ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಸಹಾಯ ಮಾಡಿದ ಕೇಂದ್ರ ಸಚಿವ ಭಾಗವತ್ ಕರಾಡ್; ಪ್ರಧಾನಿ ಮೋದಿಯವರಿಂದ ಶ್ಲಾಘನೆ
ಭಾಗವತ್ ಅವರು ತಮ್ಮ ಸಹ ಪ್ರಯಾಣಿಕನಿಗೆ ಮಾಡಿದ ಸಹಾಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ಇಂಡಿಗೋ ಮಾಡಿರುವ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ.
ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಹ ಪ್ರಯಾಣಿಕರೊಬ್ಬರಿಗೆ ಸಹಾಯ ಮಾಡಿದ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಭಾಗವತ್ ಕೃಷ್ಣರಾವ್ ಕರಾಡ್ (Union minister Bhagwat Karad) ರನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ಲಾಘಿಸಿದ್ದಾರೆ. ಟ್ವೀಟ್ ಮಾಡಿ ಭಾಗವತ್ರನ್ನು ಹೊಗಳಿದ್ದಾರೆ. ಭಾಗವತ್ ಅವರು ಮಕ್ಕಳ ತಜ್ಞರೂ ಹೌದು. ಅವರು ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಆ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ರಕ್ತದೊತ್ತಡ ಸಮಸ್ಯೆಯಿಂದಾಗಿ ಅಕಸ್ಮಾತ್ ಆಗಿ ತಲೆಸುತ್ತು ಬಂದು, ಅವರು ಅಸ್ವಸ್ಥರಾಗಿ ಬಿದ್ದರು. ಅದು ಗೊತ್ತಾಗುತ್ತಿದ್ದಂತೆ ಕೇಂದ್ರ ಸಚಿವರು ಅವರಿದ್ದಲ್ಲಿಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ವಿಮಾನ ಲ್ಯಾಂಡ್ ಆದ ಬಳಿಕ ಈ ಬಗ್ಗೆ ಕರಾಡ್ ಮಾಹಿತಿ ನೀಡಿದ್ದಾಗಿ ಎಎನ್ಐ ಹೇಳಿದೆ. ಆ ಪ್ರಯಾಣಿಕನಿಗೆ ಕಡಿಮೆ ರಕ್ತದೊತ್ತಡ ಉಂಟಾಗಿತ್ತು. ಹೀಗಾಗಿ ವಿಪರೀತ ಬೆವರಲು ಪ್ರಾರಂಭಿಸಿದರು. ನಾನು ಹೋಗಿ ಅವರ ಬಟ್ಟೆಯನ್ನು ತೆಗೆದು, ಕಾಲುಗಳನ್ನು ಮೇಲೆ ಸರಿಯಾಗಿ ಚಾಚುವಂತೆ ಮಾಡಿದೆ. ಮತ್ತೆ ಎದೆಯನ್ನು ಉಜ್ಜಿ, ಗ್ಲುಕೋಸ್ ನೀಡಿದೆ. 30 ನಿಮಿಷಗಳ ನಂತರ ಅವರ ಆರೋಗ್ಯ ಸ್ಥಿರವಾಯಿತು ಎಂದು ಕೇಂದ್ರ ಸಚಿವರು ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ. ಇನ್ನು ಇಂಡಿಗೋ ಸಂಸ್ಥೆ ಕೂಡ ಟ್ವೀಟ್ ಮಾಡಿದೆ, ಸಚಿವರಾದರೂ ತಮ್ಮ ವೈದ್ಯವೃತ್ತಿಯನ್ನು ಮರೆಯದೆ, ಸಮಯಕ್ಕೆ ಸರಿಯಾಗಿ ಪ್ರಯಾಣಿಕನಿಗೆ ಚಿಕಿತ್ಸೆ ನೀಡಿರುವ ಭಾಗವತ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಭಾಗವತ್ ಅವರು ತಮ್ಮ ಸಹ ಪ್ರಯಾಣಿಕನಿಗೆ ಮಾಡಿದ ಸಹಾಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ಇಂಡಿಗೋ ಮಾಡಿರುವ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡಿರುವ ಪ್ರಧಾನಮಂತ್ರಿ ಮೋದಿ, ನನ್ನ ಸಹೋದ್ಯೋಗಿಯ ಈ ನಡೆ ತುಂಬ ಖುಷಿಕೊಟ್ಟಿದೆ. ಅವರು ಹೃದಯದಿಂದ ವೈದ್ಯರು ! ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಯ ಮಾತುಗಳಿಗೆ ಸಚಿವ ಕರಾಡ್ ಕೃತಜ್ಞತೆ ಸಲ್ಲಿಸಿದ್ದಾರೆ. ನಿಮ್ಮ ಮೆಚ್ಚುಗೆಯಿಂದ ನನ್ನ ಹೃದಯ ತುಂಬಿ ಬಂತು. ಈ ದೇಶ ಮತ್ತು ಇಲ್ಲಿನ ನಾಗರಿಕರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ನಿಮ್ಮ ಬದ್ಧತೆಯನ್ನು, ನಾನು ನನ್ನ ಕರ್ತವ್ಯಗಳಲ್ಲಿ ಅಳವಡಿಕೊಳ್ಳುತ್ತೇನೆ. ನಿಮ್ಮ ಮಾರ್ಗದರ್ಶನದಂತೆ ಸೇವಾ ಮತ್ತು ಸಮರ್ಪಣ್ ಮೂಲಕ ಜನಸೇವೆ ಮಾಡಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಹಾಗೇ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ನೆಟ್ಟಿಗರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
A doctor at heart, always!
Great gesture by my colleague @DrBhagwatKarad. https://t.co/VJIr5WajMH
— Narendra Modi (@narendramodi) November 16, 2021
ಇದನ್ನೂ ಓದಿ: Real Estate: ಚದರಡಿಗೆ 77,777 ರೂ.ನಂತೆ ದೆಹಲಿಯಲ್ಲಿ 18 ಸಾವಿರ ಚದರಡಿ ಆಸ್ತಿ ಖರೀದಿಸಿದ ಕೆಇಐ ಇಂಡಸ್ಟ್ರೀಸ್ ಪ್ರಮೋಟರ್