ಭಕ್ತರ ಗಮನಕ್ಕೆ: ನವೆಂಬರ್‌ನಿಂದ ತಿರುಪತಿ ವೆಂಕಟರಮಣ ದರ್ಶನ ನಿಯಮಗಳಲ್ಲಿ ಬದಲಾವಣೆ
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನವೆಂಬರ್ ತಿಂಗಳಿನಿಂದ ಭಕ್ತರ ದರ್ಶನ ನಿಯಮಗಳಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ನವೆಂಬರ್‌ನಿಂದ ಹೊಸ ನಿಯಮ ಜಾರಿಗೆ ಬರಲಿದೆ.
ತಿರುಪತಿ: ಸರ್ವ ದರ್ಶನ ಟೋಕನ್‌ಗಳ ವಿತರಣೆಯನ್ನು ನವೆಂಬರ್ 1ರಿಂದ ಪುನರಾರಂಭಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಮಂಡಲಿ(ಟಿಟಿಡಿ) ತೀರ್ಮಾನಿಸಿದೆ . ಕಳೆದ ಏಪ್ರಿಲ್ 12ರಿಂದ ಸರ್ವದರ್ಶನ ಟೋಕನ್‌ಗಳ ವಿತರಣೆಯನ್ನು ಟಿಟಿಡಿ ನಿಲ್ಲಿಸಿತ್ತು. ಇದೀಗ ಮತ್ತೆ ನವೆಂಬರ್ ತಿಂಗಳಿನಿಂದ ದರ್ಶನದ ನಿಯಮಗಳಲ್ಲಿ ಬದಲಾವಣೆ ತರಲು ಮುಂದಾಗಿದೆ.
ತಿರುಪತಿಯ ಭೂದೇವಿ ಕಾಂಪ್ಲೆಕ್ಸ್, ಶ್ರೀನಿವಾಸಂ ಮತ್ತು ರೈಲು ನಿಲ್ದಾಣದ ಹಿಂಭಾಗದ ಎರಡನೇ ಚೌಲಿ óನಲ್ಲಿ ಸರ್ವದರ್ಶನ ಟೋಕನ್ ವಿತರಿಸಲಾಗುತ್ತದೆ. ಪ್ರತಿ ಶನಿವಾರ, ರವಿವಾರ, ಸೋಮವಾರ ಮತ್ತು ಬುಧವಾರದಂದು 20,000ದಿಂದ 25,000 ಟೋಕನ್‌ಗಳನ್ನು ವಿತರಿಸಲಾಗುತ್ತದೆ.
ಮಂಗಳವಾರ, ಗುರುವಾರ ಮತ್ತು ಶುಕ್ರವಾರ 15,000 ಟೋಕನ್ ವಿತರಿಸಲಾಗುವುದು ಎಂದು ಟಿಟಿಡಿ ಇಒ ಎ.ವಿ. ಧರ್ಮಾರೆಡ್ಡಿ ಮಾಹಿತಿ ನೀಡಿದ್ದಾರೆ. ಇನ್ನು ಉಚಿತ ದರ್ಶನದ ಭಕ್ತರ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಐಪಿ ದರ್ಶನದ ಸಮಯವನ್ನು ಪ್ರಾಯೋಗಿಕವಾಗಿ ಡಿ.1ರಿಂದ ಬೆಳಗ್ಗೆ 8 ಗಂಟೆಗೆ ಆರಂಭಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಮುಂಜಾನೆ 8 ಗಂಟೆಗೆ ಮುಗಿಯಬೇಕಿದ್ದ ವಿಐಪಿ ದರ್ಶನ ಕೆಲವು ದಿನ 10 ಗಂಟೆಯ ತನಕ ಸಾಗುತ್ತಿತ್ತು. ಇದರಿಂದಾಗಿ ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ಆಗುತ್ತಿತ್ತು. ಅಲ್ಲದೇ ಅರ್ಜಿತ ಸೇವೆ ವೀಕ್ಷಿಸಲು ಸಹ ಸಾಧ್ಯವಾಗುತ್ತಿರಲಿಲ್ಲ. ವಿಐಪಿ ದರ್ಶನ ಮುಗಿಯುವ ತನಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿರುವ ಉಚಿತ ದರ್ಶನದ ಭಕ್ತರು ತಾಸುಗಟ್ಟಲೇ ಕಾಯಬೇಕಿತ್ತು. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಟಿಟಿಡಿ ಪ್ರಾಯೋಗಿಕ ಬದಲಾವಣೆ ಮಾಡುತ್ತಿದೆ.
Published On - 10:02 pm, Sun, 30 October 22