ಮೋದಿ ಬಳಿ ಕ್ಷಮೆ ಯಾಚಿಸಿದ್ದರು ಎಂಬ ಏಕನಾಥ್ ಶಿಂಧೆ ಹೇಳಿಕೆಗೆ ಉದ್ಧವ್ ಠಾಕ್ರೆ ತಿರುಗೇಟು
ಬಿಜೆಪಿ ಜೊತೆಗಿನ ರಹಸ್ಯ ಮಾತುಕತೆಯ ಆರೋಪದ ಬಗ್ಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ವಾಗ್ವಾದ ನಡೆಸುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿದೆ. ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಕುರಿತು ಇಂದು ಮಹಾರಾಷ್ಟ್ರದ ಡಿಸಿಎಂ ಏಕನಾಥ್ ಶಿಂಧೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಉದ್ಧವ್ ಠಾಕ್ರೆ ಪ್ರಧಾನಿ ಮೋದಿಯ ಬಳಿ ಕ್ಷಮೆ ಕೋರಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದರು ಎಂಬ ಏಕನಾಥ್ ಶಿಂಧೆಯ ಹೇಳಿಕೆಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಮುಂಬೈ, (ಮಾರ್ಚ್ 18): ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕ್ಷಮೆ ಯಾಚಿಸಿದ್ದರು ಮತ್ತು ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದರು ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಧಾನ ಪರಿಷತ್ತಿನಲ್ಲಿ ಶಾಕಿಂಗ್ ಹೇಳಿಕೆ ನೀಡಿದ ನಂತರ ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ಬಿರುಗಾಳಿ ಎದ್ದಿದೆ. ಆದರೆ, ಏಕನಾಥ್ ಶಿಂಧೆ ಅವರ ಆರೋಪಗಳನ್ನು ತಳ್ಳಿಹಾಕಿದ ಉದ್ಧವ್ ಠಾಕ್ರೆ ಈ ಬಗ್ಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.
ಏಕನಾಥ್ ಶಿಂಧೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, “ನಾವು ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಹೋದಾಗ, ಏಕನಾಥ್ ಶಿಂಧೆ ಮೋದಿಯವರ ಕಸದ ಬುಟ್ಟಿಯಲ್ಲಿದ್ದರು. ನಮಗೆ ಅದು ತಿಳಿದಿರಲಿಲ್ಲ. ಹೀಗಾಗಿಯೇ ಎಲ್ಲ ವಿಚಾರವೂ ಏಕನಾಥ್ ಶಿಂಧೆ ಕಣ್ಣಾರೆ ಕಂಡಂತೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. 2022ರಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾದ ದಂಗೆಯನ್ನು ಸಂಘಟಿಸುವ ಮೊದಲು ಶಿವಸೇನೆಯಲ್ಲಿ ಏಕನಾಥ್ ಶಿಂಧೆ ಅವರ ಸಣ್ಣ ಪಾತ್ರವನ್ನು ಅವರ ಹೇಳಿಕೆ ಸ್ಪಷ್ಟವಾಗಿ ಟೀಕಿಸಿತು.
ಇದನ್ನೂ ಓದಿ: ಕರ್ನಾಟಕದಲ್ಲಿ ಏಕನಾಥ ಶಿಂಧೆ ಎಪಿಸೋಡ್ ಮರುಕಳಿಸಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ: ಬಿ ಶ್ರೀರಾಮುಲು
ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ ದೆಹಲಿಯಲ್ಲಿ ಮೋದಿಯನ್ನು ಭೇಟಿಯಾಗಿ ಬಿಜೆಪಿಯೊಂದಿಗೆ ಮತ್ತೆ ಒಂದಾಗಲು ಮನವಿ ಮಾಡಿದ್ದರು. ಆದರೆ, ಅವರು ಮುಂಬೈಗೆ ಹಿಂದಿರುಗಿದ ನಂತರ ಏಕೋ ತಮ್ಮ ನಿಲುವನ್ನು ಬದಲಾಯಿಸಿದ್ದರು ಎಂದು ಆರೋಪಿಸಿದ್ದರು. “ಉದ್ಧವ್ ಠಾಕ್ರೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ, ‘ದಯವಿಟ್ಟು ನನ್ನನ್ನು ಕ್ಷಮಿಸಿ. ನಾವು ಮತ್ತೆ ನಿಮ್ಮೊಂದಿಗೆ ಕೈಜೋಡಿಸಲು ಬಯಸುತ್ತೇವೆ’ ಎಂದು ಹೇಳಿದ್ದರು. ಆದರೆ ಮುಂಬೈಗೆ ಹಿಂದಿರುಗಿದ ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿದರು” ಎಂದಿದ್ದರು.
ನಾವು ನಿಮ್ಮಂತೆ ರಹಸ್ಯವಾಗಿ ಅಲ್ಲ, ಬಹಿರಂಗವಾಗಿ ನಿಲುವು ತೆಗೆದುಕೊಂಡಿದ್ದೇವೆ ಎಂದ ಏಕನಾಥ್ ಶಿಂಧೆ ಮಹಾ ವಿಕಾಸ್ ಅಘಾಡಿ (ಎಂವಿಎ)ಯಿಂದ ಬೇರ್ಪಟ್ಟು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಬಣವು ಠಾಕ್ರೆಗಿಂತ ಭಿನ್ನವಾಗಿ ಪಾರದರ್ಶಕವಾಗಿ ವರ್ತಿಸಿದೆ ಎಂದು ಹೇಳಿದ್ದರು. “ನಾವು ಎಲ್ಲವನ್ನೂ ಬಹಿರಂಗವಾಗಿ ಮಾಡಿದ್ದೇವೆ. ನಾವು ಗುಟ್ಟಾಗಿ ಏನನ್ನೂ ಮಾಡಲಿಲ್ಲ. ಬಿಲ್ಲು-ಬಾಣದ ಸಂಕೇತವಾದ ಶಿವಸೇನೆ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ ಅಪಾಯದಲ್ಲಿದ್ದಾಗ ನಾವು ನಿಲುವು ತೆಗೆದುಕೊಂಡೆವು. ನೀವು ಔರಂಗಜೇಬ್ ಅವರ ಸಿದ್ಧಾಂತವನ್ನು ಸ್ವೀಕರಿಸಿದಾಗ, ನಾವು ನಿಮ್ಮ ಬಂಡಿಯನ್ನು ಉರುಳಿಸಿದೆವು” ಎಂದು ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ಬಣದ ವಿರುದ್ಧ ಮಾತನಾಡಿದ್ದರು.
ಇದನ್ನೂ ಓದಿ: ಮೋದಿ ಬಳಿ ಉದ್ಧವ್ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮೈತ್ರಿ ಬಯಸಿದ್ದರು; ಏಕನಾಥ್ ಶಿಂಧೆ ಶಾಕಿಂಗ್ ಹೇಳಿಕೆ
ಈ ಆರೋಪಗಳನ್ನು ಉದ್ಧವ್ ಠಾಕ್ರೆ ಬಲವಾಗಿ ನಿರಾಕರಿಸಿದರು. ಇದು ಇತಿಹಾಸವನ್ನು ಪುನಃ ಬರೆಯುವ ಮತ್ತು ಶಿಂಧೆ ಅವರ ದಂಗೆಯನ್ನು ಸಮರ್ಥಿಸುವ ಪ್ರಯತ್ನ ಎಂದು ಟೀಕಿಸಿದರು. “ಹಿಂದೆ ಏನಾಯಿತು ಎಂಬುದರ ಕುರಿತು ಮಾತನಾಡುವ ಬದಲು, ಅವರು ಅಧಿಕಾರಕ್ಕೆ ಬಂದ ನಂತರ ಮಹಾರಾಷ್ಟ್ರಕ್ಕೆ ಏನು ಮಾಡಿದ್ದಾರೆ ಎಂಬುದರ ಮೇಲೆ ಕೇಂದ್ರೀಕರಿಸಬೇಕು” ಎಂದು ಠಾಕ್ರೆ ಹೇಳಿದರು. ಶಿವಸೇನೆಯ ಸಿದ್ಧಾಂತಕ್ಕೆ ಶಿಂಧೆ ಅವರ ನಿಷ್ಠೆಯನ್ನು ಅವರು ಪ್ರಶ್ನಿಸಿದರು. ಅವರ ಸರ್ಕಾರ ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ರಾಜಿ ಮಾಡಿಕೊಂಡಿದೆ ಎಂದು ಟೀಕಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ