ಸುನಾಮಿ ಉಯ್ಯಾಲೆ ದುರಂತ: ಎಲ್ಲರನ್ನೂ ಸಾವಿನ ದವಡೆಯಿಂದ ಕಾಪಾಡಿ ಪ್ರಾಣ ಬಿಟ್ಟ ಪೊಲೀಸ್ ಅಧಿಕಾರಿ ಜಗದೀಶ್ ಪ್ರಸಾದ್ ಯಾರು?
ಫರೀದಾಬಾದ್‌ನ ಸೂರಜ್‌ಕುಂಡ್ ಮೇಳದಲ್ಲಿ ಸಂಭವಿಸಿದ ಸುನಾಮಿ ಉಯ್ಯಾಲೆ ದುರಂತದಲ್ಲಿ, ಪೊಲೀಸ್ ಅಧಿಕಾರಿ ಜಗದೀಶ್ ಪ್ರಸಾದ್ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರನ್ನು ರಕ್ಷಿಸಿದರು. ಅನೇಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರೂ, ಉಯ್ಯಾಲೆಯ ಭಾಗ ಅವರ ಮೇಲೆ ಬಿದ್ದು ವೀರಮರಣವಪ್ಪಿದರು. ಅವರ ನಿಸ್ವಾರ್ಥ ಸೇವೆಗೆ ದೇಶವೇ ಕಂಬನಿ ಮಿಡಿದಿದೆ. ಈ ಘಟನೆ ಮನರಂಜನಾ ಉದ್ಯಾನವನಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಫರೀದಾಬಾದ್, ಫೆಬ್ರವರಿ 09: ಹರಿಯಾಣದ ಫರೀದಾಬಾದ್ನಲ್ಲಿ ನಡೆದ 39ನೇ ಸೂರಜ್‌ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ದೊಡ್ಡ ಅಪಘಾತ(Accident)ವೊಂದು ಸಂಭವಿಸಿತ್ತು. ಸುನಾಮಿ ಉಯ್ಯಾಲೆ ಕಳಚಿಬಿದ್ದು ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಹಾಗಾದರೆ ಎಲ್ಲರನ್ನೂ ರಕ್ಷಿಸಲು ಹೋಗಿ ಪ್ರಾಣಬಿಟ್ಟ ಪೊಲೀಸ್ ಅಧಿಕಾರಿ ಜಗದೀಶ್ ಪ್ರಸಾದ್ ಯಾರು ಎನ್ನುವ ಮಾಹಿತಿ ಇಲ್ಲಿದೆ.
ಸೂರಜ್‌ಕುಂಡ್ ಜಾತ್ರೆಯಲ್ಲಿ ನಡೆದ ಅಪಘಾತವು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು, ಸುನಾಮಿ ಹೆಸರಿನ ಉಯ್ಯಾಲೆ ಇದ್ದಕ್ಕಿದ್ದಂತೆ ಮುರಿದು ಬಿದ್ದಿತ್ತು, ಅಲ್ಲಿ ಭದ್ರತಾ ಉಸ್ತುವಾರಿ ವಹಿಸಿದ್ದ ಇನ್ಸ್ಪೆಕ್ಟರ್ ಜಗದೀಶ್ ಪ್ರಸಾದ್ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಸಹಾಯಕ್ಕೆ ಮುಂದಾದರು.
ಪ್ರಸಾದ್ ಅವರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿ ಜನಸಮೂಹವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಈ ಮಧ್ಯೆ ಉಯ್ಯಾಲೆಯ ಭಾರವಾದ ಭಾಗವು ಅವರ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡರು. ಅವರನ್ನು ತಕ್ಷಣವೇ ಬಿಕೆ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು. ಮೂಲತಃ ಮಥುರಾ ಮೂಲದ ಪ್ರಸಾದ್ ಅವರ ನಿವೃತ್ತಿಗೆ ಕೇವಲ ಎರಡು ವರ್ಷಗಳು ಬಾಕಿ ಉಳಿದಿದ್ದವು.
ಮತ್ತಷ್ಟು ಓದಿ: ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು, 13 ಜನರಿಗೆ ಗಾಯ
ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಫರೀದಾಬಾದ್ ಉಪ ಆಯುಕ್ತ ಆಯುಷ್ ಸಿಂಗ್ ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆ ಜಾತ್ರೆಯಲ್ಲಿ ಗೇಟ್ ಕುಸಿದು ಇಬ್ಬರು ಗಾಐಗೊಂಡಿದ್ದರು, ಆಡಳಿತವು ಮನರಂಜನಾ ಪ್ರದೇಶವನ್ನು ಸ್ಥಳಾಂತರಿಸಿ ತನಿಖೆಯನ್ನು ಪ್ರಾರಂಭಿಸಿತ್ತು. 2025ರ ಏಪ್ರಿಲ್ನಲ್ಲಿ ದೆಹಲಿಯ ಕಪಶೇರಾದ ಫನ್ ಅಂಡ್ ಫುಡ್ ವಿಲೇಜ್ನಲ್ಲಿ ರೋಲರ್ ಕೋಸ್ಟರ್ ಅಪಘಾತ ಸಂಭವಿಸಿತ್ತು. 24 ವರ್ಷದ ಪ್ರಿಯಾಂಕಾ ರಾವತ್ ತನ್ನ ಮದುವೆಗೆ ಕೆಲವು ತಿಂಗಳಿರುವಾಗ ಸೀಟ್ ಬೆಲ್ಟ್ ತುಂಡಾದ ಪರಿಣಾಮ ಬಿದ್ದು ಸಾವನ್ನಪ್ಪಿದ್ದರು.
ಆಕೆ ತನ್ನ ಫಿಯಾನ್ಸಿ ಜತೆ ಉದ್ಯಾನಕ್ಕೆ ಹೋಗಿದ್ದರು, ಈ ಘಟನೆಯು ಇಂಥಾ ಮನರಂಜನಾ ಉದ್ಯಾನಗಳಲ್ಲಿನ ಸುರಕ್ಷತೆಯ ಮಾನದಂಡಗಳ ಕಡೆಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
