ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿಲ್ಲ; ಕಾಂಗ್ರೆಸ್ ಆರೋಪ ನಿರಾಕರಿಸಿದ ಸಚಿವ ಜೈಶಂಕರ್
ಆಪರೇಷನ್ ಸಿಂಧೂರ್ ಬಗ್ಗೆ ದಾಳಿಗೂ ಮುನ್ನ ನಾವು ಪಾಕಿಸ್ತಾನಕ್ಕೆ ಮಾಹಿತಿ ನೀಡಿಲ್ಲ ಎಂದಿರುವ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಾಂಗ್ರೆಸ್ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಆ ಆರೋಪಗಳು 'ತಪ್ಪು ಮಾಹಿತಿ'ಯಿಂದ ಕೂಡಿದೆ, ಇದು ರಾಷ್ಟ್ರೀಯ ಏಕತೆಗೆ ಭಂಗ ತರುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ನವದೆಹಲಿ, ಮೇ 26: ಭಾರತದ ಆಪರೇಷನ್ ಸಿಂಧೂರ್ (Operation Sindoor) ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಇಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ. ಮಿಲಿಟರಿ ದಾಳಿಗಳಿಗೆ ಮುಂಚಿತವಾಗಿ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಸಂಸತ್ತಿನಲ್ಲಿ ನಡೆದ ಸಮಾಲೋಚನಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಚಿವ ಜೈಶಂಕರ್ ಈ ಆರೋಪಗಳನ್ನು “ಅಪ್ರಾಮಾಣಿಕ” ಮತ್ತು “ತಪ್ಪು ನಿರೂಪಣೆ”ಗಳಿಂದ ಕೂಡಿದ ಹೇಳಿಕೆ ಎಂದು ಟೀಕಿಸಿದ್ದಾರೆ. ಹಾಗೇ, ಕನದವಿರಾಮದಲ್ಲಿ ಅಮೆರಿಕದ ಪಾತ್ರ, ಸಿಂಧೂ ಜಲ ಒಪ್ಪಂದ ಮತ್ತು ಆಪರೇಷನ್ ಸಿಂಧೂರ್ ಸುತ್ತಲಿನ ವಿವರಗಳಿಗೆ ಸಂಬಂಧಿಸಿದ ಕಳವಳಗಳು ಸೇರಿದಂತೆ ಸಂಸದರು ಎತ್ತಿದ ಪ್ರಮುಖ ವಿಷಯಗಳ ಬಗ್ಗೆ ಅವರು ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಈ ಸಭೆಯಲ್ಲಿ ಹಾಜರಿದ್ದ ಮೂಲಗಳ ಪ್ರಕಾರ, ಭಾರತದ ಮಿಲಿಟರಿ ಕ್ರಮವು ಭಯೋತ್ಪಾದಕ ಮೂಲಸೌಕರ್ಯವನ್ನು ನಿಖರವಾದ ರೀತಿಯಲ್ಲಿ ಗುರಿಯಾಗಿಸುವ ಮೂಲಕ ಪಾಕಿಸ್ತಾನದ ನೈತಿಕತೆಯನ್ನು ಯಶಸ್ವಿಯಾಗಿ ಹೊಡೆದಿದೆ ಎಂದು ಜೈಶಂಕರ್ ಒತ್ತಿ ಹೇಳಿದರು. ಸಂಸದರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾರ್ಯಾಚರಣೆ ಪೂರ್ಣಗೊಂಡ ನಂತರ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಪಾಕಿಸ್ತಾನದ DGMOಗೆ ಈ ಬಗ್ಗೆ ಮಾಹಿತಿ ನೀಡಿದರು. ವಿರೋಧ ಪಕ್ಷಗಳು ತಪ್ಪಾಗಿ ಸೂಚಿಸಿದಂತೆ ಅದು ಪ್ರಾರಂಭವಾಗುವ ಮೊದಲು ಮಾಹಿತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರದ ವಿಷಯ ತಿಳಿಸಿದ್ದು ಅಪರಾಧ; ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ತರಾಟೆ
ಜೈಶಂಕರ್ ಅವರು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನಕ್ಕೆ ಮುಂಚಿತವಾಗಿ ಮಾಹಿತಿ ನೀಡಿದ್ದರು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ ನಂತರ ವಿವಾದ ಭುಗಿಲೆದ್ದಿತು. ಅಂತಹ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಉಂಟಾಗುವ ಸಂಭಾವ್ಯ ಹಾನಿಯ ಬಗ್ಗೆ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದರು. ಈ ಮಾಹಿತಿ ನೀಡಿದ್ದರಿಂದಾಗಿ ಭಾರತೀಯ ವಾಯುಪಡೆಯ ಎಷ್ಟು ವಿಮಾನಗಳು ಹಾನಿಗೊಳಗಾಗಿವೆ? ಎಂದು ಪ್ರಶ್ನಿಸಿದ್ದರು. “ಕಾರ್ಯಾಚರಣೆಯ ಆರಂಭದಲ್ಲಿ ನಾವು ಪಾಕಿಸ್ತಾನಕ್ಕೆ ನಾವು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿದ್ದೇವೆ, ನಾವು ಮಿಲಿಟರಿಯ ಮೇಲೆ ದಾಳಿ ಮಾಡುತ್ತಿಲ್ಲ ಎಂದು ತಿಳಿಸಿದ್ದೆವು” ಎಂದು ಹೇಳುವ ಸಚಿವ ಜೈಶಂಕರ್ ಅವರು ವೀಡಿಯೊ ಕ್ಲಿಪ್ ಅನ್ನು ಸಹ ರಾಹುಲ್ ಗಾಂಧಿಯವರು ಶೇರ್ ಮಾಡಿಕೊಂಡಿದ್ದರು. ಆದರೆ, ಸಚಿವ ಜೈಶಂಕರ್ ಹಾಗೂ ವಿದೇಶಾಂಗ ಸಚಿವಾಲಯ ಆ ಆಪರೇಷನ್ ನಡೆದ ನಂತರ ಮಾಹಿತಿ ನೀಡಲಾಗಿತ್ತು ಎಂದು ಅದಾದ ಬಳಿಕ ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ: ಕ್ಯಾಮೆರಾಗಳ ಮುಂದೆ ಮಾತ್ರ ಏಕೆ ನಿಮ್ಮ ರಕ್ತ ಕುದಿಯುತ್ತದೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಇಂದು ನಡೆದ ಸಮಾಲೋಚನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಂಸದರು ಕಾರ್ಯಾಚರಣೆಯಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯ ಬಗ್ಗೆ, ವಿಶೇಷವಾಗಿ ಯಾವುದೇ ಮಧ್ಯಸ್ಥಿಕೆ ನಡೆದಿದೆಯೇ ಎಂಬುದರ ಬಗ್ಗೆಯೂ ಮಾಹಿತಿ ಕೇಳಿದರು. ಅದಕ್ಕೆ ಈ ಕಾರ್ಯಾಚರಣೆಯನ್ನು ಸುಗಮಗೊಳಿಸುವಲ್ಲಿ ಅಮೆರಿಕ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಜೈಶಂಕರ್ ಸ್ಪಷ್ಟಪಡಿಸಿದರು. ಅಮೆರಿಕ ಸಂಪರ್ಕಿಸಿದಾಗ ಭಾರತವು DGMO ಮಟ್ಟದಲ್ಲಿ ಮಾತ್ರ ಚರ್ಚೆಗಳನ್ನು ನಡೆಸುತ್ತದೆ ಎಂದು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು ಎನ್ನಲಾಗಿದೆ.
ಮತ್ತೊಂದು ಮಹತ್ವದ ಚರ್ಚೆಯ ಅಂಶವೆಂದರೆ ಸಿಂಧೂ ಜಲ ಒಪ್ಪಂದ. ಭಾರತ ಈ ಒಪ್ಪಂದವನ್ನು ಪುನರಾರಂಭಿಸಲು ಅಥವಾ ಮಾರ್ಪಡಿಸಲು ಉದ್ದೇಶಿಸಿದೆಯೇ ಎಂದು ಸಂಸದರು ಕೇಳಿದರು. ಈ ಒಪ್ಪಂದವು ಪ್ರಸ್ತುತ ಸ್ಥಗಿತಗೊಂಡಿದೆ. ಅದರ ನಿಯಮಗಳನ್ನು ಮರುಪರಿಶೀಲಿಸಲು ಅಥವಾ ಬದಲಾಯಿಸಲು ಯಾವುದೇ ತಕ್ಷಣದ ಯೋಜನೆಗಳಿಲ್ಲ ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








