ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಬಗ್ಗೆ ರವಿಶಂಕರ್ ಗುರೂಜಿ, ಸದ್ಗುರು ಹೇಳಿದ್ದಿಷ್ಟು
ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ವಿವಾದ ತೀವ್ರಗೊಂಡಿದೆ. ಆಂಧ್ರ ದೇಗುಲಗಳಲ್ಲಿ ಪ್ರಸಾದ ಗುಣಮಟ್ಟ ಪರಿಶೀಲನೆ ನಡೆಯುತ್ತಿದೆ. ಈ ಬಗ್ಗೆ ರವಿಶಂಕರ್ ಗುರೂಜಿ ಮಾಡಿ, ಇದನ್ನು ಯಾರು ಮಾಡಿದ್ದಾರೋ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಆಹಾರದಲ್ಲಿ ಕಲಬೆರಕೆ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ. ಅದೇ ರೀತಿಯಾಗಿ ಸದ್ಗುರು ಪ್ರತಿಕ್ರಿಯಿಸಿದ್ದು, ದೇವಾಲಯಗಳು ಭಕ್ತರಿಂದ ನಡೆಯಬೇಕೇ ಹೊರತು ಸರ್ಕಾರದ ಆಡಳಿತದಿಂದಲ್ಲ ಎಂದಿದ್ದಾರೆ.
ದೆಹಲಿ, ಸೆಪ್ಟೆಂಬರ್ 22: ತಿರುಪತಿ ತಿಮ್ಮಪ್ಪನ ಲಡ್ಡು (Tirupati Laddu) ಭಕ್ತರ ಪಾಲಿಗೆ ಅಮೃತ. ಕಣ್ಣಿಗೊತ್ತಿಕೊಂಡು ತಿನ್ನುವ ಪ್ರಸಾದಕ್ಕೀಗ ವಿವಾದ ಸುತ್ತಿಕೊಂಡಿದೆ. ಆಂಧ್ರ ಸರ್ಕಾರ ಈ ಬಗ್ಗೆ ತನಿಖೆ ಕೂಡ ನಡೆಸುತ್ತಿದ್ದು, ಭಕ್ತರು ಆತಂಕಗೊಂಡಿದ್ದಾರೆ. ಈ ವಿವಾದದ ಬಗ್ಗೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಹಲವು ಮಠಾಧೀಶರು ಕೂಡ ಖಂಡಿಸಿದ್ದಾರೆ. ಸದ್ಯ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಹೇಳಿಕೆ ನೀಡಿದ್ದು, ಇದು ಕ್ಷಮಿಸಲು ಸಾಧ್ಯವಿಲ್ಲ ಮತ್ತು ಇದು ದುರಾಶೆಯ ಪರಮಾವಧಿ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಅವರು, ಇದನ್ನು ಯಾರು ಮಾಡಿದ್ದಾರೋ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಆಹಾರದಲ್ಲಿ ಕಲಬೆರಕೆ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ನಾವು ಆಧ್ಯಾತ್ಮಿಕ ನಾಯಕರ ಸಮಿತಿಯನ್ನು ಹೊಂದಿರಬೇಕು. ಪ್ರಮುಖ ನಿರ್ಧಾರಗಳು, ಮೇಲ್ವಿಚಾರಣೆ ಮತ್ತು ಎಲ್ಲವನ್ನೂ ಎಸ್ಜಿಪಿಸಿ (SGPC) ಯಂತಹ ಧಾರ್ಮಿಕ ಮಂಡಳಿಗಳು ಮಾಡಬೇಕು ಎಂದು ಹೇಳಿದ್ದಾರೆ.
ದೇವಾಲಯಗಳು ಭಕ್ತರಿಂದ ನಡೆಯಬೇಕೇ ಹೊರತು ಸರ್ಕಾರದ ಆಡಳಿತದಿಂದಲ್ಲ: ಸದ್ಗುರು
ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವುದು ಭಕ್ತರಿಗೆ ಅಸಹ್ಯಕರವಾಗಿದೆ. ಹಾಗಾಗಿ ದೇವಾಲಯಗಳು ಭಕ್ತರಿಂದ ನಡೆಯಬೇಕೇ ಹೊರತು ಸರ್ಕಾರದ ಆಡಳಿತದಿಂದಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್ ಟ್ವೀಟ್
Devotees consuming beef tallow in the Temple prasadam is beyond disgusting. This is why Temples should be run by Devotees, not by government administrations. Where there is no Devotion, there shall be no sanctity. Time the Hindu Temples are run by devout Hindus, not by government… https://t.co/4c53zVro7G
— Sadhguru (@SadhguruJV) September 21, 2024
ಎಲ್ಲಿ ಭಕ್ತಿ ಇಲ್ಲವೋ ಅಲ್ಲಿ ಪಾವಿತ್ರ್ಯತೆ ಇರುವುದಿಲ್ಲ. ಹಿಂದೂ ದೇವಾಲಯಗಳನ್ನು ಧರ್ಮನಿಷ್ಠ ಹಿಂದೂಗಳು ನಡೆಸುತ್ತಾರೆ, ಸರ್ಕಾರದ ಆಡಳಿತದಿಂದ ಅಲ್ಲ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.