ಲಖನೌ ವಾಯುನೆಲೆ ಬಳಿ ಮಿರಾಜ್ ಯುದ್ಧ ವಿಮಾನದ ಟೈರ್ ಕಳವು, ಎಫ್‌ಐಆರ್ ದಾಖಲು

ಶಹೀದ್ ಪಥದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂದರ್ಭ ದುರ್ಬಳಕೆ ಮಾಡಿಕೊಂಡು ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಟೈರ್ ಕಟ್ಟಲು ಬಳಸಿದ್ದ ಪಟ್ಟಿಯನ್ನು ಕಿತ್ತುಕೊಂಡು ಕಳ್ಳತನ ಮಾಡಿದ್ದಾರೆ.

ಲಖನೌ ವಾಯುನೆಲೆ ಬಳಿ ಮಿರಾಜ್ ಯುದ್ಧ ವಿಮಾನದ ಟೈರ್ ಕಳವು, ಎಫ್‌ಐಆರ್ ದಾಖಲು
ಮಿರಾಜ್ ಫೈಟರ್ ಜೆಟ್ (ಸಂಗ್ರಹ ಚಿತ್ರ)

ಲಖನೌ: ಲಖನೌದ (Lucknow )ಬಕ್ಷಿ-ಕಾ-ತಾಲಾಬ್ ವಾಯುನೆಲೆಯಿಂದ (Bakshi-Ka-Talab airbase) ಜೋಧ್‌ಪುರ ವಾಯುನೆಲೆಗೆ ತೆರಳುತ್ತಿದ್ದ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಿಂದ ಮಿರಾಜ್ ಫೈಟರ್ ಜೆಟ್‌ನ (Mirage fighter jet) ಟೈರ್ ಅನ್ನು ಅಪರಿಚಿತ ದುಷ್ಕರ್ಮಿಗಳು ಕದ್ದಿರುವ ಘಟನೆ ವರದಿ ಆಗಿದೆ. ಟ್ರಕ್ ಜೋಧ್‌ಪುರ ವಾಯುನೆಲೆಗೆ ತೆರಳುತ್ತಿದ್ದು ಲಖನೌದ ಶಹೀದ್ ಪಥ್‌ನಲ್ಲಿ(Shaheed Path) ನವೆಂಬರ್ 27 ರ ತಡರಾತ್ರಿ ಕಳ್ಳತನ ನಡೆದಿದೆ. ಟ್ರಕ್ ಚಾಲಕ ಹೇಮ್ ಸಿಂಗ್ ರಾವತ್ ಅವರು ಬಕ್ಷಿ-ಕಾ-ತಾಲಾಬ್ ವಾಯುನೆಲೆಯಿಂದ ಮಿಲಿಟರಿ ಸರಕುಗಳನ್ನು ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಶಹೀದ್ ಪಥದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂದರ್ಭ ದುರ್ಬಳಕೆ ಮಾಡಿಕೊಂಡು ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಟೈರ್ ಕಟ್ಟಲು ಬಳಸಿದ್ದ ಪಟ್ಟಿಯನ್ನು ಕಿತ್ತುಕೊಂಡು ಕಳ್ಳತನ ಮಾಡಿದ್ದಾರೆ. ಲಾರಿ ಚಾಲಕನಿಗೆ ವಿಷಯ ತಿಳಿಯುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು. ಅವರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಟ್ರಕ್ ನಿಧಾನವಾಗಿ ಚಲಿಸುತ್ತಿದ್ದ ಶಹೀದ್ ಪಥದಲ್ಲಿ ಜಾಮ್ ಉಂಟಾದಾಗ ಕಳ್ಳರು ಮಧ್ಯರಾತ್ರಿ 12:30 ರಿಂದ 1 ರ ನಡುವೆ ಕಳ್ಳತನ ಮಾಡಿದ್ದಾರೆ ಎಂದು ಟ್ರಕ್ ಚಾಲಕ ಹೇಳಿದರು.

ನ.27ರಂದು ಘಟನೆ ನಡೆದಿದ್ದು, ಡಿ.1ರಂದು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೂರ್ವ ಡಿಸಿಪಿ ಅಮಿತ್‌ ಕುಮಾರ್‌ ತಿಳಿಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಕ್ಷಿ-ಕಾ-ತಾಲಾಬ್ ವಾಯುನೆಲೆಯಿಂದ ಸರಕುಗಳು ಅಜ್ಮೀರ್‌ಗೆ ಹೋಗುತ್ತಿವೆ ಎಂದು ಅಮಿತ್ ಕುಮಾರ್ ಹೇಳಿದ್ದಾರೆ. ಪೊಲೀಸರು ಶಂಕಿತ ಜನರನ್ನು ವಿಚಾರಣೆ ನಡೆಸುತ್ತಿದ್ದಾರೆ.  “ಮಿರಾಜ್ 2000 ಫೈಟರ್ ಜೆಟ್‌ನ ಐದು ಚಕ್ರಗಳನ್ನು ಲಖನೌ ವಾಯುನೆಲೆಯಿಂದ ಅಜ್ಮೀರ್‌ಗೆ ಕಳುಹಿಸಲಾಗುತ್ತಿತ್ತು, ಅದರಲ್ಲಿ ಒಂದು ಟೈರ್ ಕಾಣೆಯಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ,” ಎಂದು ಪೂರ್ವ ಡಿಸಿಪಿ ಹೇಳಿದ್ದಾರೆ.

ಇದನ್ನೂ ಓದಿ:  Omicron in India ಹೊಸ ಕೊವಿಡ್-19 ರೂಪಾಂತರಿ ಆತಂಕ; ಆರೋಗ್ಯದ ಕಾಳಜಿಗೆ ಇಲ್ಲಿದೆ ತಜ್ಞರ ಸಲಹೆ

Click on your DTH Provider to Add TV9 Kannada