
ದೆಹಲಿ, ಆ.12: ಬ್ರಿಟಿಷರ ಗುಲಾಮಿ ಸಂಕೋಲೆಯನ್ನು ಕಳಚಿ, ಭಾರತವು ಸ್ವತಂತ್ರ ರಾಷ್ಟ್ರವಾಗಿ ಜನ್ಮತಳೆದ 1947ರ ಆಗಸ್ಟ್ 14ರ ಸಂಜೆಯಿಂದ ಆಗಸ್ಟ್ 15ರ ಸಂಜೆಯವರೆಗಿನ 24 ಗಂಟೆಗಳು ಭಾರತೀಯ ಇತಿಹಾಸದ ಅತ್ಯಂತ ಅವಿಸ್ಮರಣೀಯ ಅಧ್ಯಾಯ. ಒಂದೆಡೆ ದಶಕಗಳ ಸುದೀರ್ಘ ಹೋರಾಟಕ್ಕೆ ಸಿಕ್ಕ ಸ್ವಾತಂತ್ರ್ಯದ ಪರಮೋಚ್ಛ ಆನಂದ, ಮತ್ತೊಂದೆಡೆ ದೇಶ ವಿಭಜನೆಯ ಭೀಕರ ರಕ್ತಪಾತ ಮತ್ತು ನೋವು. ಈ 24 ಗಂಟೆಗಳಲ್ಲಿ ಇಡೀ ದೇಶ ಅನುಭವಿಸಿದ ಭಾವನೆಗಳನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಅಂದು ದೆಹಲಿಯ ರಾಜಬೀದಿಗಳಿಂದ ಹಿಡಿದು ಗಡಿಭಾಗದ ಹಳ್ಳಿಗಳವರೆಗೆ ಭಾರತೀಯರ ಎದೆಯಲ್ಲಿ ಮೂಡಿದ ರೋಮಾಂಚಕಾರಿ ಘಟನೆಗಳು ಇಲ್ಲಿವೆ.
ಆಗಸ್ಟ್ 14ರ ಸಂಜೆಯಾಗುತ್ತಿದ್ದಂತೆ ದೆಹಲಿಯ ಸಂವಿಧಾನ ಸಭೆಯ ಹೊರಭಾಗದಲ್ಲಿ ಲಕ್ಷಾಂತರ ಜನರು ಜಮಾಯಿಸಿದ್ದರು. ಮಳೆಯ ವಾತಾವರಣವಿದ್ದರೂ ಜನರ ಉತ್ಸಾಹ ಕುಂದಿರಲಿಲ್ಲ. ಕತ್ತಲಾಗುತ್ತಿದ್ದಂತೆ ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಇನ್ನೊಂದೆಡೆ, ಅಂತಿಮವಾಗಿ ಯೂನಿಯನ್ ಜ್ಯಾಕ್ (ಬ್ರಿಟಿಷ್ ಧ್ವಜ) ಅನ್ನು ಕೆಳಗಿಳಿಸಿ, ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು ಸಿದ್ಧತೆಗಳು ಬಿರುಸಿನಿಂದ ಸಾಗಿದ್ದವು. ಬೀದಿ ಬೀದಿಗಳಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’, ‘ವಂದೇ ಮಾತರಂ’ ಮತ್ತು ‘ಮಹಾತ್ಮ ಗಾಂಧಿ ಕೀ ಜೈ’ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು.
ಸಂವಿಧಾನ ಸಭೆಯಲ್ಲಿ ಜವಾಹರಲಾಲ್ ನೆಹರೂ ಅವರು ತಮ್ಮ ಐತಿಹಾಸಿಕ “ಟ್ರಿಸ್ಟ್ ವಿತ್ ಡೆಸ್ಟಿನಿ” ಭಾಷಣವನ್ನು ಪ್ರಾರಂಭಿಸಿದರು. “ಮಧ್ಯರಾತ್ರಿಯ ಗಂಟೆ ಬಾರಿಸುತ್ತಿದ್ದಂತೆ, ಇಡೀ ಪ್ರಪಂಚವೇ ನಿದ್ರಿಸುತ್ತಿರುವಾಗ, ಭಾರತವು ಜೀವಂತಿಕೆ ಮತ್ತು ಸ್ವಾತಂತ್ರ್ಯದೊಂದಿಗೆ ಹೊಸ ಮುಂಜಾನೆಗೆ ಎಚ್ಚರಗೊಳ್ಳುತ್ತದೆ.” ಎಂದು ಹೇಳಿದರು. ಗಡಿಯಾರದಲ್ಲಿ ಸರಿ ಮಧ್ಯರಾತ್ರಿ 12 ಘಂಟೆಯಾಗುತ್ತಿದ್ದಂತೆ, ಸಂಸತ್ತಿನ Central Hall ನಲ್ಲಿದ್ದ ಶಂಖಗಳು ಮೊಳಗಿದವು. ಸ್ವತಂತ್ರ ಭಾರತದ ಮೊದಲ ಸಂಸತ್ತು ಅಧಿಕೃತವಾಗಿ ಜನ್ಮ ತಾಳಿತು. ಭಾರತೀಯರ ಮುಖದಲ್ಲಿ ಆನಂದಭಾಷ್ಪ ಹರಿಯಿತು.
ಇದನ್ನೂ ಓದಿ: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು
ಆಗಸ್ಟ್ 15ರ ಮುಂಜಾನೆ ಆಲ್ ಇಂಡಿಯಾ ರೇಡಿಯೋ (All India Radio) ಮೂಲಕ ಪಂಡಿತ್ ಓಂಕಾರನಾಥ್ ಠಾಕೂರ್ ಅವರ ಕಂಠದಲ್ಲಿ ‘ವಂದೇ ಮಾತರಂ’ ಗೀತೆ ಪ್ರಸಾರವಾಯಿತು. ಇದನ್ನು ಕೇಳಿದ ಕೋಟ್ಯಂತರ ಭಾರತೀಯರಲ್ಲಿ ದೇಶಭಕ್ತಿಯ ಅಲೆ ಎದ್ದಿತು. ಬೆಳಗ್ಗೆ ಲಾರ್ಡ್ ಮೌಂಟ್‌ಬ್ಯಾಟನ್ ಅವರು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಆಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಜವಾಹರಲಾಲ್ ನೆಹರೂ ಅವರು ಭಾರತದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ದೆಹಲಿಯಲ್ಲಿ ಸ್ವಾತಂತ್ರ್ಯದ ವಿಜಯೋತ್ಸವ ನಡೆಯುತ್ತಿದ್ದರೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮಾತ್ರ ಯಾವುದೇ ಸರ್ಕಾರಿ ಸಂಭ್ರಮದಲ್ಲಿ ಭಾಗವಹಿಸಲಿಲ್ಲ. ಅವರು ಕಲ್ಕತ್ತಾದ (ಈಗಿನ ಕೋಲ್ಕತಾ) ಬೆಲಿಯಾಘಾಟಾದಲ್ಲಿ ಹಿಂದೂ-ಮುಸ್ಲಿಂ ಕೋಮು ಗಲಭೆಯನ್ನು ಶಾಂತಗೊಳಿಸಲು 24 ಗಂಟೆಗಳ ಕಾಲ ಮೌನ ವ್ರತ ಹಾಗೂ ಉಪವಾಸ ಸತ್ಯಾಗ್ರಹದಲ್ಲಿದ್ದರು. “ನಾಳೆ ನಮಗೆ ಬ್ರಿಟಿಷ್ ಆಡಳಿತದಿಂದ ಮುಕ್ತಿ ಸಿಗಲಿದೆ. ಆದರೆ ಮಧ್ಯರಾತ್ರಿಯಿಂದ ಭಾರತವು ಇಬ್ಭಾಗವಾಗಲಿದೆ. ನಾಳೆ ನಮಗೆ ಆನಂದದ ದಿನ ಹೌದು, ಆದರೆ ಅದಕ್ಕಿಂತ ಹೆಚ್ಚಿನ ದುಃಖ ಮತ್ತು ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ.” ಎಂದು ಗಾಂಧಿ ಹೇಳಿದರು. ಪಂಜಾಬ್ ಮತ್ತು ಬೆಂಗಾಲ್ ಗಡಿಭಾಗಗಳಲ್ಲಿ ಕೋಟ್ಯಾಂತರ ಜನರು ತಮ್ಮ ಮನೆ-ಮಠಗಳನ್ನು ತೊರೆದು ವಲಸೆ ಹೋಗುತ್ತಿದ್ದರು. ಲಕ್ಷಾಂತರ ಜನರ ಆಕ್ರಂದನ ಹಾಗೂ ವಿಭಜನೆಯ ನೋವು ಸ್ವಾತಂತ್ರ್ಯದ ಸಂಭ್ರಮದ ಮೇಲೆಯೂ ನೆರಳು ಚೆಲ್ಲಿತ್ತು.
ಆಗಸ್ಟ್ 15ರ ಮಧ್ಯಾಹ್ನದ ವೇಳೆಗೆ ದೆಹಲಿಯ ಇಂಡಿಯಾ ಗೇಟ್ ಹಾಗೂ ಸಂಸತ್ತಿನ ಸುತ್ತಮುತ್ತ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಜನಸಂದಣಿ ಎಷ್ಟಿತ್ತೆಂದರೆ ನಿಗದಿತ ಧ್ವಜಾರೋಹಣ ಕಾರ್ಯಕ್ರಮಗಳನ್ನು ನಿರ್ವಹಿಸುವುದೇ ಸವಾಲಾಗಿತ್ತು. ಪ್ರಧಾನಿ ನೆಹರೂ ಅವರು ಮೊದಲ ಬಾರಿಗೆ ಕೆಂಪುಕೋಟೆಯ ಮೇಲೆ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಎರಡು ಶತಮಾನಗಳ ಗುಲಾಮಗಿರಿಯಿಂದ ಮುಕ್ತಿ ಸಿಕ್ಕಿದ ಭಾವನೆ.
ದೇಶ ವಿಭಜನೆ ಹಾಗೂ ಗಡಿಭಾಗದ ರಕ್ತಪಾತದಿಂದ ಹುಟ್ಟಿದ ನೋವು.
ಸ್ವಂತ ಆಡಳಿತ, ಪ್ರಜಾಪ್ರಭುತ್ವ ಮತ್ತು ಕಟ್ಟಕಡೆಯ ವ್ಯಕ್ತಿಗೂ ಸ್ವತಂತ್ರ ಸಿಗಬೇಕೆಂಬ ಬದ್ಧತೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ