ಕೊವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಲ್ಯಾನ್ಸೆಟ್ ವರದಿ
ಕೊವಿಡ್ 19 ದೃಢಪಟ್ಟ ಹೆಚ್ಚಿನ ಮಕ್ಕಳಲ್ಲಿ ಯಾವುದೇ ತೀವ್ರವಾದ ರೋಗಲಕ್ಷಣಗಳು ಕಂಡುಬರುವುದಿಲ್ಲ. ಜ್ವರ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸೌಮ್ಯ ಸೋಂಕಿನ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಜತೆಗೆ ವಾಂತಿ, ಹೊಟ್ಟೆನೋವು ಕಾಣಿಸಿಕೊಳ್ಳಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ದೆಹಲಿ: ಕೊವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬುದರ ಕುರಿತಾಗಿ ಸಾಕಷ್ಟು ಪುರಾವೆಗಳಿಲ್ಲ ಎಂದು ಹೊಸ ವರದಿಯಿಂದ ತಿಳಿದು ಬಂದಿದೆ. ಲ್ಯಾನ್ಸೆಟ್ ಕೊವಿಡ್ 19 ಆಯೋಗದ ಭಾರತೀಯ ಕಾರ್ಯಪಡೆ ಈ ವರದಿಯನ್ನು ತಯಾರಿಸಿದೆ. ದೇಶದ ಪ್ರಮುಖ ಶಿಶುವೈದ್ಯರನ್ನು ಒಳಗೊಂಡಂತೆ ವಿಷಯ ತಜ್ಞರೊಂದಿಗೆ ಸಮಾಲೋಚಿಸಿ ಲ್ಯಾನ್ಸೆಟ್ ವರದಿ ಸಿದ್ಧಪಡಿಸಿದೆ.
ಕೊವಿಡ್ 19 ದೃಢಪಟ್ಟ ಹೆಚ್ಚಿನ ಮಕ್ಕಳಲ್ಲಿ ಯಾವುದೇ ತೀವ್ರವಾದ ರೋಗಲಕ್ಷಣಗಳು ಕಂಡುಬರುವುದಿಲ್ಲ. ಜ್ವರ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸೌಮ್ಯ ಸೋಂಕಿನ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಜತೆಗೆ ವಾಂತಿ, ಹೊಟ್ಟೆನೋವು ಕಾಣಿಸಿಕೊಳ್ಳಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯ ಪ್ರಕಾರ, ಆಸ್ಪತ್ರೆಗೆ ದಾಖಲಾದ 10 ವರ್ಷದ ಒಳಗಿನ ಸುಮಾರು 2,600 ಮಕ್ಕಳ ಅಧ್ಯಯನ ನಡೆಸಲಾಯಿತು. ದೆಹಲಿ, ತಮಿಳುನಾಡು, ಕೇರಳ, ಮಹಾರಾಷ್ಟ್ರದ 10 ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು.
ವರದಿಯಲ್ಲಿ ತಿಳಿದು ಬಂದಂತೆ 10 ವರ್ಷದ ಮಕ್ಕಳಲ್ಲಿ ಶೇ. 2.4ರಷ್ಟು ಸಾವಿಗೀಡಾಗಿದ್ದಾರೆ. ಮರಣ ಹೊಂದಿದ ಮಕ್ಕಳು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಕೊರೊನಾ ಸೋಂಕಿಗೆ ಒಳಗಾದ ಶೇ. 9ರಷ್ಟು ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಎರಡನೇ ಅಲೆಯ ಸಂದರ್ಭದಲ್ಲಿ ಇದೇ ರೀತಿಯ ರೋಗ ಲಕ್ಷಣಗಳಿದ್ದವು ಎಂದು ವರದಿಯಾಗಿದೆ.
ಶೇ. 5ಕ್ಕಿಂತ ಕಡಿಮೆ ಮಕ್ಕಳಿಗೆ ಆಸ್ಪತ್ರೆ ಅಗತ್ಯ ಕೊವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಶೇ. 5ಕ್ಕಿಂತ ಕಡಿಮೆ ಮಕ್ಕಳಲ್ಲಿ ಆಸ್ಪತ್ರೆ ಪ್ರವೇಶದ ಅಗತ್ಯವಿರುತ್ತದೆ. ಅವರಲ್ಲಿ ಮರಣ ಪ್ರಮಾಣವು ಶೇ. 2ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೊವಿಡ್ ನಿಯಂತ್ರಣಕ್ಕೆ ಲಸಿಕೆಗಳು ಕಾರ್ಯತಂತ್ರದ ಒಂದು ಭಾಗ. ಮಕ್ಕಳಿಗೆ ಮತ್ತು ವಯಸ್ಕರಿಗೆ ಲಸಿಕೆ ನೀಡುವ ಕುರಿತಾಗಿ ಹೆಚ್ಚಿನ ಗಮನ ಬೇಕು ಎಂದು ವರದಿಯಲ್ಲಿ ಉಲ್ಲೆಖಿಸಲಾಗಿದೆ. ಮಕ್ಕಳ ಜೀವನದಲ್ಲಿ ಸಾಧ್ಯವಾದಷ್ಟು ಬೇಗ ಸಹಜತೆಯನ್ನು ಮರಳಿ ತರುವ ಸಂಕಲ್ಪದೊಂದಿಗೆ, ಆನ್ಲೈನ್ ಪ್ರವೇಶದ ಆಯ್ಕೆಗಳೊಂದಿಗೆ ಹೆಚ್ಚು ಜಾಗರೂಕತೆಯಿಂದ ಶಾಲೆಗಳನ್ನು ಪುನಃ ತೆರೆಯುವ ಕುರಿತಾಗಿ ಯೋಚಿಸಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
ಕೊರೊನಾ ಸಂಕಷ್ಟ: ತಂದೆ ಅಂತ್ಯಸಂಸ್ಕಾರದ ವೇಳೆ ಮಗನೂ ಸಾವು; ಮತ್ತೊಂದೆಡೆ ತಂದೆ-ತಾಯಿ ಕಳೆದುಕೊಂಡ 8 ಮಕ್ಕಳು
Published On - 11:55 am, Sun, 13 June 21