
ಮುಂಬೈ, ಸೆಪ್ಟೆಂಬರ್ 8: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಬೇಕಿದ್ದ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ‘ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್’ (NMACC) ಆವರಣಕ್ಕೆ ನಕಲಿ ಗುರುತಿನ ಚೀಟಿ ಬಳಸಿ ಪ್ರವೇಶಿಸಲು ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಂಕಿತರ ಬಳಿ ನಕಲಿ ಐಡಿ ಹಾಗೂ ಗನ್ ಪತ್ತೆಯಾದ ಬೆನ್ನಲ್ಲೇ ಭದ್ರತಾ ಪಡೆಗಳು ಭಾರಿ ಕಟ್ಟೆಚ್ಚರ ವಹಿಸಿವೆ.
ಬಂಧಿತ ಪ್ರಮುಖ ಆರೋಪಿಯನ್ನು 24 ವರ್ಷದ ರೋಹನ್ ಪಾರೇಖ್ ಎಂದು ಗುರುತಿಸಲಾಗಿದೆ. ಈತ ಭದ್ರತಾ ತಪಾಸಣೆ ವೇಳೆ ಪ್ರಧಾನಿ ಕಚೇರಿಯ (ಪಿಎಂಒ) ನಕಲಿ ಸರ್ಕಾರಿ ಐಡಿ ಕಾರ್ಡ್ ತೋರಿಸಿ ಮೋದಿಯ ಕಾರ್ಯಕ್ರಮ ನಡೆಯುವ ಆವರಣದೊಳಗೆ ನುಗ್ಗಲು ಯತ್ನಿಸಿದ್ದ. ತಪಾಸಣೆಯ ವೇಳೆ ಈ ದಾಖಲೆಗಳು ನಕಲಿ ಎಂದು ದೃಢಪಟ್ಟಿವೆ. ಹಾಗೇ, ಆರೋಪಿ ರೋಹನ್ ಪಾರೇಖ್ ಜೊತೆ ಬಂದಿದ್ದ ಆತನ ಬಾಡಿಗಾರ್ಡ್ ಬಳಿ ಬಂದೂಕು ಪತ್ತೆಯಾಗಿದೆ. ಆರಂಭಿಕ ತನಿಖೆಯಲ್ಲಿ ಈ ಗನ್ಗೆ ಲೈಸೆನ್ಸ್ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೇಶದ ಸರಕು ಸಾಗಣೆಗೆ ಹೊಸ ಶಕ್ತಿ, 2,800 ಕಿ.ಮೀ. ಮೀಸಲಾದ ಸರಕು ಕಾರಿಡಾರ್ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ
ಕ್ರೈಮ್ ಬ್ರಾಂಚ್ ತನಿಖೆ:
ಪ್ರಧಾನಿ ಮೋದಿ ಆಗಮನಕ್ಕೂ ಕೆಲವೇ ಗಂಟೆಗಳ ಮೊದಲು ಈ ಘಟನೆ ನಡೆದಿರುವುದರಿಂದ ಮುಂಬೈ ಕ್ರೈಮ್ ಬ್ರಾಂಚ್ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಶಂಕಿತರ ಹಿನ್ನೆಲೆ, ನಕಲಿ ಐಡಿ ಸೃಷ್ಟಿಸಿದ ಉದ್ದೇಶ ಹಾಗೂ ಹೈ-ಪ್ರೊಫೈಲ್ ವಲಯಕ್ಕೆ ಮಾರಕಾಸ್ತ್ರದೊಂದಿಗೆ ಪ್ರವೇಶಿಸಲು ಇದ್ದ ಪ್ಲಾನ್ ಕುರಿತು ಸುದೀರ್ಘ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: 66 ಕೆಜಿ ಚಿನ್ನ, 335 ಕೆಜಿ ಬೆಳ್ಳಿ ಹಾಗೂ 703 ಕೋಟಿ ರೂ. ವಿಮೆ: ಮುಂಬೈ ಜಿಎಸ್‌ಬಿ ಮಹಾ ಗಣಪತಿಯ ದಿವ್ಯ ವೈಭವ!
ಇಂದಿನಿಂದ ಸೆಪ್ಟೆಂಬರ್ 11ರವರೆಗೆ ಮುಂಬೈನಲ್ಲಿ ‘ಗ್ಲೋಬಲ್ ಫಿನ್ ಟೆಕ್ ಫೆಸ್ಟ್’ನ 7ನೇ ಆವೃತ್ತಿ ನಡೆಯುತ್ತಿದೆ. 2020ರಲ್ಲಿ ಆರಂಭಗೊಂಡ ಈ ಜಾಗತಿಕ ವೇದಿಕೆಯು ಹಣಕಾಸು ಮತ್ತು ತಂತ್ರಜ್ಞಾನ ಕ್ಷೇತ್ರದ ನೀತಿ ನಿರೂಪಕರು, ಬ್ಯಾಂಕುಗಳು ಹಾಗೂ ಗ್ಲೋಬಲ್ ಫಿನ್ ಟೆಕ್ ಸಂಸ್ಥೆಗಳನ್ನು ಒಂದೆಡೆ ಸೇರಿಸುತ್ತದೆ. ಈ ಬಾರಿಯ ಸಮ್ಮೇಳನದಲ್ಲಿ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ, ಎಐ, ಪ್ರೋಗ್ರಾಮೆಬಲ್ ಫೈನಾನ್ಸ್ ಹಾಗೂ ಕ್ವಾಂಟಮ್ ತಂತ್ರಜ್ಞಾನಗಳ ಜಾಗತಿಕ ಪ್ರಭಾವದ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ