Farmers Protest: ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸ್ಥಳೀಯ ಹಳ್ಳಿಗಳ ಜನರ ಆಕ್ರೋಶ; 10 ದಿನ ಗಡುವು ಕೊಟ್ಟ ಗ್ರಾಮಸ್ಥರು
ಸಿಂಘು ಗಡಿಯ ಅಕ್ಕಪಕ್ಕದ ಹಳ್ಳಿಗಳ ಜನರೇ ಇದೀಗ ಒಂದಾಗಿ ಮಹಾಪಂಚಾಯತ್ ನಡೆಸಿದ್ದು, ಇಲ್ಲಿ ಮಾಡಲಾದ ರಸ್ತೆ ತಡೆಯನ್ನು ಕೂಡಲೇ ತೆರವುಗೊಳ್ಳಿಸಬೇಕು. ಸ್ಥಳೀಯ ಆಡಳಿತಗಳು ಕ್ರಮ ಕೈಗೊಳ್ಳಬೇಕು ಎಂದೂ ಬೇಡಿಕೆ ಮುಂದಿಟ್ಟಿದ್ದಾರೆ.
ಚಂಡೀಗಢ್: ಕೇಂದ್ರ ಸರ್ಕಾರದ ವಿರುದ್ಧ ಕಳೆದ 7 ತಿಂಗಳುಗಳಿಂದಲೂ ದೆಹಲಿಯ ಗಡಿಭಾಗದ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ದೆಹಲಿ, ಹರ್ಯಾಣಗಳ ಹಳ್ಳಿಗಳ ಜನರು ತಿರುಗಿಬಿದ್ದಿದ್ದಾರೆ. ಸಿರ್ಸಾ, ಸೋನಿಪತ್ಗಳಲ್ಲಿ ರೈತರ ವಿರುದ್ಧ ಮಹಾಪಂಚಾಯತ್ ನಡೆಸುತ್ತಿದ್ದಾರೆ. ಈ ಮಹಾಪಂಚಾಯತ್ನಲ್ಲಿ ದೆಹಲಿಯ 15 ಮತ್ತು ಹರ್ಯಾಣದ 12 ಹಳ್ಳಿಗಳ ಜನರಿದ್ದಾರೆ. ಸಿಂಘು ಗಡಿಯಲ್ಲಿ ರಸ್ತೆ ದಿಗ್ಬಂಧನವನ್ನು ತೆಗೆಯುವಂತೆ ರೈತರನ್ನು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಾವಿರಾರು ರೈತರು ದೆಹಲಿಯ ಗಡಿಗಳಲ್ಲಿ ಇವತ್ತಿಗೂ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ ಇದರಿಂದಾಗಿ ನಮಗೆ ತುಂಬ ಕಷ್ಟವಾಗುತ್ತಿದೆ ಎಂದು ಹಳ್ಳಿಗರು ಈಗ ಸಿಡಿದೆದ್ದಿದ್ದಾರೆ. ರೈತರ ಆಂದೋಲನದ ಹೆಸರಲ್ಲಿ ಅನೇಕ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕ್ರಿಯಲ್ಲಿ ನಡೆದ ಅತ್ಯಾಚಾರ, ಬಹದ್ದೂರ್ನಗರದಲ್ಲಿ ವ್ಯಕ್ತಿಯೊಬ್ಬನನ್ನು ಜೀವಂತವಾಗಿ ಸುಟ್ಟಿರುವ ಪ್ರಕರಣವನ್ನು ಉಲ್ಲೇಖಿಸಿರುವ ಗ್ರಾಮಸ್ಥರು ಇದಕ್ಕೆಲ್ಲ ಶೀಘ್ರವೇ ಒಂದು ಅಂತ್ಯಬೇಕು ಎಂದಿದ್ದಾರೆ.
ಸಿಂಘು ಗಡಿಯ ಅಕ್ಕಪಕ್ಕದ ಹಳ್ಳಿಗಳ ಜನರೇ ಇದೀಗ ಒಂದಾಗಿ ಮಹಾಪಂಚಾಯತ್ ನಡೆಸಿದ್ದು, ಇಲ್ಲಿ ಮಾಡಲಾದ ರಸ್ತೆ ತಡೆಯನ್ನು ಕೂಡಲೇ ತೆರವುಗೊಳ್ಳಿಸಬೇಕು. ಸ್ಥಳೀಯ ಆಡಳಿತಗಳು ಕ್ರಮ ಕೈಗೊಳ್ಳಬೇಕು ಎಂದೂ ಬೇಡಿಕೆ ಮುಂದಿಟ್ಟಿದ್ದಾರೆ. ಹಾಗೇ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನಿರ್ಮಾಣವಾದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆಯೂ ಮಹಾಪಂಚಾಯತ್ನಲ್ಲಿ ಚರ್ಚಿಸಿದ್ದಾರೆ.
ಇನ್ನು 10 ದಿನಗಳಲ್ಲಿ ರೈತರು ರಸ್ತೆ ತೆರವು ಮಾಡದೆ ಇದ್ದರೆ ನಾವೂ ಮುಂದಿನ ಹೆಜ್ಜೆ ಇಡುತ್ತೇವೆ. ಇನ್ನಷ್ಟು ದೊಡ್ಡ ಮಟ್ಟದಲ್ಲಿ ರೈತರ ವಿರುದ್ಧ ಮಹಾಪಂಚಾಯತ್ ಹಮ್ಮಿಕೊಂಡು ಕಾರ್ಯತಂತ್ರ ರೂಪಿಸುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ. ರೈತ ಸಂಘಟನೆಗಳಂತೂ ತಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೇಳಿವೆ.
ಇದನ್ನೂ ಓದಿ: Father’s Day 2021: ತಂದೆ ನೆನೆದು ಭಾವುಕರಾದ ಸಚಿನ್; ವಿಶೇಷ ದಿನದಂದು ಕ್ರಿಕೆಟ್ ದೇವರು ಹಂಚಿಕೊಂಡ್ರು ಭಾವನಾತ್ಮಕ ವಿಡಿಯೋ