
ನವದೆಹಲಿ, ಅಕ್ಟೋಬರ್ 17: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆಯ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕ್ಯಾನ್ಸರ್ ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ಮತ್ತಷ್ಟು ಸುಲಭ ಹಾಗೂ ಕೈಗೆಟುಕುವಂತೆ ಮಾಡಲು, ಪಟ್ಟಿಯಲ್ಲಿಲ್ಲದ (ನಾನ್ ಶೆಡ್ಯೂಲ್ಡ್) 137 ಕ್ಯಾನ್ಸರ್ ಔಷಧಿಗಳ ದರವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಿಂದಾಗಿ, ಪ್ರಸ್ತುತ ಇರುವ ಬೆಲೆ ರಚನೆಗೆ ಅನುಗುಣವಾಗಿ ಗುರುತಿಸಲಾದ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ ಶೇ. 70ರಷ್ಟು ಕಡಿಮೆಯಾಗಲಿದೆ.
ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (DGHS) ತಜ್ಞರ ಸಮಿತಿಯ ಶಿಫಾರಸಿನಂತೆ, ‘ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013ರ ಪ್ಯಾರಾಗ್ರಾಫ್ 19ರ ಅಡಿಯಲ್ಲಿ, ಈ 137 ಔಷಧಿಗಳ ವ್ಯಾಪಾರ ಲಾಭಾಂಶವನ್ನು ಗರಿಷ್ಠ ಶೇ. 30ಕ್ಕಿಂತ ಹೆಚ್ಚು ಇರದಂತೆ ಎನ್ಪಿಪಿಎ ಮಿತಿ ಹೇರಿದೆ.
ಇದನ್ನೂ ಓದಿ: ವಿಶ್ವದಲ್ಲಿ ಪ್ರತಿವರ್ಷ 2.73 ಲಕ್ಷ ಮಕ್ಕಳಿಗೆ ಕ್ಯಾನ್ಸರ್: ಕರ್ನಾಟಕದಲ್ಲೇ 1,882 ಪ್ರಕರಣ!
2019ರಲ್ಲಿ ಎನ್ಪಿಪಿಎ ಜಾರಿಗೆ ತಂದಿದ್ದ ಪ್ರಯೋಗಾತ್ಮಕ ಯೋಜನೆಯಡಿ 42 ಕ್ಯಾನ್ಸರ್ ಔಷಧಿಗಳ ಲಾಭಾಂಶವನ್ನು ನಿಯಂತ್ರಿಸಲಾಗಿತ್ತು. ಅದರಿಂದ 526 ಬ್ರ್ಯಾಂಡ್ಗಳ ಔಷಧಿ ದರ ಶೇ. 90ರಷ್ಟು ತಗ್ಗಿತ್ತು. ಇದೀಗ ಅದೇ ಯಶಸ್ವಿ ಮಾದರಿಯನ್ನು ವೈದ್ಯಕೀಯ ತಜ್ಞರ ಶಿಫಾರಸಿನ ಮೇರೆಗೆ ಮತ್ತಷ್ಟು ವಿಸ್ತರಿಸಲಾಗಿದೆ.
ಅತಿ ಹೆಚ್ಚು ಲಾಭಾಂಶಕ್ಕೆ ಕಡಿವಾಣ:
ಔಷಧಿಗಳ ಮಾರಾಟದಲ್ಲಿ ವಿಪರೀತವಾಗಿ ಪಡೆಯಲಾಗುತ್ತಿದ್ದ ವ್ಯಾಪಾರ ಲಾಭಾಂಶವನ್ನು ನಿಯಂತ್ರಿಸುವ ಮೂಲಕ, ರೋಗಿಗಳಿಗೆ ದುಬಾರಿ ಬೆಲೆಯಲ್ಲಿ ಔಷಧಗಳು ಮಾರಾಟವಾಗುವುದನ್ನು ತಡೆಯುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ. ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಪಡೆಯುವ ರೋಗಿಗಳಿಗೆ ದುಬಾರಿ ಔಷಧಗಳು ಈಗ ಕಡಿಮೆ ದರದಲ್ಲಿ ಸಿಗುವುದರಿಂದ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಮಟ್ಟದ ಆರ್ಥಿಕ ಹೊರೆ ತಪ್ಪಿದಂತಾಗಲಿದೆ.
ನವೆಂಬರ್ 9ರಿಂದ ಹೊಸ ದರ ಜಾರಿ:
ಎಲ್ಲಾ ಔಷಧ ತಯಾರಿಕಾ ಕಂಪನಿಗಳು ಪತ್ರ ಪ್ರಕಟವಾದ 7 ದಿನಗಳೊಳಗೆ ಪರಿಷ್ಕೃತ ಬೆಲೆಗಳನ್ನು ಎನ್ಪಿಪಿಎಗೆ ತಿಳಿಸಬೇಕಾಗಿದೆ. ಈ ಪರಿಷ್ಕೃತ ಬೆಲೆಗಳು ನವೆಂಬರ್ 9ರಿಂದ ಜಾರಿಗೆ ಬರಲಿವೆ. ಪ್ರತಿಯೊಂದು ಆಸ್ಪತ್ರೆ, ಚಿಲ್ಲರೆ ಮಾರಾಟಗಾರರು ಮತ್ತು ಕಂಪನಿಗಳು ತಮ್ಮ ವೆಬ್ಸೈಟ್ಗಳಲ್ಲಿ ಹಾಗೂ ಫಾರ್ಮಸಿಗಳಲ್ಲಿ ಪರಿಷ್ಕೃತ ಬೆಲೆ ಪಟ್ಟಿಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಕ್ಯಾನ್ಸರ್ ಔಷಧಿಗಳಿಗೆ ದುಪ್ಪಟ್ಟು ದರ ವಸೂಲಿ ಕಡಿವಾಣಕ್ಕೆ ಕ್ರಮ
ಕ್ಯಾನ್ಸರ್ ಔಷಧಿಗಳು ಹೆಚ್ಚಾಗಿ ನೇರವಾಗಿ ಆಸ್ಪತ್ರೆಗಳಿಗೆ ಸರಬರಾಜಾಗುವುದರಿಂದ, ನವೆಂಬರ್ 9ರಿಂದ ಕಡಿಮೆ ದರದಲ್ಲೇ ಮಾರಾಟವಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಸ್ಪತ್ರೆಗಳ ಮೇಲಿರುತ್ತದೆ.
ಹೊಸ ಬೆಲೆ ಪರಿಶೀಲಿಸುವುದು ಹೇಗೆ?:
ಗ್ರಾಹಕರು ಮತ್ತು ರೋಗಿಗಳ ಸಂಬಂಧಿಕರು ಪರಿಷ್ಕೃತ ಕ್ಯಾನ್ಸರ್ ಔಷಧದ ದರಗಳನ್ನು ಪರಿಶೀಲಿಸಲು ‘ಫಾರ್ಮಾ ಸಹಿ ದಾಮ್’ (Pharma Sahi Daam) ಆ್ಯಪ್ ಅಥವಾ ಎನ್ಪಿಪಿಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಕೆಲವು ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಚಿಲ್ಲರೆ ವ್ಯಾಪಾರಿಗಳಿಗೆ ಪಾವತಿಸುವ ಬೆಲೆಗಿಂತ (PTR) 10 ಪಟ್ಟು ಹೆಚ್ಚಾಗಿದೆ ಎಂದು ಸುಪ್ರೀಂ ಕೋರ್ಟ್ ಹಿಂದಿನ ವಿಚಾರಣೆಯಲ್ಲಿ ಕಳವಳ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರದ ಅಫಿಡವಿಟ್ನಲ್ಲಿ, ಕ್ಯಾನ್ಸರ್ ಔಷಧಿಗಳ ವಿಷಯದಲ್ಲಿ, ಆಸ್ಪತ್ರೆಗಳು ಹೆಚ್ಚಿನ ವ್ಯಾಪಾರ ಲಾಭವನ್ನು ನೀಡುವ ಕಂಪನಿಗಳಿಂದ ಔಷಧಿಗಳನ್ನು ಖರೀದಿಸಿ ಹೆಚ್ಚು ಎಂಆರ್ಪಿಯಲ್ಲಿ ರೋಗಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ಒಪ್ಪಿಕೊಂಡಿತ್ತು. ಅದರ ಬೆನ್ನಲ್ಲೇ ಈ ಬೆಲೆ ಇಳಿಕೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Sat, 17 October 26