ವಾರಣಾಸಿ ಏರ್​ಪೋರ್ಟ್​ನಲ್ಲಿ ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಫೈರ್ ಆದ ಬಂದೂಕು; ಇಬ್ಬರು ಸಿಬ್ಬಂದಿಗೆ ಗಾಯ

Varanasi International Airport witnesses accidental firing during security screening: ಉತ್ತರಪ್ರದೇಶದ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಸಿಬ್ಬಂದಿಯಿಂದ ಪಿಸ್ತೂಲ್ ಪರಿಶೀಲಿಸುವಾಗ ಅಕಸ್ಮಿಕವಾಗಿ ಫೈರಿಂಗ್ ಆದ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಸ್ಕ್ರೀನರ್ ಸಿಬ್ಬಂದಿಗೆ ಗಾಯವಾಗಿದೆ. ಕಮಲೇಶ್ ರೈ ಎನ್ನುವ ಪ್ರಯಾಣಿಕರು ತಮ್ಮಲ್ಲಿದ್ದ ಲೈಸೆನ್ಸ್ಡ್ ಬಂದೂಕನ್ನು ತಪಾಸಣೆಗೆಂದು ಸಿಬ್ಬಂದಿಗೆ ಕೊಟ್ಟಿದ್ದರೆನ್ನಲಾಗಿದೆ.

ವಾರಣಾಸಿ ಏರ್​ಪೋರ್ಟ್​ನಲ್ಲಿ ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಫೈರ್ ಆದ ಬಂದೂಕು; ಇಬ್ಬರು ಸಿಬ್ಬಂದಿಗೆ ಗಾಯ
ವಾರಣಾಸಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
Image Credit source: Nicolas Economou/NurPhoto via Getty Images

Updated on: Aug 16, 2026 | 2:13 PM

ವಾರಣಾಸಿ, ಆಗಸ್ಟ್ 16: ವಿಮಾನ ಪ್ರಯಾಣಿಕರೊಬ್ಬರು ಭದ್ರತಾ ತಪಾಸಣೆ ವೇಳೆ ತಮ್ಮಲ್ಲಿದ್ದ ಪಿಸ್ತೂಲನ್ನು ಆಕಸ್ಮಿಕವಾಗಿ ಫೈರ್ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆ ಉತ್ತರಪ್ರದೇಶದ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Varanasi international airport) ಇಂದು (ಆಗಸ್ಟ್ 16) ಸಂಭವಿಸಿದೆ. ಮುಂಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ (IX-1810) ಪ್ರಯಾಣಿಕರೊಬ್ಬರು ತಂದಿದ್ದ ಪಿಸ್ತೂಲು ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಸಿಡಿದಿದೆ. ಇದು ಪರವಾನಗಿ ಪಡೆದ ಪಿಸ್ತೂಲ್ ಎಂಬುದು ಗೊತ್ತಾಗಿದೆ.

ಭಾನುವಾರ ಬೆಳಗ್ಗೆ ಸುಮಾರು 9:30 ಗಂಟೆಗೆ ವಿಮಾನ ನಿಲ್ದಾಣದ ಭದ್ರತಾ ತಪಾಸಣಾ ವಿಭಾಗದಲ್ಲಿ ಈ ಘಟನೆ ನಡೆದಿದೆ. ಅಜಂಗಢ ಜಿಲ್ಲೆಯ ನಿವಾಸಿ ಕಮಲೇಶ್ ರಾಯ್ (Kamlesh Rai) ಅವರು ಈ ಘಟನೆಗೆ ಕಾರಣರಾದ ಪ್ರಯಾಣಿಕರು ಎನ್ನಲಾಗಿದೆ. ಕಮಲೇಶ್ ತನ್ನ ಪತ್ನಿಯೊಂದಿಗೆ ವಿಮಾನ ಪ್ರಯಾಣಕ್ಕೆ ಸಿದ್ಧರಾಗಿದ್ದರು. ಅವರು ನಿಯಮದಂತೆ ತಮ್ಮ ಬಳಿ ಇರುವ ಲೈಸೆನ್ಸ್ಡ್ ಬಂದೂಕಿನ ಬಗ್ಗೆ ಘೋಷಣೆ ಮಾಡಿದ್ದರು. ಭದ್ರತಾ ಸಿಬ್ಬಂದಿ (AAICLAS) ಬಂದೂಕನ್ನು ತಪಾಸಣೆ ಮಾಡುತ್ತಿದ್ದಾಗ, ಅದು ಆಕಸ್ಮಿಕವಾಗಿ ಸಿಡಿದಿದೆ.

ಬಂದೂಕು ಸಿಡಿದ ಪರಿಣಾಮ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಒಬ್ಬ ಮಹಿಳಾ ಸಿಬ್ಬಂದಿಯ ಕಾಲಿಗೆ ಮತ್ತು ಮತ್ತೊಬ್ಬ ಸಿಬ್ಬಂದಿಯ ಕೈಬೆರಳಿಗೆ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನೂ ಕೂಡಲೇ ಹತ್ತಿರದ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರಿಬ್ಬರೂ ತೀರಾ ಅಪಾಯಕಾರಿ ಸ್ಥಿತಿಯಲ್ಲಿ ಇಲ್ಲ ಎನ್ನುವುದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ.

ಇದನ್ನೂ ಓದಿ: ‘ನಾನು ಭ್ರಷ್ಟ ಅಲ್ಲ’- ಮಮತಾ ಬ್ಯಾನರ್ಜಿ ಆಪ್ತ ಆಶಿಶ್ ಬ್ಯಾನರ್ಜಿ ಡೆತ್​ನೋಟ್ ಬರೆದಿಟ್ಟು ಸಾವು

ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಆಕಸ್ಮಿಕ ಘಟನೆಯಾಗಿದ್ದು, ಭದ್ರತಾ ಪ್ರೋಟೋಕಾಲ್‌ಗಳ ಅನುಸಾರ ಬಂದೂಕು ಹಸ್ತಾಂತರದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us