ನವದೆಹಲಿ, ಏಪ್ರಿಲ್ 2: ವಿಸ್ತಾರ ವಿಮಾನಯಾನ (Vistara Airlines) ಸಂಸ್ಥೆಯ ಸಂಕಷ್ಟ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆ ಬೆಂಗಳೂರು (Bangalore) ಸೇರಿದಂತೆ ವಿವಿಧ ನಗರಗಳಿಂದ ಸಂಚರಿಸಬೇಕಿದ್ದ 38 ವಿಮಾನಗಳ ಹಾರಾಟ ರದ್ದುಗೊಂಡಿದೆ. ಪೈಲಟ್‌ಗಳ ಲಭ್ಯತೆಯಿಲ್ಲದ ಕಾರಣ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ಮುಂಬೈನಿಂದ 15 ವಿಮಾನಗಳು, ದೆಹಲಿಯಿಂದ 12 ಮತ್ತು ಬೆಂಗಳೂರಿನಿಂದ 11 ವಿಮಾನಗಳ ಹಾರಾಟ ರದ್ದಾಗಿವೆ. ಸೋಮವಾರ 50 ಕ್ಕೂ ಹೆಚ್ಚು ವಿಸ್ತಾರಾ ವಿಮಾನಗಳ ಸಂಚಾರ ರದ್ದುಗೊಂಡಿತ್ತು. ನಂತರ ಸುಮಾರು 160 ವಿಮಾನಗಳು ವಿಳಂಬವಾಗಿ ಹಾರಾಟ ಆರಂಭಿಸಿದ್ದವು.
ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾಯಬೇಕಾಗಿ ಬಂದಿರುವ ಬಗ್ಗೆ ಪ್ರಯಾಣಿಕರು ಸೋಮವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಮಾನಯಾನ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಸಿಬ್ಬಂದಿ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಗಮನಾರ್ಹ ಸಂಖ್ಯೆಯ ವಿಮಾನ ರದ್ದುಗೊಂಡಿದ್ದು, ಅನೇಕ ವಿಮಾನಗಳು ವಿಳಂಬವಾಗಿ ಸಂಚಾರ ಮಾಡಿವೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ವಿಸ್ತಾರ ವಿಮಾನಯಾನ ಸಂಸ್ಥೆಯ ಪ್ರಕಟಣೆ ಸೋಮವಾರ ತಿಳಿಸಿತ್ತು.
‘ನಮ್ಮ ಗ್ರಾಹಕರಿಗೆ ಅನಾನುಕೂಲತೆ ಆಗಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದಕ್ಕಾಗಿ ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ಪ್ರಯಾಣಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ನಮ್ಮ ತಂಡ ಕೆಲಸ ಮಾಡುತ್ತಿದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಏರ್ ಇಂಡಿಯಾದೊಂದಿಗೆ ವಿಸ್ತಾರ ಏರ್‌ಲೈನ್ ವಿಲೀನಕ್ಕೆ ಮುಂಚಿತವಾಗಿ ಪರಿಷ್ಕೃತ ವೇತನ ಪ್ರಸ್ತಾವ ಕಳುಹಿಸಿರುವುದನ್ನು ಸಂಸ್ಥೆಯ ಪೈಲಟ್ಗಳು ವಿರೋಧಿಸುತ್ತಿದ್ದಾರೆ. ಸಂಸ್ಥೆಯ ಕ್ರಮದಿಂದ ಅಸಮಾಧಾನಗೊಂಡಿರುವ ಪೈಲಟ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯದ ಕಾರಣ ನೀಡಿ ಹಠಾತ್ ರಜೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಒಟ್ಟಾರೆ ಕಾರ್ಯಾಚರಣೆ ಮೇಲೆ ಪರಿಣಾಮ ಉಂಟಾಗಿದೆ.
ಪೈಲಟ್‌ಗಳಿಗೆ ಪರಿಷ್ಕೃತ ವೇತನ ಪ್ರಸ್ತಾವವನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದ್ದು, ಸಹಿ ಮಾಡುವಂತೆ ಸೂಚಿಸಲಾಗಿದೆ. ಸಹಿ ಮಾಡದವರನ್ನು ವಿಲೀನದಿಂದ ಹೊರಗಿಡಲಾಗುವುದು ಎಂದು ಪೈಲಟ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಪರಿಣಾಮವಾಗಿ ಪೈಲಟ್ಗಳು ಅಸಹನೆ ತೋರ್ಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ಸಾವು
ಸದ್ಯ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಯಾಣಿಕರು ಕುಂದುಕೊರತೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ವಿಮಾನ ರದ್ದತಿ ಮತ್ತು ವಿಳಂಬ ಸಂಚಾರಗಳ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ವಿಸ್ತಾರದಿಂದ ವಿವರವಾದ ವರದಿಯನ್ನು ಕೇಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Tue, 2 April 24