತರ, ನಿಖಿಲ್ ವಾಗ್ಲೆ ತಮ್ಮ ಎಕ್ಸ್​ ಖಾತೆಯಲ್ಲಿ ಸಿಜೆಐ ವಿರುದ್ಧ ನಿಂದನಾತ್ಮಕ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು. ಸಂಜಯ್ ರಾವತ್ ಕೂಡ ನ್ಯಾಯಾಂಗದ ನಂಬಿಕೆಯನ್ನು ಕುಗ್ಗಿಸುವಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಹಿರಿಯ ವಕೀಲ ಪ್ರದೀಪ್ ರೈ ಅವರು, “ಸಂಜಯ್ ರಾವತ್ ಮತ್ತು ವಾಗ್ಲೆ ಅವರ ಹೇಳಿಕೆಗಳು ವಿಮರ್ಶೆಯ ಎಲ್ಲೆ ಮೀರಿದ್ದು, ಸಾರ್ವಜನಿಕರಿಗೆ ಸುಪ್ರೀಂ ಕೋರ್ಟ್ ಮೇಲಿರುವ ವಿಶ್ವಾಸವನ್ನು ಕುಸಿಯುವಂತೆ ಮಾಡುತ್ತವೆ” ಎಂದು ಅರ್ಜಿಯಲ್ಲಿ ದೂರಿದ್ದರು.

ಅಕ್ಟೋಬರ್ 16ರಂದು ಸುಪ್ರೀಂ ಕೋರ್ಟ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇದೀಗ ಸಂಜಯ್ ರಾವತ್ ಅವರು ಸಲ್ಲಿಸಿರುವ ಬೇಷರತ್ ಕ್ಷಮಾಯಾಚನೆ ಅರ್ಜಿಯ ಆಧಾರದ ಮೇಲೆ ನವೆಂಬರ್ 17ರಂದು ನ್ಯಾಯಾಲಯ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More