
ಸೂರ್ಯಪೇಟೆ, ಆಗಸ್ಟ್ 2: ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಕೊಡಾಡ್ ಮಂಡಲದ ದ್ವಾರಕುಂಟ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ(Accident)ದಲ್ಲಿ ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನಿಂದ ಆಂಧ್ರಪ್ರದೇಶದ ಏಲೂರಿಗೆ 42 ಜನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್, ಮುಂದೆ ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ಅತಿವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಕಂಟೇನರ್‌ನಲ್ಲಿದ್ದ ಕಬ್ಬಿಣದ ಸರಳುಗಳು ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗವನ್ನು ಸೀಳಿ ಒಳಗೆ ನುಗ್ಗಿದ್ದು, ಅಪಘಾತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮೃತಪಟ್ಟವರಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ.
ಬಸ್‌ನ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಹಾಗೂ ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟರು. ಗಾಯಾಳುಗಳನ್ನು ತಕ್ಷಣವೇ ಕೊಡಾಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಓದಿ: ಹಿರಿಯೂರಿನ ಐಮಂಗಲ ಬಳಿ ಬಸ್ ಅಪಘಾತ: ಇಬ್ಬರು ಸಾವು; 26 ಮಂದಿಗೆ ಗಾಯ
ಅಪಘಾತದ ಪರಿಣಾಮವಾಗಿ ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ (NH-65) ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು, ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಕ್ರೇನ್ ಮೂಲಕ ಜಖಂಗೊಂಡ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಿದ್ದೆಯ ಮಂಪರು ಮತ್ತು ಅತಿವೇಗದ ಶಂಕೆ: ಮುಂಜಾನೆ ಅಥವಾ ತಡರಾತ್ರಿಯ ವೇಳೆ ಚಾಲಕರ ನಿದ್ದೆಯ ಮಂಪರು ಮತ್ತು ಅತಿವೇಗವೇ ಇಂತಹ ಹೆದ್ದಾರಿ ಹಿಂಬದಿ ಡಿಕ್ಕಿ ಅಪಘಾತಗಳಿಗೆ ಪ್ರಮುಖ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ.
ಕಬ್ಬಿಣದ ಸರಳುಗಳ ಸಾಗಣೆ ನಿಯಮ ಉಲ್ಲಂಘನೆ: ವಾಹನಗಳ ಹೊರಭಾಗಕ್ಕೆ ಚಾಚಿಕೊಂಡಿರುವಂತೆ ಅಥವಾ ಸಮರ್ಪಕ ಎಚ್ಚರಿಕೆ ಫಲಕಗಳಿಲ್ಲದೆ ಅಪಾಯಕಾರಿ ಸರಕು,ಕಬ್ಬಿಣದ ರಾಡ್‌ಗಳನ್ನು ಸಾಗಿಸುವ ಲಾರಿಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ