Udaipur stabbing: ಉದಯಪುರದಲ್ಲಿ ಚಾಕು ಇರಿತದಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು; ರಾಜಸ್ಥಾನದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನ
ರಾಜಸ್ಥಾನದ ಉದಯಪುರದ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಇನ್ನೋರ್ವ ಬಾಲಕ ಚಾಕುವಿನಿಂದ ಇರಿದಿದ್ದ. ಈ ಘಟನೆ ರಾಜಸ್ಥಾನದಲ್ಲಿ ಕೋಮುಗಲಭೆಗೆ ಕಾರಣವಾಗಿತ್ತು. ಇದರಿಂದ ರಾಜ್ಯಾದ್ಯಂತ ಪ್ರತಿಭಟನೆ ಹೆಚ್ಚಾಗಿ, ಹಿಂಸಾಚಾರಕ್ಕೆ ಸಿಲುಕಿತ್ತು. ಇದೀಗ ಆ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಶುಕ್ರವಾರ ಹೋಮ್‌ವರ್ಕ್ ವಿವಾದದ ನಂತರ ತನ್ನ ಸಹಪಾಠಿಯಿಂದ ಇರಿತಕ್ಕೊಳಗಾದ 15 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿ ಹಿಂದೂ ಬಾಲಕ ದೇವರಾಜ್ ಎಂಬಾತನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದರಿಂದ ಈ ಗಲಾಟೆ ಉದಯಪುರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆಗೆ ಕಾರಣವಾಗಿತ್ತು.
ಇಂದು ಆ ಬಾಲಕ ಮೃತಪಟ್ಟ ಸಂಗತಿ ತಿಳಿಯುತ್ತಿದ್ದಂತೆ ಹಿಂಸಾಚಾರ ಮತ್ತು ಪ್ರತಿಭಟನೆಗಳು ಹೆಚ್ಚಾಗುವ ಆತಂಕ ಎದುರಾಗಿದ್ದು, ಈ ಘಟನೆಯ ನಂತರ, ಜಿಲ್ಲಾಧಿಕಾರಿ, ಎಸ್ಪಿ ಮತ್ತು ಜಿಲ್ಲೆಯ ಇತರ ಹಿರಿಯ ಅಧಿಕಾರಿಗಳು ಉದಯಪುರ ಆಸ್ಪತ್ರೆಗೆ ತಲುಪಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಇತರ ವಿಧಿವಿಧಾನಗಳನ್ನು ಮಾಡಲಾಗುತ್ತದೆ ಎಂದು ಉದಯಪುರ ಎಸ್ಪಿ ಯೋಗೇಶ್ ಗೋಯಲ್ ತಿಳಿಸಿದ್ದಾರೆ.
ಇದನ್ನೂ ಓದಿ: Bangladesh Violence: ಬಾಂಗ್ಲಾದೇಶದಲ್ಲಿ ಹಿಂದೂಗಳು, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರಕ್ಕೆ ಆರ್‌ಎಸ್‌ಎಸ್ ಖಂಡನೆ
ಇಂದು ಈ ಘಟನೆಯ ಬಗ್ಗೆ ರಾಜಸ್ಥಾನದ ಗೃಹ ಸಚಿವ ಜವಾಹರ್ ಸಿಂಗ್ ಬೇಧಮ್ ಮಾಹಿತಿ ನೀಡಿದ್ದು, ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅಪ್ರಾಪ್ತ ವಯಸ್ಕ ಸಾವನ್ನಪ್ಪಿದ್ದಾನೆ. ಇದು ರಕ್ಷಾ ಬಂಧನದ ಸಂದರ್ಭದಲ್ಲಿ ನಡೆದ ದುರಂತ ಘಟನೆಯಾಗಿದೆ. ಸಂತ್ರಸ್ತನ ಕುಟುಂಬಕ್ಕೆ ನನ್ನ ಸಂತಾಪ. ಸರ್ಕಾರವು ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದು ಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉದಯಪುರ ಚಾಕು ಇರಿತ ಪ್ರಕರಣ; ಶಾಲೆಗಳಿಗೆ ಕತ್ತರಿ, ಚಾಕು ತರುವುದಕ್ಕೆ ರಾಜಸ್ಥಾನ ಸರ್ಕಾರ ನಿಷೇಧ
ಸರ್ಕಾರಿ ಶಾಲೆಯೊಳಗೆ ಹೋಂ ವರ್ಕ್ ವಿಚಾರಕ್ಕೆ ಇಬ್ಬರು ಮಕ್ಕಳ ನಡುವೆ ಜಗಳ ಉಂಟಾಗಿ ವಿದ್ಯಾರ್ಥಿಯೊಬ್ಬ ತನ್ನ ಬ್ಯಾಗ್ನಲ್ಲಿದ್ದ ಚಾಕುವಿನಿಂದ ದೇವರಾಜ್ ಎಂಬ 15 ವರ್ಷದ ಬಾಲಕನಿಗೆ ಇರಿದಿದ್ದ. ಇದು ಕೋಮುಗಲಭೆಗೆ ಕಾರಣವಾಗಿತ್ತು. ಇದಾದ ನಂತರ ರಾಜಸ್ಥಾನ ಸರ್ಕಾರ ಶಾಲೆಗಳಿಗೆ ಚಾಕು, ಕತ್ತರಿ ಮುಂತಾದ ಆಯುಧಗಳನ್ನು ತರುವುದನ್ನು ನಿಷೇಧಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ