Tripura floods: ತ್ರಿಪುರಾದಲ್ಲಿ ಪ್ರವಾಹ; ಸಾವಿನ ಸಂಖ್ಯೆ 22ಕ್ಕೆ ಏರಿಕೆ, 65,000ಕ್ಕೂ ಹೆಚ್ಚು ಜನರ ಸ್ಥಳಾಂತರ
ತ್ರಿಪುರಾದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಸುಮಾರು 334 ನಾಗರಿಕರನ್ನು ರಕ್ಷಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಹೇಳಿಕೆಯಲ್ಲಿ ತಿಳಿಸಿದೆ.ಅಸ್ಸಾಂ ರೈಫಲ್ಸ್ ವ್ಯಾಪಕವಾದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಗಳನ್ನು Op JAL RAHAT ಎಂಬ ಕೋಡ್ ಹೆಸರಿನಲ್ಲಿ ಪ್ರಾರಂಭಿಸಿದೆ.
ಅಗರ್ತಲಾ ಆಗಸ್ಟ್ 23: ತ್ರಿಪುರಾದಲ್ಲಿ (Tripura floods) ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕನಿಷ್ಠ 22 ಜನರು ಸಾವಿಗೀಡಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಸಾಂತಿರ್‌ಬಜಾರ್‌ನ ಅಶ್ವನಿ ತ್ರಿಪುರಾ ಪಾರಾ ಮತ್ತು ದೇಬಿಪುರದಲ್ಲಿ ಭೂಕುಸಿತ ಸಂಭವಿಸಿದ ನಂತರ ಹತ್ತು ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಮಾಣಿಕ್ ಸಹಾ (Manik Saha) ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ನೀಡುವುದಾಗಿ ಅವರು ಘೋಷಿಸಿದರು.
ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸರ್ಕಾರ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಸಹಕರಿಸಲು ಮತ್ತು ಸಹಾಯ ಮಾಡಲು ನಾಗರಿಕರಲ್ಲಿ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ . “ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಸರ್ಕಾರ ಮತ್ತು ಎನ್‌ಡಿಆರ್‌ಎಫ್ ತಂಡಗಳೊಂದಿಗೆ ಎಲ್ಲರೂ ಬೆಂಬಲಿಸಲು ಮತ್ತು ಸಹಕರಿಸಲು ನಾನು ಮನವಿ ಮಾಡುತ್ತಿದ್ದೇನೆ. ನಾನು ಎಲ್ಲಾ ಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡುತ್ತಿದ್ದೇನೆ” ಎಂದು ಸಿಎಂ ಸಹಾ ಹೇಳಿದ್ದಾರೆ.
ತ್ರಿಪುರಾ ಪ್ರವಾಹ: ಇಲ್ಲಿವರೆಗಿನ ಅಪ್ಡೇಟ್ಸ್
- ಈಶಾನ್ಯ ರಾಜ್ಯದಲ್ಲಿನ ಪ್ರವಾಹದಲ್ಲಿ ಸುಮಾರು 17 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಭಾರೀ ಮಳೆಯಿಂದಾಗಿ ತಮ್ಮ ಮನೆಗಳು ಹಾನಿಗೊಳಗಾಗಿದ್ದು, ರಾಜ್ಯದ 450 ಪರಿಹಾರ ಶಿಬಿರಗಳಲ್ಲಿ 65,400 ಜನರು ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
- 2,032 ಸ್ಥಳಗಳಲ್ಲಿ ಭೂಕುಸಿತ ವರದಿಯಾಗಿದ್ದು, ಈ ಪೈಕಿ 1,789 ತೆರವುಗೊಳಿಸಲಾಗಿದೆ. ಉಳಿದ ಸ್ಥಳಗಳಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ.
- ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ತ್ರಿಪುರಾದಲ್ಲಿ 11 ಎನ್‌ಡಿಆರ್‌ಎಫ್ ತಂಡಗಳು, 3 ಸೇನಾ ತುಕಡಿ, 4 ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
- ಪ್ರವಾಹ ಪೀಡಿತ ತ್ರಿಪುರಾಕ್ಕೆ ₹ 40 ಕೋಟಿ ಬಿಡುಗಡೆಗೆ ಕೇಂದ್ರ ಅನುಮೋದನೆ ನೀಡಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
- ತ್ರಿಪುರಾದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಸುಮಾರು 334 ನಾಗರಿಕರನ್ನು ರಕ್ಷಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಹೇಳಿಕೆಯಲ್ಲಿ ತಿಳಿಸಿದೆ.ಅಸ್ಸಾಂ ರೈಫಲ್ಸ್ ವ್ಯಾಪಕವಾದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಗಳನ್ನು Op JAL RAHAT ಎಂಬ ಕೋಡ್ ಹೆಸರಿನಲ್ಲಿ ಪ್ರಾರಂಭಿಸಿದೆ.
- HQ 21 ಸೆಕ್ಟರ್ ಅಸ್ಸಾಂ ರೈಫಲ್ಸ್ ಮತ್ತು IGAR (ಪೂರ್ವ) ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ 18 ಅಸ್ಸಾಂ ರೈಫಲ್ಸ್‌ನ ಎರಡು ತುಕಡಿಗಳನ್ನು ತ್ರಿಪುರಾದ ಅಮರ್‌ಪುರ, ಭಂಪುರ, ಬಿಶಾಲ್‌ಗಢ ಮತ್ತು ರಾಮನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
- ಸೇನೆಯು ಸುಮಾರು 85 ಜನರಿಗೆ ಅಗತ್ಯ ಪಡಿತರ ಮತ್ತು ಸರಬರಾಜುಗಳನ್ನು ಒದಗಿಸಿದೆ, ಈ ಬಿಕ್ಕಟ್ಟಿನ ಸಮಯದಲ್ಲಿ ತಕ್ಷಣದ ಆಹಾರದ ಅಗತ್ಯಗಳನ್ನು ಪೂರೈಸಲಾಗುತ್ತಿದೆ.
ಇದನ್ನೂ ಓದಿ: Maharashtra Bandh: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ: ಆಗಸ್ಟ್ 24ರಂದು ಮಹಾರಾಷ್ಟ್ರ ಬಂದ್ಗೆ ಮಹಾ ವಿಕಾಸ್ ಅಘಾಡಿ ಕರೆ
ಗುರುವಾರ ಮತ್ತು ಶುಕ್ರವಾರದಂದು ತ್ರಿಪುರಾದ ಹಲವು ಸ್ಥಳಗಳಲ್ಲಿ ಭಾರೀ ಮಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ