ನದಿಯ ಕೆಸರಿನಲ್ಲಿ ಕುಡಿಯುವ ನೀರಿಗಾಗಿ ಅರಸುತ್ತಿರುವ ಹಿರಿ ಜೀವ; ವಿಡಿಯೊ ವೈರಲ್

ಹಿರಿಯ ವ್ಯಕ್ತಿಯ ಪಕ್ಕದಲ್ಲಿ ಸ್ಟೀಲ್ ಪಾತ್ರೆ ಕಾಣಿಸುತ್ತದೆ. ಆ ವ್ಯಕ್ತಿ ನೀರು ಸಂಗ್ರಹಿಸಲು ನದಿಗೆ ಹೋಗಿದ್ದರು. ಇಂತಹ ಪರಿಸ್ಥಿತಿಯು ಹಲವಾರು ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವಾಗ ಪ್ರತಿ ಮನೆಗೂ ನಲ್ಲಿ ನೀರನ್ನು ನೀಡುವ...

ನದಿಯ ಕೆಸರಿನಲ್ಲಿ ಕುಡಿಯುವ ನೀರಿಗಾಗಿ ಅರಸುತ್ತಿರುವ ಹಿರಿ ಜೀವ; ವಿಡಿಯೊ ವೈರಲ್
ನೀರಿಗಾಗಿ ನದಿಯ ಕೆಸರಿನಲ್ಲಿ ಅರಸುತ್ತಿರುವ ಹಿರಿ ಜೀವ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 09, 2022 | 9:21 PM

ಲಕ್ನೋ: ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದಲ್ಲಿ ನದಿಯ ಕೆಸರಿನಿಂದ ಹಿರಿಯ ವ್ಯಕ್ತಿಯೊಬ್ಬರನ್ನು ರಕ್ಷಿಸಿದ  ವಿಡಿಯೊವೊಂದು ವೈರಲ್ ಆಗಿದ್ದು, ಕುಡಿಯುವ ನೀರಿನಂತಹ ಮೂಲಭೂತ ಸಂಪನ್ಮೂಲಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕುಡಿಯುವ ನೀರಿಗಾಗಿ ಇನ್ನೂ ಅನೇಕರು ಪ್ರತಿದಿನ ತಮ್ಮ ಪ್ರಾಣವನ್ನು ಪಣಕ್ಕಿಡಬೇಕಾಗಿದೆ. ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಸೊಂಟದವರೆಗೆ ಆಳದಲ್ಲಿ ಹೂಳು ಮರಳಿನಲ್ಲಿ ಮುಳುಗಿರುವುದನ್ನು ಕಾಣಬಹುದು. ಮತ್ತೊಬ್ಬ ವ್ಯಕ್ತಿಯು ಮರದ ಕೋಲನ್ನು ಹಿಡಿದುಕೊಳ್ಳುವಂತೆ ಕೇಳುವ ಮೂಲಕ ಆ ವ್ಯಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಾನೆ. ಹಿರಿಯ ವ್ಯಕ್ತಿಯ ಪಕ್ಕದಲ್ಲಿ ಸ್ಟೀಲ್ ಪಾತ್ರೆ ಕಾಣಿಸುತ್ತದೆ. ಆ ವ್ಯಕ್ತಿ ನೀರು ಸಂಗ್ರಹಿಸಲು ನದಿಗೆ ಹೋಗಿದ್ದರು. ಇಂತಹ ಪರಿಸ್ಥಿತಿಯು ಹಲವಾರು ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವಾಗ ಪ್ರತಿ ಮನೆಗೂ ನಲ್ಲಿ ನೀರನ್ನು ನೀಡುವ ಸರ್ಕಾರದ ಭರವಸೆಯ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನೆಗಳನ್ನು ಎತ್ತಿದ್ದಾರೆ. ಒಬ್ಬ ಪೋಲೀಸ್ ನಗುತ್ತಿರುವ ಮತ್ತು ರಕ್ಷಣಾ ಪ್ರಯತ್ನವನ್ನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡುವುದನ್ನು ಸಹ ಕಾಣಬಹುದು.

ಕೆನ್ ನದಿಯ ದಡಕ್ಕೆ ನೀರು ತರಲು ಹೋದ ಇಬ್ಬರು ಗ್ರಾಮಸ್ಥರು ಕೆಸರು ಗದ್ದೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಗ್ರಾಮಸ್ಥರು ಮತ್ತು ಸ್ಥಳೀಯ ಆಡಳಿತ ಅವರನ್ನು ರಕ್ಷಿಸಿದೆ. ವೈರಲ್ ಆಗಿರುವ ವಿಡಿಯೊ ಹಮೀರ್‌ಪುರ ಜಿಲ್ಲೆಯ ಸಿಸೋಲಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಚಾ ಕಹಾನಿ ಗ್ರಾಮದಲ್ಲಿದೆ ಎಂದು ಹೇಳಲಾಗಿದೆ.

ನಲ್ಲಿಯ ನೀರು ಲವಣಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ, ಹೀಗಾಗಿ ಗ್ರಾಮಸ್ಥರು ನದಿಯಿಂದ ನೀರು ಸೇದುವ ಅನಿವಾರ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. “ನಾವು ಯಾವಾಗಲೂ ಶುದ್ಧ ನೀರಿಗಾಗಿ ನದಿಗೆ ಹೋಗಿದ್ದೇವೆ” ಎಂದು ರಕ್ಷಿಸಲ್ಪಟ್ಟ ವ್ಯಕ್ತಿ ಮತ್ತೊಂದು ವಿಡಿಯೊದಲ್ಲಿ ಹೇಳಿದ್ದಾರೆ.

ನಮಾಮಿ ಗಂಗಾ ಮಿಷನ್‌ಗೆ ಸಂಬಂಧಿಸಿದಂತೆ ರಾಜ್ಯದ ಜಲಶಕ್ತಿ ಸಚಿವರು ಇತ್ತೀಚೆಗೆ ಹಮೀರ್‌ಪುರಕ್ಕೆ ಭೇಟಿ ನೀಡಿದ್ದರು ಮತ್ತು ಶೀಘ್ರದಲ್ಲೇ ನಲ್ಲಿ ನೀರನ್ನು ಪಡೆಯುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು ಎಂದು ಇನ್ನೊಬ್ಬ ಸ್ಥಳೀಯರು ಹೇಳಿದ್ದು, ಇದು ಹೇಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಖಚಿತವಾಗಿಲ್ಲ ಎಂದು ಅವರು ಹೇಳಿದರು.