ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರದ ವಿಷಯ ತಿಳಿಸಿದ್ದು ಅಪರಾಧ; ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ತರಾಟೆ
ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಜನರನ್ನು ಹತ್ಯೆ ಮಾಡಿದ ನಂತರ ಭಾರತ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದಾಳಿಯ ವೇಳೆ ಐಎಎಫ್ ಎಷ್ಟು ವಿಮಾನಗಳನ್ನು ಯುದ್ಧದಲ್ಲಿ ಕಳೆದುಕೊಂಡಿತು? ಎಂದು ಪ್ರಶ್ನಿಸಿದ್ದಾರೆ.

ನವದೆಹಲಿ, ಮೇ 17: ಪಹಲ್ಗಾಮ್ ಉಗ್ರರ ದಾಳಿಗೆ (Pahalgam Terror Attack) ಪ್ರತಿಯಾಗಿ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡುವ ಆಪರೇಷನ್ ಸಿಂಧೂರದ ಬಗ್ಗೆ ಆರಂಭದಲ್ಲೇ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದು ದೊಡ್ಡ ಅಪರಾಧ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಆಪರೇಷನ್ ಸಿಂಧೂರ ಮುಗಿಯುವವರೆಗೂ ಕಾದು, ನಂತರ ಪಾಕಿಸ್ತಾನಕ್ಕೆ ತಿಳಿಸಬಹುದಾಗಿತ್ತು. ಆರಂಭಿಕ ಹಂತದಲ್ಲೇ ತಿಳಿಸಿದ್ದರಿಂದ ನಮ್ಮ ಸೇನಾಪಡೆಯ ಸೈನಿಕರು, ಯುದ್ಧವಿಮಾನಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿತ್ತು ಎಂದಿದ್ದಾರೆ. ಆಪರೇಷನ್ ಸಿಂಧೂರ್ ಆರಂಭದಲ್ಲಿಯೇ ಭಾರತ ಪಾಕಿಸ್ತಾನಕ್ಕೆ ನೀಡಿದ ಮಾಹಿತಿಯ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದಾಳಿಯಲ್ಲಿ ಭಾರತೀಯ ವಾಯುಪಡೆ ಅನುಭವಿಸಿದ ನಷ್ಟದ ಬಗ್ಗೆಯೂ ಮಾಹಿತಿ ನೀಡಲಿ ಎಂದಿದ್ದಾರೆ.
“ನಮ್ಮ ದೇಶದ ದಾಳಿಯ ಆರಂಭದಲ್ಲಿ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದು ಅಪರಾಧ. ಭಾರತ ಸರ್ಕಾರ ಅದನ್ನು ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಈ ರೀತಿಯಾಗಿ ಆರಂಭಿಕ ಹಂತದಲ್ಲೇ ಪಾಕಿಸ್ತಾನಕ್ಕೆ ಮಾಹಿತಿ ನೀಡಲು ಯಾರು ಆದೇಶ ನೀಡಿದರು? ಇದರ ಪರಿಣಾಮವಾಗಿ ನಮ್ಮ ವಾಯುಪಡೆ ಎಷ್ಟು ವಿಮಾನಗಳನ್ನು ಕಳೆದುಕೊಂಡಿತು?” ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ಸಚಿವ ಜೈಶಂಕರ್ ಮಾಧ್ಯಮದೊಂದಿಗೆ ಮಾತನಾಡುವ 17 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತೀಯ ಸೇನೆಯಿಂದ ಪಾಕಿಸ್ತಾನದೊಳಗೆ 100 ಕಿಮೀ ದೂರದವರೆಗೆ ಉಗ್ರರ ಶಿಬಿರಗಳ ಧ್ವಂಸ; ಆಪರೇಷನ್ ಸಿಂಧೂರ್ ಬಗ್ಗೆ ಅಮಿತ್ ಶಾ
ಆಪರೇಷನ್ ಸಿಂಧೂರ್ ಮತ್ತು ನಂತರದ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ನಡುವೆ ಭುಗಿಲೆದ್ದ ಉದ್ವಿಗ್ನತೆ ಬಗ್ಗೆ ರಾಹುಲ್ ಗಾಂಧಿ ಇಲ್ಲಿಯವರೆಗೆ ಮೌನವಾಗಿದ್ದರು. ಈ ವಿಷಯದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಿದ್ದರು. ಆದರೆ, ಸುದ್ದಿಗೋಷ್ಠಿ ನಡೆಸಲಿಲ್ಲ.
Informing Pakistan at the start of our attack was a crime.
EAM has publicly admitted that GOI did it.
1. Who authorised it? 2. How many aircraft did our airforce lose as a result? pic.twitter.com/KmawLLf4yW
— Rahul Gandhi (@RahulGandhi) May 17, 2025
ಆಪರೇಷನ್ ಸಿಂಧೂರ್:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ 26 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿತು. ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ದಾಳಿಯೇ ಆಪರೇಷನ್ ಸಿಂಧೂರ್. ಮೇ 7ರ ಮುಂಜಾನೆ ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದವು. ಅದರ ನಂತರ ಪಾಕಿಸ್ತಾನವು ಮೇ 8, 9 ಮತ್ತು 10ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಡ್ರೋನ್ ದಾಳಿಗಳನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿತು. 26 ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಮಾಡಿದ ಪ್ರಯತ್ನಗಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮೇ 10ರಂದು 8 ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








