ಪ್ರೀತಿಗೆ ಸಿಕ್ಕ ಪ್ರತಿಫಲ! ವಿಶಾಖಪಟ್ಟಣದಲ್ಲಿ ಗಂಡನಿಂದ 9 ತಿಂಗಳ ಗರ್ಭಿಣಿ ಪತ್ನಿಯ ಕೊಲೆ
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭೀಕರ ಘಟನೆಯೊಂದು ನಡೆದಿದೆ. ತನ್ನ ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ಪ್ರೇಮವಿವಾಹವಾಗಿದ್ದ ಮಹಿಳೆಯೊಬ್ಬಳು ಇದೀಗ ಅದೇ ಗಂಡನಿಂದ ಶವವಾಗಿದ್ದಾಳೆ. ಇನ್ನೊಂದು ವಾರದಲ್ಲಿ ತಮ್ಮ ಪ್ರೀತಿಯ ಫಲವಾದ ಮಗುವನ್ನು ಹೆರಬೇಕಾಗಿದ್ದ ತುಂಬು ಗರ್ಭಿಣಿ ಮಹಿಳೆ ಹೆಣವಾಗಿ ಬಿದ್ದಿದ್ದಾಳೆ. ತಾನೇ ಹೆಂಡತಿಯನ್ನು ಕೊಂದು ತನಗೇನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ಗಂಡ ಕೊನೆಗೂ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾನೆ.

ವಿಶಾಖಪಟ್ಟಣ, ಏಪ್ರಿಲ್ 14: ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಪಿಎಂ ಪಾಲೆಮ್‌ನ ಉಡಾ ಕಾಲೋನಿಯಲ್ಲಿ ಇಂದು ಬೆಳಿಗ್ಗೆ ಒಬ್ಬ ವ್ಯಕ್ತಿ 8 ತಿಂಗಳ ಗರ್ಭಿಣಿಯಾಗಿದ್ದ ತನ್ನ 27 ವರ್ಷದ ಪತ್ನಿಯನ್ನು ಕೊಂದಿದ್ದಾನೆ. ಅನುಷಾ ಮತ್ತು ಆಕೆಯ ಪತಿ ಜ್ಞಾನೇಶ್ವರ್ ಇಂದು ಬೆಳಿಗ್ಗೆ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದರು. ಇದೇ ಭಾನುವಾರ ವೈದ್ಯರು ಅನುಷಾಳಿಗೆ ಹೆರಿಗೆಗೆ ಆಸ್ಪತ್ರೆಗೆ ಬರಲು ಸೂಚಿಸಿದ್ದರು. ಆದರೆ, ಜ್ಞಾನೇಶ್ವರ್ ಸೋಮವಾರ ಅಡ್ಮಿಟ್ ಆಗೋಣ ಎಂದು ಹಠ ಹಿಡಿದಿದ್ದ. ಇದೇ ವಿಚಾರಕ್ಕೆ ಜಗಳ ಹೆಚ್ಚಾಗಿ ಆತ ಆಕೆ ಕತ್ತು ಹಿಸುಕಿದ್ದಾನೆ. ಇದರಿಂದಾಗಿ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ.
ಅನುಷಾ ಮತ್ತು ಜ್ಞಾನೇಶ್ವರ್ ಮನೆಯವರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಜ್ಞಾನೇಶ್ವರ್ ಮತ್ತು ಅನುಷಾ 3 ವರ್ಷಗಳ ಹಿಂದೆ ಪ್ರೀತಿಯಲ್ಲಿ ಬಿದ್ದ ನಂತರ ವಿವಾಹವಾದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು.
ಇದನ್ನೂ ಓದಿ: ಹೆಂಡತಿಯನ್ನು ಕೊಂದು ಚರಂಡಿಗೆ ಎಸೆದ ಗಂಡ; ಮೂಗುತಿಯಿಂದ ಬಯಲಾಯ್ತು ಕೊಲೆಯ ರಹಸ್ಯ
ನನಗೆ ಕ್ಯಾನ್ಸರ್ ಇದೆ, ನಾನು 1 ವರ್ಷದಲ್ಲಿ ಸಾಯುತ್ತೇನೆ. ನೀನು ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ. ಅಪ್ಪ-ಅಮ್ಮನ ಜೊತೆ ಹೋಗು ಎಂದು ಕೂಡ ಜ್ಞಾನೇಶ್ವರ್ ನಾಟಕವಾಡಿದ್ದ. ಆದರೆ, ಅನುಷಾ ನಿನ್ನೊಂದಿಗೆ ಇರುತ್ತೇನೆ ಎಂದು ಹೇಳಿದ್ದಳು. ಅದಾದ 6 ತಿಂಗಳ ನಂತರ, ಅವನು ಮತ್ತೊಂದು ನಾಟಕವನ್ನು ಪ್ರಾರಂಭಿಸಿದ್ದ. ನನ್ನ ಹೆತ್ತವರಿಗೆ ನಮ್ಮ ಮದುವೆ ಇಷ್ಟವಿಲ್ಲ, ಅವರು ನಿನ್ನನ್ನು ಮತ್ತು ನನ್ನನ್ನು ಬದುಕಲು ಬಿಡುವುದಿಲ್ಲ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳೋಣ ಎಂದು ಕೇಳಿದ್ದ. ಆದರೆ ಅನುಷಾ ಅದಕ್ಕೆ ಒಪ್ಪಲಿಲ್ಲ.
ಜ್ಞಾನೇಶ್ವರ್ ಆಕೆಯನ್ನು ಬಿಟ್ಟು ತನ್ನ ಪೋಷಕರ ಬಳಿ ಹೋಗಲು ನಿರ್ಧರಿಸಿದ್ದ. ಹೀಗಾಗಿ, ಆಕೆಯ ಬಳಿಕ ವಿಚ್ಛೇದನ ಕೇಳುತ್ತಿದ್ದ. ಆದರೆ, ಇದರ ನಡುವೆ ಅನುಷಾ ಗರ್ಭಿಣಿಯಾಗಿದ್ದಳು. ಆಗಲೂ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ.
ಇದನ್ನೂ ಓದಿ: 135 ದಿನಗಳ ಬಳಿಕ ಸಮಾಧಿಯಿಂದ ಮಹಿಳೆಯ ಶವ ಹೊರಕ್ಕೆ, ನಿಗೂಢ ಕೊಲೆ ರಹಸ್ಯ ಬಯಲು
ಇಂದು ಬೆಳಗ್ಗೆ ಆಕೆ ಆತ ಕತ್ತು ಹಿಸುಕಿದ್ದರಿಂದ ಪ್ರಜ್ಞೆ ತಪ್ಪಿದಾಗ ಆಕೆಯ ಮನೆಯವರಿಗೆ ಫೋನ್ ಮಾಡಿ ಅನುಷಾಳಿಗೆ ಹುಷಾರಿಲ್ಲ ಎಂದು ಹೇಳಿದ್ದ. ತಕ್ಷಣ ಬಂದ ಆಕೆಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಜ್ಞಾನೇಶ್ವರ್ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಬಲಿಪಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ