ಗರ್ಭದಲ್ಲಿರುವಾಗಲೇ ಅಮ್ಮನ ಆಕಳಿಕೆಯನ್ನು ಕಾಪಿ ಮಾಡುತ್ತಂತೆ ಮಗು!

ಆಕಳಿಕೆ ಎಂಬುದು ನಾವೆಲ್ಲರೂ ಪ್ರತಿದಿನ ಮಾಡುವ ಪ್ರಕ್ರಿಯೆಯಾಗಿದ್ದರೂ, ಆಕಳಿಕೆ ಏಕೆ ಬರುತ್ತದೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ. ಮೆದುಳನ್ನು ತಂಪಾಗಿಸಲು, ಆಯಾಸ, ಬೇಸರದ ಕಾರಣದಿಂದ ಆಕಳಿಕೆ ಬರಬಹುದು ಎಂಬುದು ತಜ್ಞರ ಅಭಿಪ್ರಾಯ. ಆಕಳಿಕೆಯಲ್ಲಿ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಬೇರೊಬ್ಬರು ಆಕಳಿಸುವುದನ್ನು ನೋಡಿ ನಮಗೂ ಆಕಳಿಕೆ ಬರುವುದು ಸಾಮಾನ್ಯ. ಈಗ, ಮಗು ಹುಟ್ಟುವ ಮುನ್ನವೇ ಅಂದರೆ ತಾಯಿಯ ಗರ್ಭದಲ್ಲಿರುವಾಗಲೇ ಈ ರೀತಿ ತಾಯಿಯಿಂದ ಮಗುವಿಗೂ ಆಕಳಿಕೆ ಹರಡುತ್ತದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

ಗರ್ಭದಲ್ಲಿರುವಾಗಲೇ ಅಮ್ಮನ ಆಕಳಿಕೆಯನ್ನು ಕಾಪಿ ಮಾಡುತ್ತಂತೆ ಮಗು!
Baby In Womb
Image Credit source: AI

Updated on: May 18, 2026 | 4:12 PM

ನವದೆಹಲಿ, ಮೇ 18: ಈ ಬ್ರಹ್ಮಾಂಡದಲ್ಲಿ ಆಕಳಿಸದವರು ಯಾರಾದರೂ ಇದ್ದಾರಾ? ನಾವು ಯಾರದ್ದಾದರೂ ಎದುರು ಕುಳಿತಾಗ ಅವರು ಆಕಳಿಸಿದರೆ ಅಥವಾ ನಾವು ಆಕಳಿಸುವವರನ್ನು ನೋಡಿದರೆ ನಮಗೂ ಆಕಳಿಕೆ ಬರುತ್ತದೆ. ಹೀಗಾಗಿ, ಆಕಳಿಕೆಯನ್ನು ಕಂಟ್ರೋಲ್ ಮಾಡುವುದು ಬಹಳ ಕಷ್ಟ. ನಮ್ಮೆದುರು ಇರುವ ವ್ಯಕ್ತಿ ಆಕಳಿಸಿದಾಗ ಎಷ್ಟು ಬೇಗನೆ ನಮಗೂ ಆಕಳಿಕೆ ಬರುತ್ತದೆಯೋ, ಅಷ್ಟೇ ವೇಗವಾಗಿ ಪ್ರಪಂಚದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಜೂಮ್ ವಿಡಿಯೋ ಕರೆಯಲ್ಲಿ ಮಾತನಾಡುವಾಗಲೂ ಆಕಳಿಕೆ ಹರಡುತ್ತದೆ ಎಂಬುದು ಅಚ್ಚರಿಯ ಸಂಗತಿ. ಇಷ್ಟೇ ಅಲ್ಲ, ಸಂಶೋಧನೆಯ ಪ್ರಕಾರ, ಆಕಳಿಕೆ ಎಷ್ಟು ವೇಗವಾಗಿ ಹರಡುತ್ತದೆ ಎಂದರೆ, ಗರ್ಭಿಣಿ ಮಹಿಳೆಯೊಬ್ಬರು ಆಕಳಿಸಿದಾಗ ಅವರ ಹೊಟ್ಟೆಯೊಳಗಿರುವ ಭ್ರೂಣವೂ (ಶಿಶು) ಕೂಡ ಆಕಳಿಸುತ್ತದೆ!

  • ಗರ್ಭದಲ್ಲಿರುವಾಗಲೇ ಮಗುವಿಗೆ ಅಮ್ಮನ ಆಕಳಿಕೆಯ ಅನುಭವವಾಗುತ್ತದೆ
  • ಗರ್ಭಿಣಿ ಪ್ರತಿಬಾರಿ ಆಕಳಿಸಿದಾಗಲೂ ಮಗುವೂ ಹೊಟ್ಟೆಯೊಳಗೆ ಆಕಳಿಸುತ್ತದೆ
  • ಹೊಕ್ಕಳುಬಳ್ಳಿ ಮೂಲಕ ಮಗುವಿಗೆ ಹಾರ್ಮೋನು ಹರಡುತ್ತದೆ

ಗರ್ಭದಲ್ಲಿರುವ ಶಿಶುಗಳಿಗೆ ಹೊರಗಿನ ಪ್ರಪಂಚವನ್ನು ನೋಡಲು ಸಾಧ್ಯವಿಲ್ಲದ ಕಾರಣ, ಈ ಆಕಳಿಕೆ ಹರಡಲು ಕೆಲವು ಪ್ರಮುಖ ಕಾರಣಗಳಿರಬಹುದು. ತಾಯಿ ಆಕಳಿಸಿದಾಗ ಅವರ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಬದಲಾವಣೆಯಾಗುತ್ತದೆ. ಪ್ಲಾಸೆಂಟಾ (ಹೊಕ್ಕುಳಬಳ್ಳಿ) ಮೂಲಕ ಹರಡುವ ಹಾರ್ಮೋನುಗಳು ಮಗುವಿಗೂ ಆಕಳಿಸುವಂತೆ ಪ್ರೇರೇಪಿಸಬಹುದು. ಆಕಳಿಸುವಾಗ ತಾಯಿಯ ಹೊಟ್ಟೆಯ ಭಾಗದಲ್ಲಿ ಉಂಟಾಗುವ ಚಲನೆ ಮತ್ತು ಕಂಪನಗಳನ್ನು ಗರ್ಭದಲ್ಲಿರುವ ಶಿಶುಗಳು (ವಿಶೇಷವಾಗಿ ಅವಳಿ ಮಕ್ಕಳಿದ್ದಾಗ) ಗ್ರಹಿಸಿ, ತಾವೂ ಆಕಳಿಸಬಹುದು.

ಇದನ್ನೂ ಓದಿ: ಗರ್ಭದಲ್ಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು; ಹಿಂದೂ ಧರ್ಮದ ದೃಷ್ಟಿಯಲ್ಲಿ ಮಾತೃತ್ವದ ಮಹತ್ವ

‘ಕರೆಂಟ್ ಬಯಾಲಜಿ’ (Current Biology) ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗರ್ಭದಲ್ಲಿರುವಾಗಲೇ ಶಿಶುಗಳು ತಮ್ಮ ತಾಯಂದಿರಿಂದ ಆಕಳಿಕೆಯನ್ನು ಗ್ರಹಿಸುತ್ತವೆ ಎಂಬುದಕ್ಕೆ ವಿಜ್ಞಾನಿಗಳು ಸಾಕ್ಷ್ಯವನ್ನು ಕಂಡುಕೊಂಡಿದ್ದಾರೆ. ಇಟಲಿಯ ಪಾರ್ಮಾ ವಿಶ್ವವಿದ್ಯಾಲಯದ ಸಂಶೋಧಕರು 8 ತಿಂಗಳು ತುಂಬಿದ ಗರ್ಭಿಣಿ ಮಹಿಳೆಯರಿಗೆ ಆಕಳಿಸುವ ವಿಡಿಯೋಗಳನ್ನು ತೋರಿಸುವ ಮೂಲಕ ಈ ಕಲ್ಪನೆಯನ್ನು ಪರೀಕ್ಷಿಸಿದರು. ಮಹಿಳೆಯರ ಪ್ರತಿಕ್ರಿಯೆಗಳನ್ನು ಕ್ಯಾಮೆರಾಗಳು ರೆಕಾರ್ಡ್ ಮಾಡಿದರೆ, ಭ್ರೂಣದ ಚಲನೆಯನ್ನು ಅಲ್ಟ್ರಾಸೌಂಡ್ ಮೂಲಕ ಗಮನಿಸಲಾಯಿತು.

ಇದನ್ನೂ ಓದಿ: ಗರ್ಭಿಣಿಯರೇ ಗಮನಿಸಿ: ಹೀಟ್​​ ಸ್ಟ್ರೋಕ್​ ಅಪಾಯ ಮಗುವಿನ ಮೇಲೂ ಪರಿಣಾಮ ಬೀರಬಹುದು ಎಚ್ಚರ!

ಆಕಳಿಸುವ ವಿಡಿಯೋಗಳನ್ನು ನೋಡಿದ ನಂತರ ಸುಮಾರು ಶೇ. 64ರಷ್ಟು ಮಹಿಳೆಯರು ಕನಿಷ್ಠ ಒಂದು ಬಾರಿಯಾದರೂ ಆಕಳಿಸಿದರು. ಆ ಪ್ರಕರಣಗಳ ಪೈಕಿ, ಅರ್ಧಕ್ಕಿಂತ ಕೊಂಚ ಹೆಚ್ಚು ಭ್ರೂಣಗಳು ಸುಮಾರು 90 ಸೆಕೆಂಡುಗಳ ಒಳಗೆ ಆಕಳಿಸಿದವು. ಗರ್ಭದೊಳಗೆ ಬೆಳವಣಿಗೆಯ ಹಂತದಲ್ಲಿ ಭ್ರೂಣಗಳು ಸ್ವಾಭಾವಿಕವಾಗಿ ಆಕಳಿಸುತ್ತವೆ ಎಂಬುದು ವಿಜ್ಞಾನಿಗಳಿಗೆ ಮೊದಲೇ ತಿಳಿದಿತ್ತು. ಆಕಳಿಕೆ ಭ್ರೂಣದ ಉಸಿರಾಟ ಮತ್ತು ಮುಖದ ಚಲನೆಗೆ ಸಂಬಂಧಿಸಿದ ಸ್ನಾಯುಗಳು ಹಾಗೂ ನರಗಳ ಸಂಪರ್ಕವನ್ನು ಸಿದ್ಧಪಡಿಸಲು ಸಹಾಯ ಮಾಡುತ್ತವೆ. ಆದರೆ, ತಾಯಿ ಆಕಳಿಸಿದಾಗ ಮಗು ಕೂಡ ಅದನ್ನು ಗ್ರಹಿಸಿ ಆಕಳಿಸುತ್ತದೆ ಎಂಬುದು ಹೊಸ ಅಧ್ಯಯನ. ಹೀಗಾಗಿ, ನೀವು ಗರ್ಭಿಣಿಯಾಗಿದ್ದರೆ, ನೀವು ಆಕಳಿಸಿದಾಗಲೆಲ್ಲ ನಿಮ್ಮ ಹೊಟ್ಟೆಯಲ್ಲಿರುವ ಮಗು ಕೂಡ ನಿಮ್ಮೊಂದಿಗೆ ಆಕಳಿಸುತ್ತಿರುತ್ತದೆ ಎಂಬುದನ್ನು ನೆನಪಿಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us