ನಿಮ್ಮ ಅಮೆರಿಕ ವೀಸಾ ಸಂದರ್ಶನ ರದ್ದಾಗಿದೆಯೇ? ಕಾರಣ ಇಲ್ಲಿದೆ ನೋಡಿ
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ 2,000 ವೀಸಾ ನೇಮಕಾತಿಗಳನ್ನು ಏಕೆ ರದ್ದುಗೊಳಿಸುತ್ತಿದೆ? ಎಂಬ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ. ಈಗಾಗಲೇ ಭಾರತದಲ್ಲಿನ 2,000ಕ್ಕೂ ಹೆಚ್ಚು ವೀಸಾ ನೇಮಕಾತಿಗಳನ್ನು ಅಮೆರಿಕ ರಾಯಭಾರ ಕಚೇರಿ ರದ್ದುಗೊಳಿಸಿದೆ. ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ವಂಚನೆಯ ಚಟುವಟಿಕೆಗಳನ್ನು ನಿಯಂತ್ರಿಸಲು 2,000ಕ್ಕೂ ಹೆಚ್ಚು ವೀಸಾ ನೇಮಕಾತಿಗಳನ್ನು ರದ್ದುಗೊಳಿಸಿದೆ ಎಂದು ಬುಧವಾರ ಘೋಷಿಸಿತು.

ನವದೆಹಲಿ, ಮಾರ್ಚ್ 28: “ಕಾನ್ಸುಲರ್ ಟೀಮ್ ಇಂಡಿಯಾ ಬಾಟ್‌ಗಳು ಮಾಡಿದ ಸುಮಾರು 2,000 ವೀಸಾ ನೇಮಕಾತಿಗಳನ್ನು ಅಮೆರಿಕ ರಾಯಭಾರ ಕಚೇರಿ ರದ್ದುಗೊಳಿಸಿದೆ. ನಮ್ಮ ವೇಳಾಪಟ್ಟಿ ನೀತಿಗಳನ್ನು ಉಲ್ಲಂಘಿಸುವ ಏಜೆಂಟ್‌ಗಳು ಮತ್ತು ಫಿಕ್ಸರ್‌ಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ” ಎಂದು ಅಮೆರಿಕ ರಾಯಭಾರ ಕಚೇರಿ (US Embassy) ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಬಾಟ್ ಮೂಲಕ ಬ್ಲಾಕ್ ಮಾಡಲಾಗಿದ್ದ ವೀಸಾ ಇಂಟರ್‌ವ್ಯೂ ಅಪಾಯಿಂಟ್‌ಮೆಂಟ್‌ಗಳನ್ನು ಅಮೆರಿಕ ರಾಯಭಾರ ಕಚೇರಿ ಕ್ಯಾನ್ಸಲ್ ಮಾಡಿದೆ. “ತಕ್ಷಣವೇ ಜಾರಿಗೆ ಬರುವಂತೆ ನಾವು ಈ ನೇಮಕಾತಿಗಳನ್ನು ರದ್ದುಗೊಳಿಸುತ್ತಿದ್ದೇವೆ ಮತ್ತು ಸಂಬಂಧಿತ ಖಾತೆಗಳ ವೇಳಾಪಟ್ಟಿ ಸವಲತ್ತುಗಳನ್ನು ಅಮಾನತುಗೊಳಿಸುತ್ತಿದ್ದೇವೆ” ಎಂದಿದ್ದಾರೆ.
ಒಂದು ವಾರದ ಹಿಂದೆ ದೆಹಲಿ ಪೊಲೀಸ್ ಅಪರಾಧ ವಿಭಾಗವು ಯುಎಸ್ ರಾಯಭಾರ ಕಚೇರಿಯ ದೂರಿನ ನಂತರ, ಪ್ರಾಥಮಿಕವಾಗಿ ಪಂಜಾಬ್ ಮತ್ತು ಹರಿಯಾಣದಿಂದ ಕಾರ್ಯನಿರ್ವಹಿಸುತ್ತಿರುವ ಹಲವಾರು ವೀಸಾ ಮತ್ತು ಪಾಸ್‌ಪೋರ್ಟ್ ಏಜೆಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಫೆಬ್ರವರಿ 27ರಂದು ಪ್ರಕರಣ ದಾಖಲಾಗಿದೆ. ಈ ದೂರಿನಲ್ಲಿ ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯ ಪ್ರತಿನಿಧಿಯೊಬ್ಬರು ವೀಸಾ ಏಜೆಂಟ್‌ಗಳ ವಂಚನೆಯ ಚಟುವಟಿಕೆಗಳನ್ನು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ: ಉನ್ನತ ಮಟ್ಟದ ಕೆಲಸಗಾರರು ಅಮೆರಿಕಕ್ಕೆ ಬರಬೇಕು, ಎಚ್1ಬಿ ವೀಸಾ ಬೇಕು: ಡೊನಾಲ್ಡ್ ಟ್ರಂಪ್
ಅಮೆರಿಕ ರಾಯಭಾರಿ ಕಚೇರಿಯು ನೀಡಿದ ದೂರನ್ನು ಆಧರಿಸಿ ವಂಚನೆಯ ಕೃತ್ಯಗಳಲ್ಲಿ ತೊಡಗಿದ್ದ ಆರೋಪದಲ್ಲಿ ಹಲವಾರು ವೀಸಾ ಹಾಗೂ ಪಾಸ್ಪೋರ್ಟ್ ಏಜೆಂಟರುಗಳ ವಿರುದ್ಧ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಮೊಕದ್ದಮೆ ದಾಖಲಿಸಿದ 1 ತಿಂಗಳ ಬಳಿಕ ಈ ಬೆಳವಣಿಗೆಯಾಗಿದೆ. ಈ ಏಜೆಂಟರುಗಳ ಪೈಕಿ ಹೆಚ್ಚಿನವರು ಪಂಜಾಬ್ ಹಾಗೂ ಹರಿಯಾಣ ರಾಜ್ಯದವರೆಂದು ತಿಳಿದುಬಂದಿದೆ.
Consular Team India is canceling about 2000 visa appointments made by bots. We have zero tolerance for agents and fixers that violate our scheduling policies. pic.twitter.com/ypakf99eCo
— U.S. Embassy India (@USAndIndia) March 26, 2025
ಸಾಮಾನ್ಯವಾಗಿ B1/B2 ವೀಸಾಗೆ 6ಕ್ಕಿಂತ ಹೆಚ್ಚು ತಿಂಗಳು ಕಾಯಬೇಕು. ಆದರೆ, 30ರಿಂದ 35,000 ರೂಪಾಯಿ ಕೊಟ್ಟರೆ ಒಂದು ತಿಂಗಳಿನಲ್ಲಿ ವೀಸಾ ಸಿಗುತ್ತದೆ ಎನ್ನಲಾಗಿದೆ. ಏಜೆಂಟ್‌ಗಳು ಕಂಪ್ಯೂಟರ್ ಬಾಟ್‌ಗಳನ್ನು ಬಳಸಿ ಸಂದರ್ಶನಕ್ಕೆ ಡೇಟ್ ಫಿಕ್ಸ್ ಮಾಡುವುದರಿಂದ ಮ್ಯಾನುವಲ್ ಆಗಿ ವೀಸಾ ಪಡೆಯಲು ಮುಂದಾಗುವವರಿಗೆ ಹತ್ತಿರದಲ್ಲಿ ಸಂದರ್ಶನಕ್ಕೆ ಯಾವುದೇ ದಿನಾಂಕಗಳು ಕಾಣಿಸುವುದಿಲ್ಲ. 2023ರಲ್ಲಿ B1/B2 ವೀಸಾ ಅಪಾಯಿಂಟ್‌ಮೆಂಟ್‌ಗಾಗಿ 999 ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ಬಂದಿತ್ತು. ಆಗ ಅಮೆರಿಕ ಫ್ರಾಂಕ್‌ಫರ್ಟ್ ಮತ್ತು ಬ್ಯಾಂಕಾಕ್‌ನಲ್ಲಿರುವ ತನ್ನ ರಾಯಭಾರಿ ಕಚೇರಿಗಳಲ್ಲಿ ಭಾರತೀಯರಿಗೆ ವೀಸಾ ಅಪಾಯಿಂಟ್‌ಮೆಂಟ್‌ಗಳನ್ನು ಶುರು ಮಾಡಿತ್ತು.
ಇದನ್ನೂ ಓದಿ: ರೈಲು ಎಂಜಿನ್ ವಾಹನಗಳ ತಯಾರಿಕೆಯಲ್ಲಿ ಅಮೆರಿಕ, ಯೂರೋಪ್ ಅನ್ನು ಮೀರಿಸಿದ ಭಾರತ
H1-B ವೀಸಾ ಬ್ಯಾಕ್‌ಲಾಗ್:
ಉದ್ಯೋಗದಾತರು ಮತ್ತು ಪ್ರತಿನಿಧಿಗಳು H-1B ವೀಸಾ ನೋಂದಣಿಗಾಗಿ ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ (USCIS) ಆನ್‌ಲೈನ್ ಖಾತೆಯನ್ನು ಬಳಸಬೇಕು. 2026ರ ಆರ್ಥಿಕ ವರ್ಷಕ್ಕೆ H-1B ವೀಸಾ ಕ್ಯಾಪ್‌ಗಾಗಿ ಆರಂಭಿಕ ನೋಂದಣಿಯನ್ನು ಇತ್ತೀಚೆಗೆ ಮಾರ್ಚ್ 24ರಂದು ಮುಚ್ಚಲಾಯಿತು. ಪ್ರವಾಸಿಗರು ಮತ್ತು ವ್ಯವಹಾರಗಳಿಗೆ ಮೀಸಲಾದ H-B1 ಮತ್ತು H-B2 ವೀಸಾಗಳು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬ್ಯಾಕ್‌ಲಾಗ್‌ಗಳನ್ನು ಕಂಡಿವೆ. 2022-23ರಲ್ಲಿ ಕಾಯುವ ಸಮಯ 800ರಿಂದ 1,000 ಕೆಲಸದ ದಿನಗಳವರೆಗೆ ಇತ್ತು.
2022ರಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗೆ ವೀಸಾ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅವರು ಬ್ಯಾಕ್‌ಲಾಗ್‌ಗೆ ಕೋವಿಡ್ -19 ಸಾಂಕ್ರಾಮಿಕ ರೋಗ ಕಾರಣ ಎಂದು ಹೇಳಿದ್ದರು. ಮಾರ್ಚ್‌ನಲ್ಲಿ ಯುಎಸ್ ವಿದೇಶಾಂಗ ಇಲಾಖೆ ಏಪ್ರಿಲ್ 2025ರ ವೀಸಾ ಬುಲೆಟಿನ್ ಅನ್ನು ಏಪ್ರಿಲ್ 11ರಂದು ಬಿಡುಗಡೆ ಮಾಡಲಾಗಿದ್ದು, ವಲಸೆ ವೀಸಾ ವಿಭಾಗಗಳಿಗೆ ಉದ್ಯೋಗ ಆಧಾರಿತ (EB) ಕುರಿತು ಪ್ರಮುಖ ನವೀಕರಣಗಳನ್ನು ಪ್ರಕಟಿಸಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಮೇಲೆ ಅಮೆರಿಕದ ವಲಸೆ ನೀತಿ ಕಠಿಣವಾಗುತ್ತಿದೆ. ಅಮೆರಿಕ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ