ಭಾರತದ ಗೋಧಿಯಲ್ಲಿ ಇಂಡಿಯನ್ ರುಬೆಲ್ಲಾ ಸಸ್ಯರೋಗ ಪತ್ತೆ, ರಫ್ತಾಗಿದ್ದ ಸರಕು ವಾಪಸ್ಸು ಕಳಿಸಿತು ಟರ್ಕಿ
ಭಾರತ ಗೋಧಿಯನ್ನು ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ರಫ್ತು ಮಾಡುವುದಿಲ್ಲವಾದರೂ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಕೊರತೆ ಎದುರಾಗಿರುವುದರಿಂದ ಹಲವಾರು ರಾಷ್ಟ್ರಗಳು ಗೋಧಿಗಾಗಿ ಭಾರತದತ್ತ ನೋಡುತ್ತಿವೆ.
New Delhi: ಎಸ್ ಅಂಡ್ ಪಿ ಗ್ಲೋಬಲ್ ಕಮಾಡಿಟಿ ಇನ್ ಸೈಟ್ಸ್ (S&P Global Commodity Insights) ಮಾಡಿರುವ ವರದಿಯೊಂದರಲ್ಲಿ ವರ್ತಕರು ಹೇಳಿರುವ ಪ್ರಕಾರ ಟರ್ಕಿ ಸರ್ಕಾರವು (Turkey authorities ) ಗೋಧಿ ಬೆಳೆಗೆ ತಾಕುವ ಸಸ್ಯರೋಗವವೊಂದರ (phytosanitary) ಹಿನ್ನೆಲೆಯಲ್ಲಿ ಭಾರತದಿಂದ ರಫ್ತಾಗಿದ್ದ ಗೋಧಿ ದಾಸ್ತಾನು ತನ್ನ ಕರಾವಳಿ ಪ್ರದೇಶ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದರಿಂದ ಮೇ 29 ರಂದು ಗೋಧಿಯನ್ನು ಹೊತ್ತ ಹಡಗು ಭಾರತ ಅಭಿಮುಖವಾಗಿ ವಾಪಸ್ಸು ಹೊರಟಿದೆ. ಸುಮಾರು 1.5 ಮಿಲಿಯನ್ ಟನ್ಗಳಷ್ಟು ರಫ್ತಾಗಬೇಕಿದ್ದ ಗೋಧಿ ವಾಪಸ್ಸಾಗುತ್ತಿರುವುದು ಭಾರತೀಯ ವರ್ತಕರಲ್ಲಿ ಕಳವಳ ಮೂಡಿಸಿದೆ.
ಎಸ್ ಅಂಡ್ ಗ್ಲೋಬಲ್ ಕಮಾಡಿಟಿ ಇನ್ ಸೈಟ್ಸ್ ವರದಿಯ ಪ್ರಕಾರ 56,877 ಟನ್ ಗೋಧಿಯ ಲೋಡ್ ಹೊಂದಿದ್ದ ಎಮ್ ವಿ ಇನ್ಸ್ ಅಕ್ಡೆನಿಜ್ ಹಡಗು ಟರ್ಕಿಯಿಂದ ಕಾಂಡ್ಲಾ ಬಂದರಿಗೆ ವಾಪಸ್ಸು ಬರುತ್ತಿದೆ.
ಟರ್ಕಿಗೆ ರಫ್ತಾಗಿದ್ದ ಗೋಧಿಯಲ್ಲಿ ಇಂಡಿಯನ್ ರುಬೆಲ್ಲಾ ರೋಗ ಪತ್ತೆಯಾಗಿದ್ದರಿಂದ ಟರ್ಕಿಯ ಕೃಷಿ ಮತ್ತು ಅರಣ್ಯ ಸಚಿವಾಲಯ ದಾಸ್ತಾನಿನ ಸ್ವೀಕೃತಿ ಪಡೆಯಲು ನಿರಾಕರಿಸಿದೆ ಎಂದು ಇಸ್ತಾನ್ಬುಲ್ ಮೂಲದ ಎಸ್ ಅಂಡ್ ಕಮಾಡಿಟಿ ಇನ್ ಸೈಟ್ಸ್ ಪ್ರಕಟಿಸಿದೆ.
ಸದರಿ ಬೆಳವಣಿಗೆಯ ಬಗ್ಗೆ ಭಾರತದ ವಾಣಿಯ ಮತ್ತು ಕೃಷಿ ಸಚಿವಾಲಯ ಪ್ರತಿಕ್ರಿಯೆ ನೀಡಲು ನಿರಾಕರಿಸಿತು.
ಖಾಸಗಿ ಗೋಧಿ ರಫ್ತಿನ ಮೇಲೆ ಭಾರತ ಸರ್ಕಾರವು ನಿಷೇಧವನ್ನು ಹೇರುವ ಮೊದಲು ಟರ್ಕಿಗೆ ಗೋಧಿ ಸಾಗಣೆಯನ್ನು ಅಂತಿಮಗೊಳಿಸಲಾಗಿತ್ತು. ಏಷ್ಯಾದ ಮೂರನೇ-ಅತಿದೊಡ್ಡ ಆರ್ಥಿಕತೆ ಎನಿಸಿಕೊಂಡಿರುವ ಭಾರತದಲ್ಲಿ ಗ್ರಾಹಕ-ಹಣದುಬ್ಬರವು ಏಪ್ರಿಲ್‌ನಲ್ಲಿ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟ 7.79% ಕ್ಕೆ ಹೆಚ್ಚಿತು. ಮತ್ತೂ ಆತಂಕಕಾರಿ ವಿಷಯವೆಂದರೆ, ಆಹಾರದ ಬೆಲೆಗಳಲ್ಲಿ 8.38% ಏರಿಕೆಯಯಿತು. ಹೆಚ್ಚಿದ ಹಣದುಬ್ಬರ ಗೋಧಿಯಂಥ ಹೆಚ್ಚುವರಿ ವಸ್ತುಗಳ ಮೇಲೂ ಪ್ರಭಾವ ಬೀರಿತು ಮತ್ತು ವರ್ತಕರು ರಫ್ತಿನ ಪ್ರಮಾಣವನ್ನು ದ್ವಿಗುಣಗೊಳಿಸಿದ್ದರಿಂದ, ಗೋಧಿ ಬೆಲೆಗಳಲ್ಲಿ ಕಳೆದ ತಿಂಗಳು 20% ರಷ್ಟು ಜಿಗಿತ ಉಂಟಾಗಿತ್ತು.
ತಾಪಮಾನದ ಹೆಚ್ಚಳದಿಂದ ಗೋಧಿ ಉತ್ಪಾದನೆ ಪ್ರಮಾಣ ಶೇಕಡ 3 ರಷ್ಟು ಕಡಿಮೆಯಾಗಿ 106 ದಶಲಕ್ಷ ಟನ್ ಗಳಿಗೆ ಇಳಿಯಲಿರುವ ಮುನ್ಸೂಚನೆ ಸಿಕ್ಕ ಬಳಿಕ ಭಾರತ ಸರ್ಕಾರವು ವಿದೇಶಗಳಿಗೆ ಗೋಧಿ ಮಾರುವುದನ್ನು ನಿಲ್ಲಿಸಿತು. ಫೆಬ್ರುವರಿಯಲ್ಲಿ ನೀಡಿದ ಮುನ್ಸೂಚನೆ ಪ್ರಕಾರ ಪ್ರಸಕ್ತ ವರ್ಷ ಗೋಧಿಯ ಉತ್ಪಾದನೆ 111.32 ದಶಲಕ್ಷ ಟನ್ ಆಗಬೇಕಿತ್ತು.
‘ಗೋಧಿಯಲ್ಲಿ ಇಂಡಿಯನ್ ರುಬೆಲ್ಲಾ ಸಸ್ಯ ರೋಗ ಕಂಡುಬಂದರೆ ಅದನ್ನು ಅಮದು ಮಾಡಿಕೊಳ್ಳ ಬಯಸುವ ಯಾವುದೇ ದೇಶಕ್ಕೆ ಕಳವಳಕಾರಿ ಅಂಶವೇ. ಆದರೆ ಭಾರತದ ಗೋಧಿಯಲ್ಲಿ ಅಪರೂಪಕ್ಕೆ ಈ ರೋಗ ಪತ್ತೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ವರ್ತಕರು ಅತಂಕಗೊಂಡಿರುವುದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ,’ ಎಂದು ಕಾಮ್ಟ್ರೇಡ್ ಸಂಸ್ಥೆಯ ಅಭಿಷೇಕ್ ಅಗರ್ವಾಲ್ ಹೇಳಿದ್ದಾರೆ.
ಭಾರತ ಗೋಧಿಯನ್ನು ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ರಫ್ತು ಮಾಡುವುದಿಲ್ಲವಾದರೂ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಕೊರತೆ ಎದುರಾಗಿರುವುದರಿಂದ ಹಲವಾರು ರಾಷ್ಟ್ರಗಳು ಗೋಧಿಗಾಗಿ ಭಾರತದತ್ತ ನೋಡುತ್ತಿವೆ.
ಮಾರ್ಚ್ 2022 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತೀಯ ವರ್ತಕರು ದಾಖಲೆಯ 7 ದಶಲಕ್ಷ ಟನ್ ಗೋಧಿಯನ್ನು ಬೇರೆ ಬೇರೆ ದೇಶಗಳಿಗೆ ಕಳಿಸಿದ್ದರು. ಗೋಧಿಯ ಜಾಗತಿಕ ಬೆಲೆ ದೇಶೀಯ ಬೆಲೆಗಳಿಗಿಂತ ಹೆಚ್ಚಾಗಿರುವ ಕಾರಣ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದಿಂದ ತಲೆದೋರಿರುವ ಬಿಕ್ಕಟ್ಟು, ಭಾರತಕ್ಕೆ ಬೃಹತ್ ಪ್ರಮಾಣದಲ್ಲಿ ಗೋಧಿ ರಫ್ತು ಮಾಡುವ ಅವಕಾಶ ಕಲ್ಪಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.