
ನವದೆಹಲಿ, ಜುಲೈ 8: ದಿನಕ್ಕೊಂದು ಹೇಳಿಕೆ ನೀಡುತ್ತಾ, ಮನಬಂದಂತೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇರಾನ್ ಕದನವಿರಾಮಕ್ಕೆ ಒಪ್ಪುವವರೆಗೂ ಬೆಂಬಿಡದೆ ಕಾಡಿದ್ದ, ಒಪ್ಪದಿದ್ದರೆ ದೇಶವನ್ನೇ ನಾಶಪಡಿಸುವುದಾಗಿ ಬೆದರಿಕೆಯೊಡ್ಡಿದ್ದ ಟ್ರಂಪ್ ಇದೀಗ ಎರಡೂ ದೇಶಗಳ ನಡುವಿನ ಕದನವಿರಾಮ (Iran-US Ceasefire) ಅಂತ್ಯಗೊಂಡಿದೆ ಎಂದು ಘೋಷಿಸಿದ್ದಾರೆ. ಅತ್ತ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ ನಡೆಸಿದ್ದರೆ ಇತ್ತ ಅಮೆರಿಕ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದಾರೆ. ಇವರಿಬ್ಬರ ಜಗಳದಿಂದ ಬಹ್ರೇನ್, ಕುವೈತ್ ಮೇಲೂ ಮತ್ತೆ ಇರಾನ್ ದಾಳಿ ಆರಂಭವಾಗಿದೆ. ಮತ್ತೆ ಇರಾನ್ ಮತ್ತು ಅಮೆರಿಕದ ನಡುವೆ ಆರಂಭವಾಗಿರುವ ಈ ಮಿಲಿಟರಿ ದಾಳಿಯ ಬಿಸಿ ಭಾರತಕ್ಕೂ ತಟ್ಟಲಿದೆ. ಹಾಗಾದರೆ, ಮತ್ತೊಮ್ಮೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದರೆ ಅದರಿಂದ ಭಾರತದ ಮೇಲಾಗುವ ಪರಿಣಾಮಗಳೇನು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಇರಾನ್ ಜೊತೆ ಇನ್ಮುಂದೆ ಶಾಂತಿ ಮಾತುಕತೆಯ ಮಾತೇ ಇಲ್ಲ, ಕದನವಿರಾಮ ಅಂತ್ಯಗೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಸಹಜವಾಗಿಯೇ ಬೇರೆ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಈ ಎರಡೂ ದೇಶಗಳ ಯುದ್ಧದ ಪರಿಣಾಮವನ್ನು ಎದುರಿಸಿರುವ ದೇಶಗಳು ಕದನವಿರಾಮದ ಬಳಿಕ ನಿಟ್ಟುಸಿರು ಬಿಟ್ಟಿದ್ದವು. ಇದೀಗ ಮತ್ತೆ ಯುದ್ಧ ಆರಂಭವಾಗುವ ಲಕ್ಷಣಗಳು ಹೆಚ್ಚಾಗಿರುವುದರಿಂದ ಇತರೆ ದೇಶಗಳು ಕೂಡ ಚಿಂತಿತವಾಗಿವೆ. ಅದಕ್ಕೆ ಭಾರತವೂ ಹೊರತಾಗಿಲ್ಲ.
ಇದನ್ನೂ ಓದಿ: US-Iran War: ಬಹ್ರೇನ್, ಕುವೈತ್‌ನಲ್ಲಿ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಇರಾನ್ ರಾಕೆಟ್ ದಾಳಿ, ಡ್ರೋನ್ ಧ್ವಂಸ
ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಸೃಷ್ಟಿಯಾಗಿರುವ ಭೀಕರ ಮಿಲಿಟರಿ ಸಂಘರ್ಷ ಹಾಗೂ ಕದನ ವಿರಾಮದ ಅಂತ್ಯ ಜಾಗತಿಕವಾಗಿ ತಲ್ಲಣ ಸೃಷ್ಟಿಸಿದೆ. ಈ ಉದ್ವಿಗ್ನತೆಯು ಜಾಗತಿಕವಾದ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಮಾತ್ರವಲ್ಲದೆ, ಭಾರತದ ಮೇಲೂ ಅತ್ಯಂತ ಗಂಭೀರವಾದ ನೇರ ಪರಿಣಾಮಗಳನ್ನು ಬೀರುತ್ತದೆ.
ಭಾರತದ ಮೇಲಾಗುವ ಪರಿಣಾಮಗಳೇನು?
ಕಚ್ಚಾ ತೈಲ ಬೆಲೆಯ ಏರಿಕೆ:
ಭಾರತವು ತನ್ನ ಒಟ್ಟು ಇಂಧನದ ಶೇ. 80ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇರಾನ್-ಇಸ್ರೇಲ್-ಅಮೆರಿಕದ ನಡುವೆ ಯುದ್ಧ ಆರಂಭವಾದಾಗಿನಿಂದ ಭಾರತಕ್ಕೆ ಗಲ್ಫ್ ದೇಶಗಳಿಂದ ಇಂಧನದ ಪೂರೈಕೆಯ ಸಮಸ್ಯೆ ಉಂಟಾಗಿ ಭಾರತದಲ್ಲಿ ಇಂಧನದ ಬಿಕ್ಕಟ್ಟು ತಲೆದೋರಿತ್ತು. ಹೀಗಾಗಿ, ಇದೀಗ ಮತ್ತೆ ಅದೇ ಪರಿಸ್ಥಿತಿ ಉಂಟಾಗುವ ಆತಂಕ ಭಾರತಕ್ಕೆ ಎದುರಾಗಿದೆ.
ರೂಪಾಯಿ ಮೌಲ್ಯ ಕುಸಿತ:
ಇರಾನ್ ಮತ್ತು ಅಮೆರಿಕದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾದಾಗ ವಿದೇಶಿ ಹೂಡಿಕೆದಾರರು ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ ತಮ್ಮ ಹಣವನ್ನು ಹಿಂತೆಗೆದುಕೊಂಡು, ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಅಮೆರಿಕನ್ ಡಾಲರ್ ಮೇಲೆ ಹೂಡಿಕೆ ಮಾಡುತ್ತಾರೆ. ಇದರಿಂದ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಭಾರೀ ಹೊಡೆತ ಬೀಳುತ್ತದೆ. ಅಲ್ಲದೆ, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕೂಡ ಭಾರಿ ಪ್ರಮಾಣದಲ್ಲಿ ಕುಸಿಯುತ್ತದೆ. ಇದರಿಂದ ಭಾರತ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆಯ ಹೊರೆಯೂ ಹೆಚ್ಚಾಗುತ್ತದೆ.
ಎರಡೂ ದೇಶಗಳ ಗೆಳೆಯ ಭಾರತ:
ಮೊದಲೇ ಹೇಳಿದಂತೆ ಭಾರತ ಎಲ್ಲ ದೇಶಗಳೊಂದಿಗೆ ಅತ್ಯುತ್ತಮ ಸ್ನೇಹ ಸಂಬಂಧವನ್ನು ಹೊಂದಿದೆ. ಭಾರತಕ್ಕೆ ಅಮೆರಿಕ ಮತ್ತು ಇರಾನ್ ಎರಡೂ ದೇಶಗಳೂ ಆಪ್ತ ದೇಶಗಳೇ ಆಗಿವೆ. ಅಮೆರಿಕ ಭಾರತದ ಅತಿ ದೊಡ್ಡ ಆರ್ಥಿಕ, ತಾಂತ್ರಿಕ ಮತ್ತು ರಕ್ಷಣಾ ಪಾಲುದಾರ ರಾಷ್ಟ್ರವಾಗಿದ್ದರೆ, ಪಶ್ಚಿಮ ಏಷ್ಯಾದ ಸಂಪರ್ಕಕ್ಕೆ ಮತ್ತು ಇಂಧನ ಸುರಕ್ಷತೆಗೆ ಭಾರತಕ್ಕೆ ಇರಾನ್‌ನ ಬೆಂಬಲ ಬೇಕೇ ಬೇಕು. ಹೀಗಾಗಿ, ಆ ಎರಡೂ ದೇಶಗಳ ನಡುವೆ ಯುದ್ಧ ಉಂಟಾದರೆ ಭಾರತ ಕೂಡ ಯಾವ ದೇಶಕ್ಕೆ ಬೆಂಬಲ ನೀಡಬೇಕೆಂಬ ಸಂದಿಗ್ಧತೆಗೆ ಸಿಲುಕುತ್ತದೆ. ಇದು ಜಾಗತಿಕವಾಗಿ ಭಾರತದ ಇಮೇಜ್ ಮೇಲೂ ಪರಿಣಾಮ ಬೀಡುವ ಸಾಧ್ಯತೆ ಇರುತ್ತದೆ.
ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು:
ಕದನವಿರಾಮದ ಮುಖ್ಯವಾದ ಷರತ್ತೇ ಹಾರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿತ್ತು. ಇದೀಗ ಈ ಒಪ್ಪಂದವೇ ರದ್ದಾಗಿರುವುದರಿಂದ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದು ಖಚಿತ. ಇದರಿಂದ ಭಾರತದ ಇಂಧನದ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಜಾಗತಿಕವಾಗಿಯೂ ತೈಲದ ಬೆಲೆಗಳು ದುಪ್ಪಟ್ಟಾಗುತ್ತವೆ. ಕಚ್ಚಾತೈಲದ ಬೆಲೆಯ ಏರಿಕೆ ಭಾರತದ ಆಮದು ವೆಚ್ಚವನ್ನು ಹೆಚ್ಚಿಸುತ್ತದೆ. ತೈಲದ ಬೆಲೆ ಹೆಚ್ಚಾದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಗಗನಕ್ಕೇರುತ್ತವೆ. ಇದು ಸರಕು ಸಾಗಣೆ ವೆಚ್ಚವನ್ನು ಹೆಚ್ಚಿಸಿ, ದೇಶದಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ
ಅನಿವಾಸಿ ಭಾರತೀಯರ ಸುರಕ್ಷತೆಗೆ ತೊಂದರೆ:
ಪಶ್ಚಿಮ ಏಷ್ಯಾ ಅಥವಾ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 85 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಈಗಾಗಲೇ ಅಮೆರಿಕದ ನೆಲೆಗಳಿರುವ ಬಹ್ರೇನ್ ಮತ್ತು ಕುವೈತ್ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದರಿಂದ ಗಲ್ಫ್ ಪ್ರದೇಶದಲ್ಲಿರುವ ಭಾರತೀಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಅಲ್ಲಿ ಯುದ್ಧದ ಪರಿಸ್ಥಿತಿ ಉಲ್ಬಣಿಸಿದರೆ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬರಬೇಕಾದ ಸವಾಲು ಕೂಡ ಭಾರತಕ್ಕೆ ಎದುರಾಗಲಿದೆ.
ಚಾಬಹಾರ್ ಬಂದರು ಯೋಜನೆಗೆ ಸಂಕಷ್ಟ:
ಭಾರತವು ಇರಾನ್‌ನಲ್ಲಿ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಮೂಲಕ ಪಾಕಿಸ್ತಾನದ ಮಾರ್ಗವನ್ನು ಬಿಟ್ಟು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ದೇಶಗಳಿಗೆ ವ್ಯಾಪಾರ ಸಂಪರ್ಕ ಹೊಂದುವುದು ಭಾರತದ ಗುರಿಯಾಗಿದೆ. ಆದರೆ, ಇದೀಗ ಅಮೆರಿಕವು ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದರೆ, ದಾಳಿಗಳನ್ನು ಮುಂದುವರೆಸಿದರೆ ಭಾರತವು ಚಾಬಹಾರ್ ಬಂದರಿನ ಕೆಲಸ ಮಾಡುವುದು ಕಷ್ಟವಾಗುತ್ತದೆ. ಈ ಯೋಜನೆಗೆ ಭಾರತ ಮಾಡಿರುವ ಹೂಡಿಕೆಯೂ ವಾಪಾಸ್ ಬರುವುದಿಲ್ಲ.
ಈ ಎಲ್ಲ ಕಾರಣಗಳಿಂದ ಇರಾನ್ ಮತ್ತು ಅಮೆರಿಕದ ನಡುವಿನ ಯುದ್ಧ ಭಾರತಕ್ಕೂ ಅನೇಕ ಸವಾಲುಗಳನ್ನು ಒಡ್ಡುವುದಂತೂ ಖಚಿತ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವಾಗಿ ಆರಂಭವಾದ ಈ ಯುದ್ಧದಲ್ಲಿ ಅಮೆರಿಕ ಮಧ್ಯದಲ್ಲಿ ಎಂಟ್ರಿ ಕೊಟ್ಟಿತ್ತು. ಇದೀಗ ಇಸ್ರೇಲ್ ಕೊಂಚ ಹಿಂದೆ ಸರಿದು, ಸೈಲೆಂಟ್ ಆಗಿದ್ದರೂ ಅಮೆರಿಕ ಮಾತ್ರ ಇರಾನ್‌ನ ಬೆನ್ನತ್ತಿದೆ. ಇದೀಗ ಈ ಯುದ್ಧ ಇರಾನ್ ಮತ್ತು ಅಮೆರಿಕದ ನಡುವೆ ದೊಡ್ಡ ಬಿರುಕನ್ನು ಉಂಟುಮಾಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Wed, 8 July 26